Site icon Vistara News

AP Election Results 2024: ಆಂಧ್ರದಲ್ಲಿ ಮತ್ತೊಮ್ಮೆ ಟಿಡಿಪಿ ಮ್ಯಾಜಿಕ್‌; ಆಡಳಿತ ವಿರೋಧಿ ಅಲೆಗೆ ಕೊಚ್ಚಿಹೋದ ಜಗನ್ ಮೋಹನ್ ರೆಡ್ಡಿ

AP Election Results 2024

AP Election Results 2024

ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಎನ್‌ಡಿಎ (NDA) ಬಣದ ಅಡಿಯಲ್ಲಿ ಸ್ಪರ್ಧಿಸಿದ್ದ ಟಿಡಿಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಆಡಳಿತ ವಿರೋಧಿ ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ (AP Election Results 2024).

ಟಿಡಿಪಿಯನ್ನು ಒಳಗೊಂಡ ಎನ್‌ಡಿಎ ಬಹುಮತ ದಾಖಲಿಸುವತ್ತ ದಾಪುಗಾಲು ಇಟ್ಟಿದೆ. 175 ಸೀಟುಗಳ ಪೈಕಿ ಎನ್‌ಡಿಎ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಛಾಪು ಮೂಡಿಸಿದೆ. ಈ ಪೈಕಿ ಟಿಡಿಪಿ ಒಂದೇ 130ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ಕಡೆ ಮುಂದಿದೆ.

ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿ

ಟಿಡಿಪಿ ಭರ್ಜರಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯ,ಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್‌ 9ರಂದು ಅಧಿಕಾರ ಸ್ವೀಕರಿಸುವುದಾಗಿ ಅವರು ಘೋಷಿಸಿದ್ದಾರೆ. ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಇತ್ತ ಪೀಠಾಪುರದಿಂದ ಸ್ಪರ್ಧಿಸಿದ್ದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ 69,169 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಜನಸೇನಾ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಪವನ್ ಕಲ್ಯಾಣ್ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಪವನ್ ಅವರಿಗೆ ಪತ್ನಿ ಲೆಜಿನೋವಾ ಆರತಿ ಬೆಳಗಿ ವಿಜಯ ತಿಲಕವನ್ನಿಟ್ಟು ಸಂಭ್ರಮದಲ್ಲಿ ಪಾಲ್ಗೊಂಡರು. 2019ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿದ್ದ ಪವನ್‌ ಕಲ್ಯಾಣ್‌ ಎರಡೂ ಕಡೆ ಸೋಲು ಅನುಭವಿಸಿದ್ದರು. ಸದ್ಯ ಗೆಲುವಿನ ನಗೆ ಬೀರಿರುವುದು ಸಡಗರ ಹೆಚ್ಚಿಸಿದೆ.

2019ರ ಚಿತ್ರಣ

2019ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್‌ ಕಲ್ಯಾಣ್‌ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಮುಖಭಂಗವಾಗಿದೆ.

ಇದನ್ನೂ ಓದಿ: Odisha Assembly Result 2024: ಬಿಜೆಡಿ ಭದ್ರ ಕೋಟೆಗೆ ಬಿಜೆಪಿ ಗ್ರ್ಯಾಂಡ್‌ ಎಂಟ್ರಿ! ಹಳೇ ದೋಸ್ತಿಗೆ ಸಕತ್‌ ಠಕ್ಕರ್‌ ಕೊಟ್ಟ ಕೇಸರಿ ಬಣ

ಮ್ಯಾಜಿಕ್‌ ನಂಬರ್‌

ಆಂಧ್ರ ಪ್ರದೇಶದಲ್ಲಿ 175 ವಿಧಾನಸಭಾ ಸ್ಥಾನಗಳಿದ್ದು, ಬಹುಮತ ಪಡೆಯಲು 88 ಕ್ಷೇತ್ರಗಳಲ್ಲಿ ಜಯ ಗಳಿಸುವುದು ಅಗತ್ಯ. ಈ ಬಾರಿ ಎನ್‌ಡಿಎ ಒಪ್ಪಂದ ಮಾಡಿಕೊಂಡು ಟಿಡಿಪಿ 144, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 10 ಕಡೆ ಸ್ಪರ್ಧಿಸಿದ್ದವು.

Exit mobile version