ನವ ದೆಹಲಿ : ಕೇಂದ್ರ ಸರ್ಕಾರ 50 ರೂ.ಗಿಂತ ಕಡಿಮೆ ದರದ ಆ್ಯಪಲ್ ಆಮದನ್ನು ನಿಷೇಧಿಸಿದೆ. ಆಮದು ನೀತಿ ತಿದ್ದುಪಡಿಯಲ್ಲಿ ಸಾಗಣೆ, ವಿಮೆ ಮತ್ತು ಸರಕು (Cost, Insurance, Freight) ವೆಚ್ಚ 50 ರೂ.ಗಿಂತ ಕಡಿಮೆ ಇದ್ದರೆ ಆಮದಿಗೆ ಅವಕಾಶ ಇಲ್ಲ. 50 ರೂ.ಗಿಂತ ಹೆಚ್ಚಿನ ಆಮದು ದರ ಇರುವ (Apple import policy) ಆ್ಯಪಲ್ ಆಮದಿಗೆ ನಿರ್ಬಂಧ ಇರುವುದಿಲ್ಲ.
ಭಾರತದ ನೆರೆ ರಾಷ್ಟ್ರವಾದ ಭೂತಾನ್ ಮೂಲದ ಆ್ಯಪಲ್‌ಗೆ ಈ ನಿಷೇಧ ಅನ್ವಯವಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಾಣಿಜ್ಯ ವಿಭಾಗದ ಅಧಿಸೂಚನೆ ಸೋಮವಾರ ತಿಳಿಸಿದೆ.
ಕಾರಣವೇನು? : ಕಳೆದ ಎರಡು ವರ್ಷಗಳಲ್ಲಿ ಇರಾನ್ ಮೂಲದ ಅಗ್ಗದ ದರದ ಆ್ಯಪಲ್ ಮಾರುಕಟ್ಟೆಗೆ ಬರುತ್ತಿತ್ತು. ಇದರ ಪರಿಣಾಮ ಕಾಶ್ಮೀರ ಮೂಲದ ಆ್ಯಪಲ್‌ಗೆ ಬೇಡಿಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಆಮದು ನೀತಿ ಗಮನ ಸೆಳೆದಿದೆ. ಕಾಶ್ಮೀರ ಆ್ಯಪಲ್‌ಗೆ ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆ ಇದೆ. ಹೀಗಿದ್ದರೂ, ಸರ್ಕಾರ ಈ ಅಧಿಸೂಚನೆಯಲ್ಲಿ ನಿರ್ದಿಷ್ಟ ಕಾರಣವನ್ನು ಸ್ಪಷ್ಟಪಡಿಸಿಲ್ಲ.
ಕಳೆದ 2022ರಲ್ಲಿ ಆ್ಯಪಲ್ ಆಮದು ಇಮ್ಮಡಿಯಾಗಿತ್ತು. ಭಾರತವು ಚಿಲಿ, ಚೀನಾ, ಅಮೆರಿಕ, ಟರ್ಕಿ, ಇಟಲಿ, ಬ್ರೆಜಿಲ್, ನ್ಯೂಜಿಲೆಂಡ್ ಮೂಲದಿಂದ ಹೆಚ್ಚಿನ ಆ್ಯಪಲ್ ಅನ್ನು ಆಮದು ಮಾಡುತ್ತದೆ. ಭಾರತವು ಕಾಶ್ಮೀರಿ ಮತ್ತು ಹಿಮಾಚಲ್ ಪ್ರದೇಶದ ಆ್ಯಪಲ್‌ನ ರಫ್ತನ್ನೂ ಗಣನೀಯವಾಗಿ ಮಾಡುತ್ತಿದೆ. ಕಾಶ್ಮೀರಿ ಆ್ಯಪಲ್‌ಗೆ ಪೂರಕವಾಗಿರುವ ನೀತಿಯಿಂದ ಆ್ಯಪಲ್ ದರ ಇಳಿಕೆಯಾಗಲಿದೆಯೇ ಎಂಬುದು ಖಾತರಿ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.