Site icon Vistara News

Anant-Radhika Wedding: ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ಚಿನ್ನಾಭರಣ, 1 ಲಕ್ಷ ರೂ.

Anant-Radhika Wedding

Anant-Radhika Wedding

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಜುಲೈ 12ರಂದು ಮುಂಬೈಯಲ್ಲಿ ಈ ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ.

ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿ ಹಸಮಣೆಗೇರಿತು.

ಈ ಸಾಮೂಹಿಕ ವಿವಾಹದಲ್ಲಿ ವಧು-ವರರ ಕುಟುಂಬದ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಶ್ಲೋಕ ಮೆಹ್ತಾ, ಇಶಾ ಅಂಬಾನಿ, ಆನಂದ್‌ ಪಿರಮಾಲ್‌ ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

ಉಡುಗೊರೆ

ಪ್ರತಿ ಜೋಡಿಗೆ ಚಿನ್ನದ ಉಂಗುರ, ಮಂಗಳ ಸೂತ್ರ, ಮೂಗುತ್ತಿ ಉಡುಗೊರೆಯಾಗಿ ನೀಡಲಾಯಿತು. ಜತೆಗೆ ಬೆಳ್ಳಿಯ ಆಭರಗಳನ್ನೂ ನೀಡಲಾಗಿದೆ. ಜತೆಗೆ ಸ್ತ್ರೀಧನವಾಗಿ ಪ್ರತಿ ವಧುವಿಗೆ 1.01 ಲಕ್ಷ ರೂ. ಚೆಕ್‌ ಅನ್ನು ಅಂಬಾನಿ ಕುಟುಂಬಸ್ಥರು ವಿತರಿಸಿದ್ದಾರೆ. ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಇದು ಪಾತ್ರೆ ಪರಿಕರಗಳು, ಗ್ಯಾಸ್‌ ಸ್ಟವ್‌, ಮಿಕ್ಸಿ, ಫ್ಯಾನ್‌, ಹಾಸಿಗೆ ಮತ್ತು ತಲೆ ದಿಂಬುಗಳನ್ನು ಒಳಗೊಂಡಿದೆ. ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಅತಿಥಿಗಳು ಮತ್ತು ಅಂಬಾನಿ ಕುಟುಂಬದ ಸದಸ್ಯರು ವೀಕ್ಷಿಸಿದರು.

ʼʼಜನ ಸೇವೆಯೇ ಜನಾರ್ದನ ಸೇವೆ ಎಂದು ಪರಿಗಣಿಸುವ ಅಂಬಾನಿ ಕುಟುಂಬ ಪ್ರತಿ ಶುಭ ಸಂದರ್ಭದಲ್ಲಿ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಇಂತ ಜನ ಕಲ್ಯಾಣ ಕಾರ್ಯಕ್ರಮಗಳು ಆಯೋಜಿಸುತ್ತದೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

ಜುಲೈ 12ರಂದು ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Exit mobile version