Site icon Vistara News

Andhra Train Accident: ಆಂಧ್ರಪ್ರದೇಶ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 13ಕ್ಕೆ ಏರಿಕೆ, ಮೃತರಿಗೆ 12 ಲಕ್ಷ ರೂ. ಪರಿಹಾರ

andhra train accident

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ (Andhra Train Accident) ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. 50 ಜನರು ಗಾಯಗೊಂಡಿದ್ದಾರೆ. ವಿಶಾಖಪಟ್ಟಣದಿಂದ ರಾಯಗಡಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರದಲ್ಲಿ ಭಾನುವಾರ ಸಂಜೆ ಹಳಿತತ್ತು.

ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸಿಕ್ಕಿಬಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು ವಿಶಾಖಪಟ್ಟಣದಿಂದ ಒಂದು ರೈಲನ್ನು ಕಳುಹಿಸಲಾಗಿದೆ. ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ಸಾಧ್ಯವಾದಷ್ಟು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲು ಆದೇಶಿಸಿದ್ದಾರೆ. ಮುಖ್ಯಮಂತ್ರಿಗಳು ಮೃತರಿಗೆ 10 ಲಕ್ಷ ರೂಪಾಯಿ ಹಾಗೂ ಪ್ರಧಾನ ಮಂತ್ರಿ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ವಿಶಾಖಪಟ್ಟಣ ಮತ್ತು ಪಲಾಸ ನಡುವಿನ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಅಳಮಂಡ ಮತ್ತು ಕಂಟಕಪಲ್ಲಿ ನಡುವಿನ ಮುಖ್ಯ ಮಾರ್ಗದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದಾಗ ವೈಜಾಗ್- ರಾಯಗಡ ಪ್ಯಾಸೆಂಜರ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ವಿಶಾಖಪಟ್ಟಣಂ- ಪಲಾಸ ರೈಲಿನ ಕೊನೆಯ ಮೂರು ಬೋಗಿಗಳು ಮತ್ತು ವಿಶಾಖಪಟ್ಟಣಂ- ರಾಯಗಡ ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಎರಡು ಕೋಚ್‌ಗಳು ಹಳಿತಪ್ಪಿದವು. ಒಂದು ಕೋಚ್ ಹಳಿತಪ್ಪಿ ಇನ್ನೊಂದು ಬದಿಯಲ್ಲಿದ್ದ ಗೂಡ್ಸ್ ರೈಲು ವ್ಯಾಗನ್ ಮೇಲೆ ಬಿದ್ದಿದೆ.

ನಿನ್ನೆ ರಾತ್ರಿ ಒಂಬತ್ತರಿಂದ ಸಾವಿನ ಸಂಖ್ಯೆ 13ಕ್ಕೆ ಏರಿದೆ ಎಂದು ವಿಜಯನಗರದ ಜಿಲ್ಲಾಧಿಕಾರಿ ನಾಗಲಕ್ಷ್ಮಿ ದೃಢಪಡಿಸಿದ್ದಾರೆ. ಇಂದು ರಕ್ಷಣಾ ಪ್ರಯತ್ನಗಳನ್ನು ಪೂರ್ಣಗೊಳಿಸುವ ಭರವಸೆ ಇದೆ. ಕನಿಷ್ಠ 40 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ಹದಿನೆಂಟು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು 22 ಮಾರ್ಗಗಳನ್ನು ತಿರುಗಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿದ ವೈಜಾಗ್- ರಾಯಗಡ ಲೋಕೋ ಪೈಲಟ್‌ನ ತಪ್ಪಿನಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸಿಗ್ನಲಿಂಗ್ ಲೊಕೊ ಪೈಲಟ್‌ನ ಗಮನಕ್ಕೆ ಬಂದಿಲ್ಲ ಎಂದು ರೈಲ್ವೆ ಮೂಲಗಳು ಈ ಹಿಂದೆ ತಿಳಿಸಿದ್ದವು.

ಹಳಿತಪ್ಪಿದ ಮತ್ತು ಹಾನಿಗೊಳಗಾದ ಕೋಚ್‌ಗಳನ್ನು ಹೊರತುಪಡಿಸಿ, ಮಧ್ಯರಾತ್ರಿಯ ವೇಳೆಗೆ ಸ್ಥಳವನ್ನು ತೆರವುಗೊಳಿಸಲಾಗಿದೆ. ಮುಖ್ಯಮಂತ್ರಿ ವೈಎಸ್‌ಆರ್ ಜಗನ್ ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ ₹ 10 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ₹ 2.5 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾಗಿರುವ ಪ್ರಯಾಣಿಕರಿಗೆ ₹ 50,000 ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹ 2 ಲಕ್ಷ ಹಾಗೂ ಗಾಯಾಳುಗಳಿಗೆ ₹ 50 ಸಾವಿರ ನೆರವು ನೀಡುವುದಾಗಿ ಘೋಷಿಸಿದರು. ರೈಲ್ವೆ ಸಚಿವರು ಮುಖ್ಯಮಂತ್ರಿ ರೆಡ್ಡಿಯವರೊಂದಿಗೆ ಮಾತನಾಡಿದ್ದಾರೆ. ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಆದೇಶಿಸಿದ್ದಾರೆ.

ದೆಹಲಿ ರೈಲ್ವೆ ಸಚಿವಾಲಯದ ವಾರ್ ರೂಮ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಪೂರ್ವ ಕರಾವಳಿ ರೈಲ್ವೆಯು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ (ಭುವನೇಶ್ವರ – 0674-2301625, 2301525, 2303069, ಮತ್ತು ವಾಲ್ಟೇರ್ – 0891-2885914.) ಸುಮಾರು ಐದು ತಿಂಗಳ ಹಿಂದೆ, ಒಡಿಶಾದಲ್ಲಿ ಮೂರು ರೈಲುಗಳ ಭೀಕರ ಅಪಘಾತದಲ್ಲಿ 280ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಜೂನ್ 2ರಂದು ಬಹನಾಗಾ ಬಜಾರ್ ನಿಲ್ದಾಣದ ಬಳಿ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳು ಡಿಕ್ಕಿಯಾಗಿದ್ದವು.

ಇದನ್ನೂ ಓದಿ: Train Accident : ಆಂಧ್ರದ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Exit mobile version