ಮುಂಬೈ: ಶಿವಸೇನೆಯನ್ನು ವಿಭಜಿಸಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂಚೆಯೇ ಸೋಲೋಪ್ಪಿಕೊಂಡಿರುವಂತಿದೆ. ಯಾಕೆಂದರೆ, ಮುಂಬೈ ಅಂಧೇರಿ ಈಸ್ಟ್(Andheri East Byelection) ವಿಧಾನಸಭೆ ಕ್ಷೇತ್ರಕ್ಕೆ ನಡೆಯುತ್ತಿರುವ ಬೈ ಎಲೆಕ್ಷನ್‌ನಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿ ಮತ್ತೆ ಸ್ಪರ್ಧೆಯಿಂದ ಹಿಂಪಡೆದುಕೊಂಡಿದೆ! ಆ ಮೂಲಕ ಉದ್ಧವ್ ಠಾಕ್ರೆ ಎದುರು ಮಂಡಿಯೂರಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಈ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಸಂಬಂಧ ಬಿಜೆಪಿಯೊಳಗೇ ಭಿನ್ನಮತ ಭುಗಿಲೆದ್ದಿದೆ.
ಮೂಲಗಳ ಪ್ರಕಾರ, ಮುಂಬೈ ಬಿಜೆಪಿ ಅಧ್ಯಕ್ಷ ಆಶೀಶ್ ಸೆಲಾರ್ ಅವರು ಅಂಧೇರಿ ಈಸ್ಟ್ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸವ ಬಗ್ಗೆ ಖಚಿತತೆ ಹೊಂದಿದ್ದರು. ಇನ್‌ಫ್ಯಾಕ್ಟ್ ಎಲ್ಲ ಪಕ್ಷಗಳಿಗಿಂತಲೂ ಮುಂಚೆಯೇ ಮುಜಿ ಪಟೇಲ್ ಅವರು ಅಭ್ಯರ್ಥಿಯಾಗಲಿದ್ದಾರೆಂದು ಪ್ರಕಟಿಸಿದ್ದರು. ಆದರೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಸ್ಪರ್ಧೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಅಧಿಕೃತ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿಯಬೇಕಾಯಿತು. ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಈ ಎಲೆಕ್ಷನ್‌ಗೆ ಮುಂಚೆಯೇ ಬೈಎಲೆಕ್ಷನ್‌ನಲ್ಲಿ ಸೋಲುವುದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ. ಹಾಗಾಗಿ, ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಮುಜಿ ಪಟೇಲ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ 42,000 ಮತಗಳನ್ನು ಪಡೆದುಕೊಂಡಿದ್ದರು. ಈಗ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದರಿಂದ ಸಜವಾಗಿಯೇ ಅವರು ಗೆದ್ದೇ ಗೆಲ್ಲುತ್ತಾರೆಂಬ ನಂಬಿಕೆ ಮುಂಬೈ ಬಿಜೆಪಿ ಅಧ್ಯಕ್ಷ ಆಶೀಶ್ ಅವರು ಹೊಂದಿದ್ದರು. ಮತ್ತೊಂದೆಡೆ ತೀವ್ರ ಪ್ರತಿಸ್ಫರ್ಧಿಯಾಗಿರುವ ಉದ್ಧವ್ ಠಾಕ್ರೆ ಬಣದ ಅಭ್ಯರ್ಥಿ ರುತುಜಾ ಲಟ್ಕೆ ಅವರಿಗೆ ಹಳೇ ಶಿವಸೇನೆ ಪಕ್ಷ ಹಾಗೂ ಚಿಹ್ನೆಯ ಬೆಂಬಲವೂ ಇಲ್ಲ. ಹಾಗಾಗಿ, ಬಿಜೆಪಿ ಅಭ್ಯರ್ಥಿಯ ಗೆಲುವಿನ ಪ್ರತಿಶತ ಹೆಚ್ಚಿತ್ತು ಎಂಬ ಲೆಕ್ಕಾಚಾರವಿದೆ.
ಆದರೆ, ಬಿಜೆಪಿಯ ಹಿರಿಯ ನಾಯಕರು ಮಾತ್ರ ಬೇರೆಯದ್ದೇ ಲೆಕ್ಕಾಚಾರ ಹೊಂದಿದ್ದಾರೆ. ಒಂದೊಮ್ಮೆ ಬಿಜೆಪಿಯೇನಾದರೂ ಈ ಬೈಎಲೆಕ್ಷನ್‌ನಲ್ಲಿ ಸೋತರೆ ಅದರ ದುಷ್ಪರಿಣಾವು ಮುಂಬರುವ ಬಿಎಂಸಿ ಎಲೆಕ್ಷನ್ ಮೇಲೆ ಬೀರಲಿದೆ. ಹೇಗಾದರೂ ಮಾಡಿ ಈ ಬಾರಿ ಬಿಎಂಸಿ ಎಲೆಕ್ಷನ್ ಗೆಲ್ಲುವ ಪ್ಲ್ಯಾನ್ ಮಾಡುತ್ತಿರುವ ಬಿಜೆಪಿ, ಸೋಲು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಹಾಗಾಗಿ, ಬೈಎಲೆಕ್ಷನ್‌ನಿಂದ ತಮ್ಮ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗುತ್ತಿದೆ.
ಸ್ಪರ್ಧಿಸದಂತೆ ಬಿಜೆಪಿಗೆ ರಾಜ್ ಠಾಕ್ರೆ ಮನವಿ
ಶಿವಸೇನೆಯ ಹಿರಿಯ ನಾಯಕ ರಮೇಶ್ ಲಟ್ಕೆ ಅವರ ನಿಧನದಿಂದ ತೆರವಾಗಿರುವ ಅಂಧೇರಿ ಈಸ್ಟ್ ವಿಧಾಸಭೆ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ(ಎಂಎನ್ಎಸ್) ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ಗೆ ಪತ್ರ ಬರೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಫಡ್ನವಿಸ್ ಅವರು, ಈ ಬಗ್ಗೆ ಹಿರಿಯ ನಾಯಕರು ತೀರ್ಮಾನಿಸಲಿದ್ದಾರೆಂದು ಹೇಳಿದ್ದರು. ಉದ್ಧವ್ ಠಾಕ್ರೆ ಶಿವಸೇನೆಯ ಅಭ್ಯರ್ಥಿಯಾಗಿ ರುತುಜಾ ಲಟ್ಕೆ ಅವರನ್ನು ಕಣಕ್ಕಿಳಿಸಲಾಗಿದೆ.
ಇದನ್ನೂ ಓದಿ | BJP Meeting | ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ, 2024ರ ಲೋಕಸಭೆ ಎಲೆಕ್ಷನ್‌ಗೆ ಬಿಜೆಪಿ ಸಿದ್ಧತೆ