Site icon Vistara News

Anant Ambani: ಅನಂತ್‌ ಅಂಬಾನಿ ವಾಚ್‌ ನೋಡಿ ದಂಗಾದ ಜುಕರ್‌ಬರ್ಗ್;‌ ಬೆಲೆ ಎಷ್ಟು ಕೋಟಿ?

Anant Ambani Watch

Anant Ambani's luxury watch leaves Mark Zuckerberg and wife Priscilla Chan awestruck: Video

ಜಾಮ್‌ನಗರ: ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶಗಳ ಗಣ್ಯರ ಉಪಸ್ಥಿತಿ, ಬಾಲಿವುಡ್‌ ನಟ-ನಟಿಯರ ಹಾಡು, ನೃತ್ಯ, ಮೋಜು-ಮಸ್ತಿಯ ಮಧ್ಯೆ ಹೊಸ ಪಯಣಕ್ಕೆ ಅನಂತ್‌ ಹಾಗೂ ರಾಧಿಕಾ ಮುಂದಡಿ ಇಟ್ಟಿದ್ದಾರೆ. ಇನ್ನು, ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ (Mark Zuckerberg) ಹಾಗೂ ಅವರ ಪತ್ನಿ ಪ್ರಿಸಿಲ್ಲಾ ಚಾನ್‌ ಅವರು ಭಾಗವಹಿಸಿದ್ದು, ಅನಂತ್‌ ಅಂಬಾನಿ ಕಟ್ಟಿದ್ದ ಗಡಿಯಾರ ನೋಡಿ ಇಬ್ಬರೂ ದಂಗಾಗಿದ್ದಾರೆ. ಈ ವಿಡಿಯೊ ವೈರಲ್‌ ಆಗುವ ಜತೆಗೆ ಅನಂತ್‌ ಅಂಬಾನಿ ವಾಚ್‌ ಬೆಲೆ ಕುರಿತು ಭಾರಿ ಚರ್ಚೆ ಶುರುವಾಗಿವೆ.

ಹೌದು, ಮಾರ್ಚ್‌ 1ರಿಂದ 3ರವರೆಗೆ ಜಾಮ್‌ನಗರದಲ್ಲಿ ಅದ್ಧೂರಿ ಪ್ರಿವೆಡ್ಡಿಂಗ್‌ ಕಾರ್ಯಕ್ರಮ ನಡೆದಿದೆ. ಇದೇ ವೇಳೆ, ಮಾರ್ಕ್‌ ಜುಕರ್‌ಬರ್ಗ್‌ ಹಾಗೂ ಪ್ರಿಸಿಲ್ಲಾ ಚಾನ್‌ ಜತೆ ಅನಂತ್‌ ಅಂಬಾನಿ ಮಾತನಾಡುತ್ತಿದ್ದರು. ಇದೇ ವೇಳೆ, ಪ್ರಿಸಿಲ್ಲಾ ಚಾನ್‌ ಅವರು ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ ನೋಡಿ ದಂಗಾದರು. ಇದಾದ ಬಳಿಕ, ಮಾರ್ಕ್‌ ಜುಕರ್‌ಬರ್ಗ್‌ ಅವರು ಕೂಡ ಅಂಬಾನಿ ಪುತ್ರನ ವಾಚ್‌ ನೋಡಿ ಅಚ್ಚರಿಪಟ್ಟರು. ವಾಚ್‌ಅನ್ನು ನೋಡಿ, ಅದನ್ನು ಮುಟ್ಟಿ, ಅದರ ಕುರಿತ ಮಾಹಿತಿ ಪಡೆದರು.

ಯಾವುದದು ವಾಚ್? ಬೆಲೆ ಎಷ್ಟು?

ಅನಂತ್‌ ಅಂಬಾನಿ ಅವರು ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಗಡಿಯಾರ ತಯಾರಿಕಾ ಕಂಪನಿಯ ರಿಚರ್ಡ್‌ ಮಿಲ್ಲೆ ವಾಚ್‌ ಧರಿಸಿದ್ದರು. ಇದರ ಬೆಲೆಯು ಸುಮಾರು 45 ಕೋಟಿ ರೂ. ಎಂಬುದಾಗಿ ಅಂದಾಜಿಸಲಾಗಿದೆ. ರಿಚರ್ಡ್‌ ಮಿಲ್ಲೆ ಸರಣಿಯ ವಾಚ್‌ಗಳ ಬೆಲೆಯು ಕೋಟಿ ರೂ. ಲೆಕ್ಕದಲ್ಲಿಯೇ ಇವೆ. ಹಾಗಾಗಿ, ಈ ವಾಚ್‌ ಬೆಲೆ, ಅನಂತ್‌ ಅಂಬಾನಿ ಸಿರಿವಂತಿಕೆ ಸೇರಿ ಹಲವು ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ. ಟ್ರೋಲ್‌ ವಿಡಿಯೊಗಳನ್ನು ಕೂಡ ಅಪ್‌ಲೋಡ್‌ ಮಾಡಲಾಗಿದೆ.

ಇದನ್ನೂ ಓದಿ: Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!

ಮುಕೇಶ್‌ ಅಂಬಾನಿ ಅವರು ಮಗನ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜುಲೈ 12ರಂದು ಮುಂಬೈನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version