Site icon Vistara News

ಉಗ್ರರ ಗುಂಡಿನ ದಾಳಿ; 8 ವರ್ಷದಿಂದ ಕೋಮಾದಲ್ಲಿದ್ದ ಯೋಧ ಇನ್ನಿಲ್ಲ, ವಿಧಿ ಬರಹ ಬಲು ಘೋರ

Lt Col Karanbir Singh Natt

Army Officer Dies After 8 Years In Coma, Was Shot In Face By Terrorists

ಚಂಡೀಗಢ: ಕಳೆದ ಎಂಟು ವರ್ಷಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ವೀರ ಯೋಧ, ಲೆಫ್ಟಿನೆಂಟ್‌ ಕರ್ನಲ್ ಕರಣ್‌ಬೀರ್‌ ಸಿಂಗ್‌ ನಟ್‌ (Lt Col Karanbir Singh Natt)‌ ಅವರು ನಿಧನರಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಎಂಟು ವರ್ಷದ ಹಿಂದೆ ಉಗ್ರರ ವಿರುದ್ಧ ಹೋರಾಡುವಾಗ ಮುಖಕ್ಕೆ ಗುಂಡು ತಗುಲಿದ ಬಳಿಕ ಕೋಮಾದಲ್ಲಿಯೇ ಇದ್ದ ಕರಣ್‌ಬೀರ್‌ ಸಿಂಗ್‌ ನಟ್‌ ಅವರು ನಿಧನ ಹೊಂದಿದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿರುವ ಸೇನೆಯ ಆಸ್ಪತ್ರೆಯಲ್ಲಿ (Military Hospital) ಅವರು ಉಸಿರು ಚೆಲ್ಲಿದ್ದಾರೆ.

ಪಂಜಾಬ್‌ ಸೈನಿಕ ಕಲ್ಯಾಣ ಇಲಾಖೆ ನಿರ್ದೇಶಕ, ನಿವೃತ್ತ ಬ್ರಿಗೇಡಿಯರ್‌ ಬಿ.ಎ.ದಿಲ್ಲೋನ್‌ ಅವರು ಕರಣ್‌ಬೀರ್‌ ಸಿಂಗ್‌ ನಟ್‌ ಅವರ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ಎಂಟು ವರ್ಷದಿಂದ ಸಾವಿನ ವಿರುದ್ಧ ಹೋರಾಡಿದ್ದ ಕರಣ್‌ಬೀರ್‌ ಸಿಂಗ್‌ ನಟ್‌ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ಕರಣ್‌ಬೀರ್‌ ಸಿಂಗ್‌ ನಟ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ದೇಶಕ್ಕಾಗಿ ಹೋರಾಡಿ, ಪ್ರಾಣ ತ್ಯಾಗ ಮಾಡಿದ ಸೈನಿಕನನ್ನು ಕೊಂಡಾಡಿದ್ದಾರೆ.

2015ರಲ್ಲಿ ಏನಾಗಿತ್ತು?

160 ಟೆರಿಟೋರಿಯಲ್‌ ಆರ್ಮಿ ಬೆಟಾಲಿಯನ್‌ನ ಸೆಕೆಂಡ್‌ ಇನ್‌ ಕಮಾಂಡ್‌ ಆಗಿದ್ದ ಅವರು 2015ರ ನವೆಂಬರ್‌ 25ರಂದು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. ಕುಪ್ವಾರ ಜಿಲ್ಲೆಯ ಗ್ರಾಮವೊಂದರ ಬಳಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಇದೇ ವೇಳೆ ಉಗ್ರರು ಕೂಡ ಗುಂಡಿನ ದಾಳಿ ಆರಂಭಿಸಿದ್ದರು. ಆಗ ಕರಣ್‌ಬೀರ್‌ ಸಿಂಗ್‌ ನಟ್‌ ಅವರ ಮುಖಕ್ಕೆ ಗುಂಡು ತಗುಲಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಮೊದಲು ಶ್ರೀನಗರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಜಲಂಧರ್‌ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಇದನ್ನೂ ಓದಿ: Terror Attack: ಉಗ್ರರ ಹೊಂಚು ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮ

ಕರಣ್‌ಬೀರ್‌ ಸಿಂಗ್‌ ನಟ್‌ ಅವರನ್ನು ಉಳಿಸಲು ದೆಹಲಿಯಲ್ಲಿ ವೈದ್ಯರು ಹಲವು ಬಾರಿ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರು. ಇಷ್ಟಾದರೂ ಎಂಟು ವರ್ಷದಿಂದ ಕರಣ್‌ಬೀರ್‌ ಸಿಂಗ್‌ ನಟ್‌ ಅವರು ಕೋಮಾದಲ್ಲಿಯೇ ಇದ್ದರು. ಕರಣ್‌ಬೀರ್‌ ಸಿಂಗ್‌ ನಟ್‌ ಅವರು 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಟೆರಿಟೋರಿಯಲ್‌ ಆರ್ಮಿ ಸೇರುವ ಮೊದಲು ಅವರು ಬ್ರಿಗೇಡ್‌ ಆಫ್‌ ಗಾರ್ಡ್ಸ್‌ನಲ್ಲಿ ಶಾರ್ಟ್‌ ಸರ್ವಿಸ್‌ ಕಮಿಷನ್‌ ಆಫೀಸರ್‌ ಆಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಕರಣ್‌ಬೀರ್‌ ಸಿಂಗ್‌ ನಟ್‌ ಅವರು ಟೆರಿಟೋರಿಯಲ್‌ ಆರ್ಮಿಗೆ ಸೇರ್ಪಡೆಯಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version