ನವದೆಹಲಿ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವನಿಗಾಮ್ ಬಾಲಾ ಗ್ರಾಮದಲ್ಲಿ ಭಾನುವಾರ ಒಂದು ಎನ್‌ಕೌಂಟರ್ ನಡೆದು ಅಖ್ತರ್ ಹುಸೇನ್ ಬಟ್ ಎಂಬ ಉಗ್ರಗಾಮಿ ಹತನಾಗಿದ್ದಾನೆ. ಒಂದು ಖಾಲಿ ಕಟ್ಟಡದಲ್ಲಿ ಅವಿತು ಕುಳಿತಿದ್ದ ಈತನನ್ನು ಪತ್ತೆ ಹಚ್ಚಿ, ಆತನೊಂದಿಗೆ ಕಾದಾಡಿ ಸುಳಿವು ನೀಡುವ ಮೂಲಕ ಉಗ್ರನೊಬ್ಬನ ಸಾವಿಗೆ ಕಾರಣವಾದ ಸೇನೆಯ ನಾಯಿ ಆ್ಯಕ್ಸೆಲ್ ಮಾತ್ರ ಈ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡಿದೆ. ಈ ಸಾವು ಸೇನೆಯನ್ನು ಮಾತ್ರವಲ್ಲ, ನೆಟ್ಟಿಗರನ್ನೂ ತೀವ್ರವಾಗಿ ಕಾಡಿದೆ.
ಸೇನೆಯ ಪ್ರತಿಷ್ಠಿತ ಡಾಗ್ ಸ್ಕ್ವಾಡ್‌ಗೆ ಸೇರಿದ ಬೆಲ್ಜಿಯನ್ ಮಾಲಿನೊಯಿಸ್ ಜಾತಿಗೆ ಸೇರಿದ ಎರಡು ವರ್ಷದ ಆ್ಯಕ್ಸೆಲ್ ಆಕ್ರಮಣಕಾರಿ ಮತ್ತು ಚಾಣಾಕ್ಷತೆಯನ್ನು ಮೈಗೂಡಿಸಿಕೊಂಡಿದ್ದ ನಾಯಿಯಾಗಿದ್ದು, ಹಲವು ಆಪರೇಷನ್‌ಗಳಲ್ಲಿ ಸೇನೆಗೆ ಸಹಕರಿಸಿದೆ. ಇಲ್ಲಿ ಕೂಡಾ ಉಗ್ರನಿಂದ ಗುಂಡೇಟು ತಿಂದರೂ ಮರಳಿ ಕಾದಾಡಿದೆ ಮತ್ತು ಆತನನ್ನು ಹೊರಗೆಳೆದು ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಮೂಲಕ ಹಲವು ಸೈನಿಕರ ಪ್ರಾಣವನ್ನು ಉಳಿಸಿದೆ.
ಬಾರಾಮುಲ್ಲಾದ ಈ ಪ್ರದೇಶದಲ್ಲಿ ಉಗ್ರಗಾಮಿ ಅಡಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ೨೯ನೇ ರಾಷ್ಟ್ರೀಯ ರೈಫಲ್ಸ್ ಕಾರ್ಯಾಚರಣೆಗೆ ಮುಂದಡಿ ಇಟ್ಟಿತು. ಸೈನಿಕರು ೨೬ನೇ ಆರ್ಮಿ ಡಾಗ್ ಯುನಿಟ್‌ನಲ್ಲಿದ್ದ ಎರಡು ನಾಯಿಗಳಾದ ಆ್ಯಕ್ಸೆಲ್ ಮತ್ತು ಬಾಲಾಜಿಯನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದರು. ಅಷ್ಟು ಹೊತ್ತಿಗೆ ಉಗ್ರಗಾಮಿ ಒಂದು ಕಟ್ಟಡವನ್ನು ಸೇರಿಕೊಂಡಿದ್ದ.
ಉಗ್ರಗಾಮಿ ಎಲ್ಲಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚುವುದಕ್ಕಾಗಿ ಮೊದಲು ಸೇನಾ ನಾಯಿಗಳನ್ನು ಬಿಡುವುದು ಸಾಮಾನ್ಯ. ಇದಕ್ಕೆ ಸ್ಯಾನಿಟೈಸ್ ಅನ್ನುತ್ತಾರೆ. ಅಂತೆಯೇ ಮೊದಲ ಹಂತದಲ್ಲಿ ಬಾಲಾಜಿಯನ್ನು ಕಳುಹಿಸಲಾಯಿತು. ಅದು ಕಾರಿಡಾರ್‌ನಲ್ಲಿ ಸುತ್ತು ಹೊಡೆದು ಮರಳಿಬಂತು. ಬಳಿಕ ಆ್ಯಕ್ಸೆಲ್‌ನಿಗೆ ಬಾಡಿ ಕ್ಯಾಮೆರಾವನ್ನು ಫಿಕ್ಸ್ ಮಾಡಿ ಕಳುಹಿಸಲಾಯಿತು. ಅದು ಮೊದಲ ಕೋಣೆಯನ್ನು ಸುತ್ತಿಕೊಂಡು ಹೊರಬಂದಿತ್ತು. ಅಲ್ಲಿ ಯಾವ ಚಲನವಲನವೂ ಕ್ಯಾಮೆರಾದಲ್ಲಿ ಗೋಚರಿಸಲಿಲ್ಲ. ಆದರೆ, ಎರಡನೇ ಕೋಣೆಗೆ ಕಾಲಿಡುತ್ತಿದ್ದಂತೆಯೇ ಅದರ ಮೇಲೆ ಗುಂಡಿನ ದಾಳಿ ನಡೆಯಿತು. ಒಂದು ಗುಂಡು ದೇಹವನ್ನು ಹೊಕ್ಕು ಹೊರಗೆ ಬಂದರೂ ಆ್ಯಕ್ಸೆಲ್ ಮತ್ತೆ ಉಗ್ರಗಾಮಿಯ ಕಡೆಗೆ ನುಗ್ಗಿದೆ. ಕೊನೆಗೆ ನೋವು ಸಹಿಸಲಾರದೆ ಅಲ್ಲೇ ಕುಸಿದು ಬಿದ್ದಿದೆ.
