ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ (Andhra Train Accident) ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. 50 ಮಂದಿ ಗಾಯಗೊಂಡಿದ್ದಾರೆ. ವಿಶಾಖಪಟ್ಟಣದಿಂದ ರಾಯಗಡಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರದಲ್ಲಿ ಭಾನುವಾರ ಸಂಜೆ ಹಳಿ ತಪ್ಪಿತ್ತು. ಇದೀಗ ರೈಲು ಅಪಘಾತದ ಕಾರಣವನ್ನು ರೈಲ್ವೇ ಇಲಾಖೆ ಬಹಿರಂಗಪಡಿಸಿದೆ. ರಾಯಗಡಕ್ಕೆ ತೆರಳುತ್ತಿದ್ದ ರೈಲು ನಿಲುಗಡೆಗೆ ಸಿಗ್ನಲ್ ನೀಡಿದರೂ ಗಮನಿಸದೆ ಮುಂದೆ ಹೋಗಿದ್ದೇ (Human error) ದುರಂತಕ್ಕೆ ಮೂಲ ಕಾರಣ ಎಂದು ತಿಳಿದುಬಂದಿದೆ.
ವಾಲ್ಟೇರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸೌರಭ್ ಪ್ರಸಾದ್ ಮಾತನಾಡಿ, ʼʼಸಂಜೆ 7 ಗಂಟೆ ಸುಮಾರಿಗೆ ವಿಶಾಖಪಟ್ಟಣಂ-ಪಲಸಾ ವಿಶೇಷ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ವಿಶಾಖಪಟ್ಟಣಂ-ರಾಯಗಢ ಪ್ಯಾಸೆಂಜರ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಬೋಗಿಗಳು ಹಳಿ ತಪ್ಪಿತ್ತುʼʼ ಎಂದು ವಿವರಿಸಿದ್ದಾರೆ. ನಿಲುಗಡೆಗೆ ಸಿಗ್ನಲ್ ತೋರುತ್ತಿದ್ದರೂ ಅದನ್ನು ಗಮನಿಸದೇ ರೈಲು ಚಲಿಸಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಮೃತರಲ್ಲಿ ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ರೈಲಿನ ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸೇರಿದ್ದಾರೆ. ಗಾಯಗೊಂಡವರಲ್ಲಿ 32 ಮಂದಿ ವಿಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಪೈಕಿ 11 ಮಂದಿಯನ್ನು ಇದುವರೆಗೆ ಗುರುತಿಸಲಾಗಿದೆ ಎಂದು ವಿಜಯನಗರಂ ಜಿಲ್ಲಾಧಿಕಾರಿ ಎಸ್ ನಾಗಲಕ್ಷ್ಮಿ ತಿಳಿಸಿದ್ದಾರೆ.
ಪರಿಹಾರ ಘೋಷಣೆ
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಗಳಿಗೆ 10 ಲಕ್ಷ ರೂ., ಗಾಯಗೊಂಡವರಿಗೆ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಇತ್ತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಘೋಷಿಸಿದ್ದಾರೆ. ಪಿಎಂಎನ್ಆರ್ಪಿಎಫ್ (ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ)ನಿಂದ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂ.ಗಳನ್ನು ನೀಡಲಾಗುವುದು ಎಂದು ಪಿಎಂಒ ತಿಳಿಸಿದೆ.
ಜಗನ್ ಮೋಹನ್ ರೆಡ್ಡಿ ಸೋಮವಾರ ಅಪರಾಹ್ನ ಅಪಘಾತ ನಡೆದ ಸ್ಥಳವನ್ನು ಸಂದರ್ಶಿಸಲಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಲಿದ್ದಾರೆ.. ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ಜಯವರ್ಮ ಸಿನ್ಹಾ ದೆಹಲಿಯಿಂದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಹಳಿ ತಪ್ಪಿದ ಬೋಗಿಗಳನ್ನು ಹೊರತುಪಡಿಸಿ, ಇತರ 20 ಬೋಗಿಗಳನ್ನು ಹಳಿಯಿಂದ ತೆಗೆಯಲಾಗಿದೆ ಎಂದು ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Andhra Train Accident: ಆಂಧ್ರಪ್ರದೇಶ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 13ಕ್ಕೆ ಏರಿಕೆ, ಮೃತರಿಗೆ 12 ಲಕ್ಷ ರೂ. ಪರಿಹಾರ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಡಿಶಾ ದುರಂತ
ಈ ವರ್ಷದ ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು. ಅದಾಗಿ 4 ತಿಂಗಳ ನಂತರ ಈ ಅಪಘಾತ ಸಂಭವಿಸಿದೆ.