ಗುವಾಹಟಿ: ಕಚೇರಿ ಹಾಗೂ ಮನೆಯಲ್ಲಿ ಕೆಲಸ ಮಾಡಲು ಆಗದವರು, ಮನೆಯಲ್ಲಿ ಒಬ್ಬರಿಗೇ ಎಲ್ಲವನ್ನೂ ನಿಭಾಯಿಸಲು ಆಗದವರು ಅನುಕೂಲವಾಗಲಿ ಎಂದು ಮನೆಗೆಲಸದವರನ್ನು ನೇಮಿಸಿಕೊಳ್ಳುತ್ತಾರೆ. ಮನೆಗೆಲಸ ಮಾಡುವವರಿಗೂ ಇದರಿಂದ ಅನುಕೂಲವಾಗುತ್ತದೆ. ಆದರೆ, ಅಸ್ಸಾಂನಲ್ಲಿ ಮನೆಗೆಲಸಕ್ಕೆಂದು ನೇಮಿಸಿದ ಬಾಲಕಿ ಮೇಲೆಯೇ ಸೈನಿಕ (Army Officer) ಹಾಗೂ ಅವರ ಪತ್ನಿಯು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಸೈನಿಕ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ.
ಅಸ್ಸಾಂ ರೈಫಲ್ಸ್‌ನಲ್ಲಿ ಕಾರ್ಯನಿರ್ವಹಿಸುವ ಮೇಜರ್ ಶೈಲೇಂದ್ರ ಯಾದವ್ ಹಾಗೂಅವರ ಪತ್ನಿ ಕಿಮ್ಮಿ ರ‍್ಯಾಲ್ಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹ್ಯಾಫ್ಲಾಂಗ್ ಪ್ರದೇಶದಲ್ಲಿ ದಂಪತಿ ವಾಸವಿದ್ದು, ಇವರು 16 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆಂದು ನೇಮಿಸಿದ್ದಾರೆ. ಆದರೆ, ಆ ಬಾಲಕಿಯ ಹಲ್ಲು ಮುರಿಯುವ ಹಾಗೆ, ಮೂಗಿಗೆ ಗಾಯವಾಗುವ ಹಾಗೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾಲಕಿಯ ಮೈಮೇಲೆ ಸುಟ್ಟ ಗಾಯಗಳೂ ಕಾಣಿಸಿಕೊಂಡಿವೆ. ಅಷ್ಟರಮಟ್ಟಿಗೆ ದಂಪತಿಯು ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಎರಡು ವರ್ಷದಿಂದ ಕಿರುಕುಳ
“ಕಳೆದ ಎರಡು ವರ್ಷದಿಂದ ಬಾಲಕಿಯು ಮೇಜರ್ ಶೈಲೇಂದ್ರ ಯಾದವ್ ನಿವಾಸದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ, ಬಾಲಕಿಗೆ ಇವರು ತುಂಬ ಕಿರುಕುಳ ನೀಡಿದ್ದಾರೆ. ಬಾಲಕಿಯ ತಲೆಯಿಂದ ಕಾಲಿನವರೆಗೆ ಗಾಯಗಳಿವೆ. ಆಕೆಯ ಹಲ್ಲುಗಳು ಮುರಿದಿವೆ, ಮೂಗಿಗೆ ಗಂಭೀರವಾಗಿ ಗಾಯಗಳಾಗಿವೆ. ಇದರಿಂದಾಗಿ ಬಾಲಕಿಯ ಪರಿಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿಯನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?
ಮೇಜರ್ ಶೈಲೇಂದ್ರ ಯಾದವ್ ಅವರು ಇದಕ್ಕೂ ಮೊದಲು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಹ್ಯಾಫ್ಲಾಂಗ್‌ಗೆ ವರ್ಗಾವಣೆಯಾದ ಬಳಿಕ ಕಿಮಿ ರ‍್ಯಾಲ್ಸನ್ ಅವರನ್ನು ಮದುವೆಯಾಗಿದ್ದಾರೆ. ಕಿಮಿ ಅವರು ತಮ್ಮ ಮನೆಯ ಕೆಲಸಕ್ಕೆ ಅನುಕೂಲವಾಗಲಿ ಎಂದು ಸಾಂಕಿಗಂಜ್ ಗ್ರಾಮದಿಂದ ಬಾಲಕಿಯೊಬ್ಬಳನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ಬಾಲಕಿಗೆ ಹೆಚ್ಚು ಕೆಲಸ ಕೊಡುವ ಜತೆಗೆ ಹಲ್ಲೆಯನ್ನೂ ಮಾಡಿದ್ದು, ಈಗ ಮೇಜರ್ ಹಾಗೂ ಅವರ ಪತ್ನಿಯು ಕಂಬಿ ಎಣಿಸಬೇಕಾಗಿದೆ.