ಆದರೆ, ಅಷ್ಟು ಹೊತ್ತಿಗೆ ಭದ್ರತಾ ಪಡೆಗಳ ಸಿಬ್ಬಂದಿಗೆ ಅಲ್ಲಿನ ಸ್ಪಷ್ಟ ಚಿತ್ರಣ ಲಭಿಸಿದೆ. ಸುಮಾರು ಐದು ಗಂಟೆಗಳ ಕಾಲ ನಡೆದ ಆಪರೇಷನ್‌ನ ಕೊನೆಯ ಹಂತದಲ್ಲಿ ಈ ದುರಂತ ಸಂಭವಿಸಿದೆ. ಕೊನೆಗೆ ಭದ್ರತಾ ಪಡೆಗಳು ಒಳಗೆ ನುಗ್ಗಿ ಉಗ್ರಗಾಮಿಯನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೋರಾಟದಲ್ಲಿ ಇಬ್ಬರು ಸೇನಾ ಯೋಧರಿಗೂ ಗಾಯಗಳಾಗಿವೆ.
ಆ್ಯಕ್ಸೆಲ್ ಮೈತುಂಬಾ ಗಾಯ
ಎನ್‌ಕೌಂಟರ್ ಮುಗಿದ ಮೇಲೆ ಆ್ಯಕ್ಸೆಲ್‌ನ ಮೃತದೇಹವನ್ನು ಹೊರಗೆ ತರಲಾಯಿತು. ಪೋಸ್ಟ್ ಮಾರ್ಟಂ ವೇಳೆ ಒಳಹೊಕ್ಕು ಹೊರಬಂದ ಒಂದು ಗುಂಡಿನ ಎರಡು ಗಾಯಗಳು ಮಾತ್ರವಲ್ಲದೆ, ಇನ್ನೂ ಹತ್ತು ಗಾಯಗಳು ದೇಹದಲ್ಲಿರುವುದು ಪತ್ತೆಯಾಗಿದೆ. ಜತೆಗೆ ಕೆಲವು ಕಡೆ ಮೂಳೆಗಳು ಕೂಡಾ ಮುರಿದಿವೆ. ಇದು ಗುಂಡೇಟು ತಿಂದ ಬಳಿಕವೂ ಹೋರಾಡಿದ ಕುರುಹು ಎಂದು ಹೇಳಲಾಗುತ್ತಿದೆ.
ಅತ್ಯಂತ ಶಕ್ತಿಶಾಲಿ ನಾಯಿ
ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಈ ನಾಯಿ ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗಿದೆ. ಇದು ಧೈರ್ಯವಾಗಿ ಮುನ್ನುಗ್ಗುವ ಜತೆಗೆ ಉಗ್ರರನ್ನು ಕಚ್ಚಿಯೇ ಸಾಯಿಸಬಲ್ಲಷ್ಟು ಸಾಮರ್ಥ್ಯ್ತ ಹೊಂದಿರುತ್ತವೆ. ಇತ್ತೀಚೆಗಷ್ಟೇ ಸೋಪೋರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲೂ ಈ ನಾಯಿ ತನ್ನ ಶಕ್ತಿಯನ್ನು ಶ್ರುತಪಡಿಸಿತ್ತು.
ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ
ಮೃತಪಟ್ಟ ನಾಯಿಗೆ ೧೦ನೇ ಸೆಕ್ಟರ್ ರಾಷ್ಟ್ರೀಯ ರೈಫಲ್ಸ್‌ನ ಪ್ರಧಾನ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೇಜರ್ ಜನರಲ್ ಎಸ್ ಎಸ್ ಸ್ಲೇರಿಯಾ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಆ್ಯಕ್ಸೆಲ್‌ಗೆ ತರಬೇತಿ ನೀಡಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಕ್ಯಾರ್ ಟೇಕರ್ ಸೈನಿಕ ಮೃತದೇಹದ ಪಕ್ಕ ಕುಳಿತು ಕಣ್ಣೀರಿಡುತ್ತಿದ್ದ ದೃಶ್ಯ ಎಲ್ಲರ ಮನ ಕರಗುವಂತೆ ಮಾಡಿತ್ತು. ಈ ದೃಶ್ಯಗಳು ಮತ್ತು ನಾಯಿಯ ಸಾಹಸವನ್ನು ಕೇಳಿದ ನೆಟ್ಟಿಗರು ಕೂಡಾ ಕಂಬನಿ ಹರಿಸಿದ್ದಾರೆ.