Site icon Vistara News

ಪಾಕ್‌ ಮಹಿಳೆಯ ಜಾಲದಲ್ಲಿ ಭಾರತೀಯ ಸೈನಿಕ; ಹನಿಟ್ರ್ಯಾಪ್‌ ಆದವನೀಗ ಜೈಲಿನಲ್ಲಿ

Honeytrap

ಸೇನಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗೆ ನೀಡಿದ ಆರೋಪದಡಿ ಭಾರತೀಯ ಸೇನಾ ಯೋಧ ಪ್ರದೀಪ್‌ ಕುಮಾರ್‌ರನ್ನು ಬಂಧಿಸಲಾಗಿದೆ. 24ವರ್ಷದ ಯೋಧ ಪ್ರದೀಪ್‌ ಕುಮಾರ್‌ ಹನಿಟ್ರ್ಯಾಪ್‌ (Honeytrap) ಆದ ಪ್ರಕರಣ ಇದು. ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‌ಐನ ಏಜೆಂಟ್‌ವೊಬ್ಬಳು ಇವರನ್ನು ಬಲೆಗೆ ಬೀಳಿಸಿಕೊಂಡು ಭಾರತೀಯ ಸೇನೆಗೆ ಸಂಬಂಧಪಟ್ಟ ಹಲವು ಮಾಹಿತಿಗಳನ್ನು ಪಡೆದಿದ್ದಾಳೆ. ರಾಜಸ್ಥಾನ ಪೊಲೀಸರು ಈಗ ಪ್ರದೀಪ್‌ನನ್ನು ಬಂಧಿಸಿದ್ದಾರೆ.

ಪ್ರದೀಪ್‌ ಕುಮಾರ್ ರಾಜಸ್ಥಾನದ ಜೋಧ್‌ಪುರದಲ್ಲಿ ಕರ್ತವ್ಯದಲ್ಲಿದ್ದರು. ಫೇಸ್‌ಬುಕ್‌ ಮೂಲಕ ಈ ಮಹಿಳೆಯ ಪರಿಚಯ ಆಗಿತ್ತು. ಮಹಿಳೆ ತನ್ನನ್ನು ತಾನು ಛದಮ್‌ ಎಂದು ಹೇಳಿಕೊಂಡಿದ್ದಲ್ಲದೆ, ಮಧ್ಯಪ್ರದೇಶದ ಗ್ವಾಲಿಯರ್‌ನವಳು ಎಂದೇ ತಿಳಿಸಿದ್ದಳು. ಅಷ್ಟೇ ಅಲ್ಲ, ತನ್ನೂರು ಗ್ವಾಲಿಯರ್‌ ಆದರೂ ಬೆಂಗಳೂರಿನಲ್ಲಿ ಕಾರ್ಪೋರೇಟ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಳು. ಅದೆಲ್ಲವನ್ನೂ ಪ್ರದೀಪ್‌ ನಂಬಿದ್ದರು.

ಇದನ್ನೂ ಓದಿ: ಸೇನೆಯ NO.2 ಸ್ಥಾನದಲ್ಲಿ ಕನ್ನಡಿಗ: ಉಪ ಮುಖ್ಯಸ್ಥರಾಗಿ ಲೆ.ಜ. ರಾಜು

ಇವರಿಬ್ಬರ ಪರಿಚಯ ಸ್ವಲ್ಪ ದಿನಗಳಲ್ಲೇ ಸ್ನೇಹಕ್ಕೆ ತಿರುಗಿತ್ತು. ಪ್ರದೀಪ್‌ ಆಕೆಗೆ ಸಂಪೂರ್ಣ ಮರುಳಾಗಿಬಿಟ್ಟಿದ್ದರು. ಪರಸ್ಪರ ಫೋನ್‌ ನಂಬರ್‌ ಕೂಡ ಶೇರ್‌ ಮಾಡಿಕೊಂಡು ವಾಟ್ಸ್‌ಅಪ್‌ನಲ್ಲಿ ಚಾಟಿಂಗ್‌ ಕೂಡ ಮಾಡುತ್ತಿದ್ದರು. ಈಕೆಗಾಗಿ ಪ್ರದೀಪ್‌ ಏನು ಬೇಕಾದರೂ ಮಾಡಲು ಸಿದ್ಧನಾಗಿದ್ದ. ಹಾಗೇ, ಒಂದಷ್ಟು ತಿಂಗಳು ಕಳೆದ ಬಳಿಕ ಪ್ರದೀಪ್‌ ಮದುವೆಯ ನೆಪದಲ್ಲಿ ದೆಹಲಿಗೆ ಬಂದು, ಸೇನೆಗೆ ಸಂಬಂಧಪಟ್ಟ ಒಂದಷ್ಟು ಗೌಪ್ಯ ಮಾಹಿತಿಗಳ ಫೋಟೋಗಳನ್ನೆಲ್ಲ ತೆಗೆದುಕೊಂಡಿದ್ದರು. ಅದನ್ನು ಅವರು ಮಹಿಳೆಗೆ ಕಳಿಸಿದ್ದಾರೆ. ಇವರಿಬ್ಬರ ನಡುವಿನ ವಾಟ್ಸ್‌ಅಪ್‌ ಚಾಟ್‌ ಕೂಡ ನಮಗೆ ಸಿಕ್ಕಿದೆ. ಪ್ರದೀಪ್‌ ಹಂಚಿಕೊಂಡ ಮಾಹಿತಿಯಲ್ಲಿ, ಉಳಿದ ಯೋಧರನ್ನು ಇದರಲ್ಲಿ ಬಲಿಪಶು ಮಾಡುವ ಅಂದರೆ ತಪ್ಪನ್ನೆಲ್ಲ ಅವರ ಮೇಲೆ ಹಾಕಿ ತಾವು ಪಾರಾಗುವ ಎಲ್ಲ ಅಂಶಗಳೂ ಇದ್ದುದು ಬೆಳಕಿಗೆ ಬಂದಿದೆ ಎಂದು ಗುಪ್ತಚರ ಇಲಾಖೆ ಡಿಜಿ ಉಮೇಶ್‌ ಮಿಶ್ರಾ ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಪ್ರದೀಪ್‌ ಕುಮಾರ್‌ ಅವರ ಇನ್ನೊಬ್ಬಳು ಸ್ನೇಹಿತೆ ಕೂಡ ಇದ್ದಾಳೆ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ

Exit mobile version