Site icon Vistara News

Pulwama Attack: ಇನ್ನೊಂದು ಪುಲ್ವಾಮಾ ದಾಳಿ ಬೆದರಿಕೆ ಹಾಕಿದ ಮದ್ರಸ ವಿದ್ಯಾರ್ಥಿ ಜೈಲಿಗೆ

pulwama attack threat

ಲಖನೌ: ಸದ್ಯದಲ್ಲೇ ಇನ್ನೊಂದು ಪುಲ್ವಾಮಾ ದಾಳಿ (Pulwama Attack) ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್‌ ಹಾಕಿದ್ದ ಮದ್ರಸ ವಿದ್ಯಾರ್ಥಿಯೊಬ್ಬನನ್ನು (madrasa student) ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

ಮೊಹಮ್ಮದ್ ತಲ್ಹಾ ಮಝರ್ ಬಂಧಿತ ವಿದ್ಯಾರ್ಥಿ, ಈತ ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಸೆರೈಕೆಲಾ ನಿವಾಸಿಯಾಗಿದ್ದು, ದಿಯೋಬಂದ್‌ನ ದಾರುಲ್ ಉಲೂಮ್ ಮದ್ರಾಸಾದಲ್ಲಿ ಅಧ್ಯಯನ ನಡೆಸುತ್ತಿದ್ದ. ಈತ ತನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ʼಬಹುತ್ ಜಲ್ದಿ ಇನ್‌ಶಾ ಅಲ್ಲಾ ದುಸ್ರಾ ಪುಲ್ವಾಮಾ ಭೀ ಹೋಗಾ’ ಎಂದು ಬರೆದುಕೊಂಡಿದ್ದಾನೆ. ಅಂದರೆ “ಆದಷ್ಟು ಬೇಗ ಇನ್ನೊಂದು ಪುಲ್ವಾಮ ದಾಳಿ ಆಗಲಿದೆ” ಇದರ ಅರ್ಥವಾಗಿದೆ.

ಈ ಪೋಸ್ಟ್ ಕೂಡಲೇ ವೈರಲ್ ಆಗಿದ್ದು, ಉತ್ತರಪ್ರದೇಶದ ಸಹ್ರಾನ್ಪುರ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ) ಕೂಡ ವಿದ್ಯಾರ್ಥಿಯನ್ನು ತನ್ನ ಕಸ್ಟಡಿಗೆ ಪಡೆದಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಹ್ರಾನ್ಪುರ ಪೊಲೀಸರು ಸುದ್ದಿ ಖಚಿತಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಯುವಕ ಬಳಸುತ್ತಿದ್ದ ಮೊಬೈಲ್ ಫೋನನ್ನು ಕೂಡ ಪೊಲೀಸರು ವಿಚಾರಣೆಗಾಗಿ ಪಡೆದಿದ್ದಾರೆ.

2019ರ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಕಾರು ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. 2574 ಯೋಧರನ್ನು ಹೊತ್ತು 78 ಸೇನಾ ಬೆಂಗಾವಲು ವಾಹನಗಳು ಸಾಗುತ್ತಿದ್ದ ವೇಳೆ ಜಮ್ಮು ಶ್ರೀನಗರ ಹೆದ್ದಾರಿಯ ಪುಲ್ವಾಮಾದಲ್ಲಿ ಈ ವಾಹನ ನುಗ್ಗಿಸಿ ಡಿಕ್ಕಿ ಹೊಡೆಸಿ ಉಗ್ರ ಈ ಕೃತ್ಯ ಎಸಗಿದ್ದ.

ಇದನ್ನೂ ಓದಿ: ದಾಳಿಗೆ ಸಂಚು; ಪುಲ್ವಾಮ ದಾಳಿ ರೂವಾರಿ ಮಸೂದ್‌ ಅಜರ್‌ ಆಪ್ತನ ವಿರುದ್ಧ ಚಾರ್ಜ್‌ಶೀಟ್‌

Exit mobile version