| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತೀಯ ಸೇನಾಪಡೆಗಳನ್ನು ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಗಳೆಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಈ ಮೂರು ವಿಭಾಗಗಳೂ ಬೇರೆ ಬೇರೆ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುವಂತೆ, ಈ ಪಡೆಗಳ ಸೆಲ್ಯೂಟ್ (Army Salute) ಸಹ ಒಂದರಿಂದ ಒಂದು ಭಿನ್ನವಾಗಿದೆ. ಯಾಕೆ ಮೂರು ಪಡೆಗಳು ಯೋಧರು ಭಿನ್ನ ರೀತಿಯಲ್ಲಿ ಸೆಲ್ಯೂಟ್ ಮಾಡುತ್ತಾರೆಂದು ಯೋಚಿಸಿದ್ದೀರಾ? ಬನ್ನಿ ಹಾಗಿದ್ದರೆ, ಸೆಲ್ಯೂಟ್‌ಗಳ ನಡುವಿನ ಭಿನ್ನತೆಯ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳೋಣ.
ಭಾರತೀಯ ಭೂಸೇನೆ
ಭಾರತೀಯ ಭೂಸೇನೆಯ ಸೆಲ್ಯೂಟ್‌ನಲ್ಲಿ ಸೆಲ್ಯೂಟ್ ಮಾಡುವವರ ಹಸ್ತ ಎದುರುಗಡೆ ಇರುವವರೆಡೆ ಮುಖ ಮಾಡಿರುತ್ತದೆ. ಈ ತೆರೆದ ಅಂಗೈ ವಿಶ್ವಾಸವನ್ನು ಮೂಡಿಸುತ್ತದೆ. ಭೂಸೇನೆಯ ಸೆಲ್ಯೂಟ್‌ಗೆ ಬಲಗೈ ಬಳಸಲಾಗುತ್ತದೆ. ಅದು ಸೆಲ್ಯೂಟ್ ಮಾಡುತ್ತಿರುವಾತ ಆಯುಧ ಹಿಡಿದಿಲ್ಲ ಎಂಬುದನ್ನು ಸಂಕೇತಿಸುತ್ತದೆ. ಬಲಗೈ ಸೆಲ್ಯೂಟ್ ಮಾಡುತ್ತಿರುವುದರಿಂದ ಆತನಿಗೆ ಆಯುಧ ಬಳಸಲೂ ಸಾಧ್ಯವಾಗುವುದಿಲ್ಲ.
ಭಾರತೀಯ ನೌಕಾಸೇನೆ
ಭಾರತೀಯ ನೌಕಾಸೇನೆಯ ಸೆಲ್ಯೂಟ್‌ನಲ್ಲಿ ಹಸ್ತ ನೆಲದೆಡೆಗೆ ನೋಡುತ್ತಿರುತ್ತದೆ. ಈ ರೀತಿ ಸೆಲ್ಯೂಟ್ ಮಾಡುವುದರಿಂದ ನೌಕಾಪಡೆಯ ನಾವಿಕರ ಕೈಯಲ್ಲಿ ಹಿಡಿದಿರಬಹುದಾದ ಕೊಳೆ ಹಾಗೂ ಗ್ರೀಸ್ ಎದುರಿರುವವರಿಗೆ ಕಾಣಿಸುವುದಿಲ್ಲ.
ಭಾರತೀಯ ವಾಯಪಡೆ
ಭಾರತೀಯ ವಾಯುಪಡೆಯ ಸೆಲ್ಯೂಟ್‌ನಲ್ಲಿ ಹಸ್ತ 45 ಡಿಗ್ರಿ ಕೋನದಲ್ಲಿ ಆಕಾಶದೆಡೆ ಚಾಚಿರುತ್ತದೆ. ಮಾರ್ಚ್ 2006ರ ಬಳಿಕ, ವಾಯುಪಡೆಯ ಸಿಬ್ಬಂದಿ ಈ ರೀತಿಯ ಸೆಲ್ಯೂಟ್ ನೀಡತೊಡಗಿದರು. ಇದಕ್ಕೂ ಮೊದಲು, ವಾಯುಪಡೆ ಹಾಗೂ ಭೂಸೇನಾ ಸೆಲ್ಯೂಟ್‌ಗಳು ಒಂದೇ ರೀತಿಯಾಗಿದ್ದವು. ಈ ಮಾದರಿಯ ಸೆಲ್ಯೂಟ್ ನೆಲದಿಂದ ಆಗಸಕ್ಕೆ ಏರುತ್ತಿರುವ ವಿಮಾನವನ್ನು ಸಂಕೇತಿಸುತ್ತದೆ. “ನಭ ಸ್ಪರ್ಶಂ ದೀಪ್ತಂ’ (ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ) ಎಂಬ ಭಾರತೀಯ ವಾಯುಪಡೆಯ ಧ್ಯೇಯವಾಕ್ಯಕ್ಕೂ ಇದು ಸೂಕ್ತವಾಗುತ್ತದೆ.
ಇದನ್ನೂ ಓದಿ | ಸೇನಾಪಡೆಗೆ ಯುವಜನರ ಸೇರ್ಪಡೆಗೆ ಅಗ್ನಿಪಥ್ ಯೋಜನೆ ಅಗತ್ಯ