ನವದೆಹಲಿ: ಭಾರತೀಯ ಸೇನೆಯ ಉಪಮುಖ್ಯಸ್ಥರಾಗಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ಲೆ.ಜೆನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ನೇಮಕಗೊಂಡಿದ್ದಾರೆ. ವಿಶ್ವದ ಅತ್ಯಂತ ಶಕ್ತಿಯುತ ಸೇನೆಯಲ್ಲಿ ಒಂದಾಗಿರುವ Indian Armyಯ ಮುಖ್ಯಸ್ಥರ ನಂತರದ ಎರಡನೇ ಸ್ಥಾನದಲ್ಲಿ ಕರ್ನಾಟಕ ಮೂಲದವರೊಬ್ಬರು ನೇಮಕವಾಗಿರುವುದು ನಾಡಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಸದ್ಯ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿರುವ ಜನರಲ್ ಮನೋಜ್ ನರವಣೆ ಅವರು ಶನಿವಾರ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ, ಉಪ ಮುಖ್ಯಸ್ಥರಾಗಿದ್ದ ಲೆ.ಜ. ಮನೋಜ್ ