ನವ ದೆಹಲಿ: ಇನ್ನು ಮುಂದೆ ಭಾರತೀಯ ಸೇನೆಯಲ್ಲಿ ಸವಾರಿಗೆ ಕುದುರೆ ಗಾಡಿಗಳನ್ನು ಬಳಸುವಂತಿಲ್ಲ. ಡಿನ್ನರ್ ವೇಳೆ ಪೈಪ್ ಬ್ಯಾಂಡ್ ನುಡಿಸುವ ಪದ್ಧತಿ ಕೈಬಿಡಲಾಗಿದೆ. ಪುಲ್ಲಿಂಗ್ ಔಟ್ ಸಮಾರಂಭವನ್ನೂ ನಿಷೇಧಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬ್ರಿಟಿಷ್ ವಸಾಹತುಶಾಹಿ ಕಾಲದ ಈ ಕ್ರಮಗಳನ್ನು ಕೈಬಿಡಲಾಗಿದೆ ಎಂದು ಭೂಸೇನಾ ಚೀಫ್ ಜನರಲ್ ಮನೋಜ್ ಪಾಂಡೆ ಪ್ರಕಟಿಸಿದಾರೆ.
ವಸಾಹತುಶಾಹಿ ಕಾಲದ ಅನೇಕ ಪದ್ಧತಿಗಳನ್ನು ಕೈಬಿಡಲಾಗುತ್ತಿದೆ ಅಥವಾ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದರಂತೆ, ಹಿರಿಯ ಅಧಿಕಾರಿಗಳು ಇನ್ನು ಮುಂದೆ ಸವಾರಿಗೆ ಕುದುರೆಗಾಡಿ (ಬಗ್ಗೀ) ಬಳಸುವಂತಿಲ್ಲ. ಹಾಗೆಯೇ ಅಧಿಕಾರಿಗಳ- ಪ್ರತಿಷ್ಠಿತರ ಡಿನ್ನರ್ ಸಂದರ್ಭದಲ್ಲಿ ನುಡಿಸಲಾಗುತ್ತಿದ್ದ ಪೈಪ್ ಬ್ಯಾಂಡ್ ಅನ್ನು ಕೂಡ ನಿಷೇಧಿಸಲಾಗಿದೆ. ಕೈಬಿಡಲಾಗಿರುವ ಇನ್ನೊಂದು ಪದ್ಧತಿಯೆಂದರೆ ನಿವೃತ್ತರಾಗುತ್ತಿರುವ ಹಿರಿಯ ಅಧಿಕಾರಿಗಳು ಕುಳಿತ ವಾಹನವನ್ನು ಅವರ ಕೈಕೆಳಗಿನ ರೆಜಿಮೆಂಟ್ ಯೋಧರು ಕೈಯಲ್ಲಿ ಎಳೆಯುತ್ತಿದ್ದ ಪುಲ್ಲಿಂಗ್ ಔಟ್ ಸೆರೆಮನಿ.
ಇತ್ತೀಚೆಗಿನ ದಿನಗಳಲ್ಲಿ ಈ ರೂಢಿಗಳೂ ಕೂಡ ಕಡಿಮೆಯಾಗಿದ್ದವು. ಅಲ್ಲೊಂದು ಇಲ್ಲೊಂದು ಪೈಪ್ ಬ್ಯಾಂಡ್, ಕುದುರೆ ಬಗ್ಗೀ ಉಳಿದುಕೊಂಡಿವೆ. ಹೀಗೇ ವಸಾಹತುಶಾಹಿ ಕಾಲದ ಗುರುತಿನ ಹೆಸರುಗಳನ್ನೂ ಕೈಬಿಟ್ಟು ಹೊಸ ಹೆಸರುಗಳನ್ನು ರೆಜಿಮೆಂಟ್‌ಗಳಿಗೆ, ಸೈನ್ಯದ ಕಟ್ಟಡಗಳಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ: Indian Army: ಭಾರತೀಯ ಸೇನೆ ನೂತನ ಉಪಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಸುಚೇಂದ್ರ ಕುಮಾರ್ ನೇಮಕ