ಹೈದರಾಬಾದ್: ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಬಹುತೇಕ ಚಿತ್ರಣ ಲಭಿಸಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP), ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ ಒಕ್ಕೂಟ ಮತ್ತು ಬಿಜೆಪಿ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಒಳಗೊಂಡ ಎನ್‌ಡಿಎ (NDA) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸದ್ಯ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ (AP Election results 2024 live).
ಟಿಡಿಪಿ 125 ಕ್ಷೇತ್ರಗಳಲ್ಲಿ ಮುಂದಿದ್ದು, ವೈಎಸ್‌ಆರ್‌ಸಿ 20, ಜೆಎಸ್‌ಪಿ 17 ಮತ್ತು ಬಿಜೆಪಿ 7 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಿನಲ್ಲಿ ಎನ್‌ಡಿಯ 149 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಆಂಧ್ರಪ್ರದೇಶದಲ್ಲಿ 175 ವಿಧಾನಸಭಾ ಸ್ಥಾನಗಳಿದ್ದು, ಬಹುಮತ ಪಡೆಯಲು 88 ಕ್ಷೇತ್ರಗಳಲ್ಲಿ ಜಯ ಗಳಿಸುವುದು ಅಗತ್ಯ.
ಪವನ್ ಕಲ್ಯಾಣ್ ಮುನ್ನಡೆ
ಆಂಧ್ರಪ್ರದೇಶದ ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಟ ಮತ್ತು ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಪ್ರಬಲ ಮುನ್ನಡೆಯೊಂದಿಗೆ ತಮ್ಮ ಮೊದಲ ಗೆಲುವಿನತ್ತ ಸಾಗುತ್ತಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ಜಗನ್ ಮೋಹನ್ ರೆಡ್ಡಿ ಅವರ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಪಿ) ವಂಗಾ ಗೀತಾ ವಿಶ್ವನಾಥಂ ಸ್ಪರ್ಧಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಈ ಬಾರಿ ಲೋಕಸಭಾ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಎನ್‌ಡಿಎ ಜತೆಗಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ವಿಧಾನಸಭಾ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿತ್ತು. ಬಿಜೆಪಿ 6 ಲೋಕಸಭಾ ಮತ್ತು 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಪ್ಪಂದದ ಪ್ರಕಾರ, ಜನಸೇನಾ 2 ಲೋಕಸಭಾ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ವೈಎಸ್ಆರ್‌ಪಿಗೆ ತೀವ್ರ ಮುಖಭಂಗ
2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಪ್ರಮುಖ ಅಭ್ಯರ್ಥಿಗಳು
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ), ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ಪವನ್ ಕಲ್ಯಾಣ್ (ಜೆಎಸ್‌ಪಿ), ಕಿಲ್ಲಿ ಕೃಪಾರಾಣಿ (ಕಾಂಗ್ರೆಸ್), ಧರ್ಮನಾ ಪ್ರಸಾದ ರಾವ್ (ವೈಎಸ್‌ಆರ್‌ಸಿಪಿ), ಧರ್ಮನಾ ಕೃಷ್ಣ ದಾಸ್ (ವೈಎಸ್‌ಆರ್‌ಸಿಪಿ), ಪಾಮುಲಾ ಪುಷ್ಪ ಶ್ರೀವಾಣಿ ( ವೈಎಸ್‌ಆರ್‌ಸಿಪಿ), ನಲ್ಲಮಿಲ್ಲಿ ರಾಮಕೃಷ್ಣ ರೆಡ್ಡಿ (ಬಿಜೆಪಿ), ರಘು ರಾಮ ಕೃಷ್ಣರಾಜು (ಟಿಡಿಪಿ), ಚಿಂತಾಮನೇನಿ ಪ್ರಭಾಕರ್ (ಟಿಡಿಪಿ), ವೈಎಸ್ ಚೌಧರಿ (ಬಿಜೆಪಿ), ನಾದೆಂಡ್ಲ ಮನೋಹರ್ (ಜೆಎಸ್‌ಪಿ), ಕನ್ನಾ ಲಕ್ಷ್ಮೀನಾರಾಯಣ (ಟಿಡಿಪಿ), ಅದಾಲ ಪ್ರಭಾಕರ ರೆಡ್ಡಿ (ವೈಎಸ್‌ಆರ್‌ಸಿಪಿ), ಅಮ್ಜತ್ ಬಾಷಾ ಶೇಕ್ ಬೇಪಾರಿ (ವೈಎಸ್‌ಆರ್‌ಸಿಪಿ), ನಂದಮೂರಿ ಬಾಲಕೃಷ್ಣ (ಟಿಡಿಪಿ), ನಲ್ಲಾರಿ ಕಿಶೋರ್ ಕುಮಾರ್ ರೆಡ್ಡಿ (ಟಿಡಿಪಿ), ನಾರಾ ಲೋಕೇಶ್ (ಟಿಡಿಪಿ) ಮತ್ತಿತರರು ಆಂಧ್ರಪ್ರದೇಶದ ವಿಧಾನಸಭಾ ಕಣದಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳು.
ಇದನ್ನೂ ಓದಿ: Odisha Assembly Result 2024: ಅಸೆಂಬ್ಲಿ ಎಲೆಕ್ಷನ್; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?