Site icon Vistara News

Abdul Kalam: ಬೇಡವೆಂದರೂ ಗ್ರೈಂಡರ್‌ ಗಿಫ್ಟ್ ನೀಡಿದ್ದಕ್ಕೆ ಚೆಕ್‌ ಕಳುಹಿಸಿದ್ದರು ಅಬ್ದುಲ್‌ ಕಲಾಂ;‌ ಅವರು ಇಷ್ಟ ಆಗೋದೇ ಇದಕ್ಕೆ!

Dr APJ Abdul Kalam

APJ Abdul Kalam once sent a cheque for grinder he got as gift, IAS officer shares story

ನವದೆಹಲಿ: ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರನ್ನು ಇಷ್ಟಪಡದ ಭಾರತೀಯರೇ ಇಲ್ಲ. ತಮಿಳುನಾಡಿನಲ್ಲಿ ಹುಟ್ಟಿ, ವಿಜ್ಞಾನಿಯಾಗಿ, ಕ್ಷಿಪಣಿ ಮ್ಯಾನ್‌ ಎಂದೇ ಖ್ಯಾತಿಯಾದ ಅಬ್ದುಲ್‌ ಕಲಾಂ (Abdul Kalam) ರಾಷ್ಟ್ರಪತಿ ಹುದ್ದೆ ಅಲಂಕರಿಸಿದರೂ ಸರಳ ಜೀವನ ಹಾಗೂ ಉತ್ಕೃಷ್ಟ ವಿಚಾರಗಳ ಮೂಲಕವೇ ದೇಶಾದ್ಯಂತ ಗಮನ ಸೆಳೆದಿದ್ದರು. ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಖ್ಯಾತಿಯಾಗಿದ್ದರು. ಈಗ ಅಬ್ದುಲ್‌ ಕಲಾಂ ಅವರ ವಿಚಾರಗಳು ಎಷ್ಟು ಉನ್ನತವಾಗಿದ್ದವು, ಅವರು ಎಂತಹ ತತ್ವಗಳನ್ನು ಅನುಸರಿಸಿದ್ದರು ಎಂಬುದಕ್ಕೆ ಅಬ್ದುಲ್‌ ಕಲಾಂ ಅವರು ಬೇಡವೆಂದರೂ ಗ್ರೈಂಡರ್‌ಅನ್ನು ಉಡುಗೊರೆ ನೀಡಿದ್ದಕ್ಕೆ, ಆ ಗ್ರೈಂಡರ್‌ ಮೊತ್ತದ ಚೆಕ್‌ಅನ್ನು ಕಲಾಂ ಅವರು ವಾಪಸ್‌ ಕಳುಹಿಸಿದ್ದರು ಎಂಬ ನಿದರ್ಶನ ಸಿಕ್ಕಿದೆ.

ಹೌದು, ಎಂ.ವಿ.ರಾವ್‌ ಎಂಬ ಐಎಎಸ್‌ ಅಧಿಕಾರಿಯು ಈ ಘಟನೆಯನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ (ಮೊದಲು ಟ್ವಿಟರ್)‌ ಸ್ಮರಿಸಿದ್ದಾರೆ. “2014ರಲ್ಲಿ ಸೌಭಾಗ್ಯ ವೆಟ್‌ ಗ್ರೈಂಡರ್‌ ಎಂಬ ಕಂಪನಿಯು ಕಾರ್ಯಕ್ರಮವೊಂದನ್ನು ಆಯೋಜಿಸಿ, ಅದಕ್ಕೆ ಅಬ್ದುಲ್‌ ಕಲಾಂ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಬ್ದುಲ್‌ ಕಲಾಂ ಅವರಿಗೆ ಸಂಸ್ಥೆಯು ಒಂದು ಗ್ರೈಂಡರ್‌ಅನ್ನು ಉಡುಗೊರೆಯಾಗಿ ನೀಡಿತ್ತು. ಆದರೆ, ಅದನ್ನು ಸ್ವೀಕರಿಸಲು ಕಲಾಂ ಅವರಿಗೆ ಮನಸ್ಸಿರಲಿಲ್ಲ. ಆದರೂ ವಾದ ಮಾಡದೆ ಗ್ರೈಂಡರ್‌ ಸ್ವೀಕರಿಸಿದ ಅವರು ಬಳಿಕ ಗ್ರೈಂಡರ್‌ ಮೊತ್ತದ ಚೆಕ್‌ಅನ್ನು ಸಂಸ್ಥೆಗೆ ಕಳುಹಿಸಿದ್ದರು” ಎಂದು ಸ್ಮರಿಸಿದ್ದಾರೆ.

