Site icon Vistara News

Andhra Pradesh: ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡ ಕೌನ್ಸಿಲರ್! ಅವರಿಗೆ ಅಂಥಾದ್ದೇನಾಗಿತ್ತು?

Andhra Councillor

ಅನಕಾಪಲ್ಲಿ, ಆಂಧ್ರ ಪ್ರದೇಶ: ಚುನಾವಣೆ ವೇಳೆ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೌನ್ಸಿಲ್‌ರೊಬ್ಬರು (Councillor) ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡ (Slaps Himself) ಘಟನೆ ಆಂಧ್ರ ಪ್ರದೇಶದ (Andhra Pradesh) ಅನಕಾಪಲ್ಲಿ ಜಿಲ್ಲೆಯಲ್ಲಿ (Anakapalli District) ನಡೆದಿದೆ. ನರಸೀಪಟ್ಟಣ ಪುರಸಭೆಯ (Narsipatnam Municipality) ವಾರ್ಡ್ 20ರ ಕೌನ್ಸಿಲರ್ ಮುಲಪರ್ತಿ ರಾಮರಾಜು (Mulaparthi Ramaraju) ಕೌನ್ಸಿಲ್ ಸಭೆಯಲ್ಲಿ ತಮ್ಮ ಅಸಮಾಧಾನವನ್ನು, ಚಪ್ಪಲಿಯಿಂದ ಹೊಡೆದುಕೊಳ್ಳುವ ಮೂಲಕ ಹೊರ ಹಾಕಿದರು. ಈ ಕೃತ್ಯದ ವಿಡಿಯೋದ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ(Viral Video).

ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ 31 ತಿಂಗಳು ಕಳೆದರೂ ನನ್ನ ವಾರ್ಡ್‌ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಮತ್ತಿತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಮರಾಜು ಅವರು ತಮ್ಮ ಕಪಾಳಮೋಕ್ಷಕ್ಕೆ ನೀಡುತ್ತಿರುವ ಕಾರಣಗಳನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಚಪ್ಪಲಿಯಿಂದ ಕೆನ್ನೆಗೆ ಹೊಡೆದುಕೊಂಡ ಆಂಧ್ರಪ್ರದೇಶದ ಕೌನ್ಸಿಲರ್ ವೈರಲ್ ವಿಡಿಯೋ

ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿರುವ 40 ವರ್ಷ ವಯಸ್ಸಿನ ಕೌನ್ಸಿಲರ್ ಮುಲಪರ್ತಿ ರಾಮರಾಜು ಅವರು, ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಪ್ರಯತ್ನಿಸಿದರು. ಆದರೆ, ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೌನ್ಸಿಲ್ ಸಭೆಯಲ್ಲಿ ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಳ್ಳುವ ಮೂಲಕ ಪಶ್ಚಾತ್ತಾಪಪಟ್ಟುಕೊಂಡರು.

ವಾರ್ಡ್ 20 ಅನ್ನು ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ತಮ್ಮ ವಾರ್ಡಿನ ಯಾವುದೇ ಮತದಾರರಿಗೂ ಒಂದು ವಾಟರ್ ಕನೆಕ್ಷನ್ ನೀಡಲು ಈವರೆಗೆ ಸಾಧ್ಯವಾಗಲಿಲ್ಲ ಎಂದು ಕೌನ್ಸಿಲರ್ ಮುಲಪರ್ತಿ ರಾಮರಾಜು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಈಗೇಕೆ ಬಂದಿದ್ದೀರಿ? ನೆರೆ ಬಂದಾಗ ಕ್ಷೇತ್ರ ನೆನಪಾದ ಶಾಸಕನ ಕಪಾಳಕ್ಕೆ ಏಟು ಕೊಟ್ಟ ಮಹಿಳೆ!

ವಾರ್ಡ್‌ನ ಮತದಾರರು ಪೌರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಅವರ ಭರವಸೆಗಳನ್ನು ಈಡೇರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೌನ್ಸಿಲ್ ಮೀಟಿಂಗ್ ಮುಗಿದ್ಮೇಲೆ ಸಾಯುವುದೇ ಲೇಸು ಎಂದು ಅವರು ಉದ್ವೇಗದಿಂದ ಹೇಳಿದ್ದರು. ಸ್ಥಳೀಯ ಚುನಾವಣೆಯಲ್ಲಿ ಈ ಕೌನ್ಸಿಲರ್‌ಗೆ ತೆಲುಗು ದೇಶಂ ಪಾರ್ಟಿ ಬೆಂಬಲ ನೀಡಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version