ಐಎಎಸ್‌ ಅಧಿಕಾರಿಯ ಪೋಸ್ಟ್

“ಪ್ರಾಯೋಜಕರು ನೀಡಿದ ಉಡುಗೊರೆಯನ್ನು ತೆಗೆದುಕೊಂಡು ಹೋದ ಅಬ್ದುಲ್‌ ಕಲಾಂ ಅವರು ತಮಗೆ ಪರಿಚಯವಿದ್ದ ಒಬ್ಬರನ್ನು ಮಾರುಕಟ್ಟೆಗೆ ಕಳುಹಿಸಿ, ಗ್ರೈಂಡರ್‌ ಬೆಲೆ ತಿಳಿದುಕೊಂಡು 4,850 ರೂಪಾಯಿಯ ಚೆಕ್‌ಅನ್ನು ಅವರು ಕಳುಹಿಸಿದ್ದರು. ಆದರೆ, ಅಬ್ದುಲ್‌ ಕಲಾಂ ಅವರು ಕಳುಹಿಸಿದ ಚೆಕ್‌ಅನ್ನು ಕಂಪನಿಯು ಡೆಪಾಸಿಟ್‌ ಮಾಡದಿರಲು ತೀರ್ಮಾನಿಸಿತು” ಎಂದು ಐಎಎಸ್‌ ಅಧಿಕಾರಿಯು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Aurangzeb Lane: ಮೊಘಲ್‌ ಅರಸನ ಹೆಸರಿಗೆ ಕತ್ತರಿ, ದೆಹಲಿಯ ಔರಂಗಜೇಬ್‌ ರಸ್ತೆಗೆ ಅಬ್ದುಲ್‌ ಕಲಾಂ ಹೆಸರು

ಅಷ್ಟಕ್ಕೇ ಸುಮ್ಮನಾಗಲಿಲ್ಲ ಕಲಾಂ

“ಚೆಕ್‌ ಕಳುಹಿಸಿ ಸುಮ್ಮನಾಗದ ಕಲಾಂ ಅವರು, ತಮ್ಮ ಬ್ಯಾಂಕ್‌ನಿಂದ ಏಕೆ ಹಣ ಕಡಿತವಾಗಿಲ್ಲ, ಚೆಕ್‌ ಏಕೆ ಡೆಪಾಸಿಟ್‌ ಮಾಡಿಲ್ಲ ಎಂದು ಪ್ರಶ್ನಿಸಿದರು. ಇಲ್ಲದಿದ್ದರೆ ಗ್ರೈಂಡರ್‌ಅನ್ನು ವಾಪಸ್‌ ಕಳುಹಿಸುವುದಾಗಿ ತಿಳಿಸಿದರು. ಕೊನೆಗೆ ಕಂಪನಿಯು ಚೆಕ್‌ಅನ್ನು ಡೆಪಾಸಿಟ್‌ ಮಾಡಿತು. ಅದರೆ, ಅಬ್ದುಲ್‌ ಕಲಾಂ ಅವರ ಚೆಕ್‌ನ ಪ್ರತಿಯೊಂದನ್ನು ಕಂಪನಿಯು ಈಗಲೂ ಇರಿಸಿಕೊಂಡಿದೆ” ಎಂದು ಅಧಿಕಾರಿ ಬರೆದುಕೊಂಡಿದ್ದಾರೆ. ಅಬ್ದುಲ್‌ ಕಲಾಂ ಅವರ ಸರಳತೆ, ಅವರ ವಿಚಾರಗಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್‌ ವೈರಲ್‌ ಆಗಿದೆ.  

Exit mobile version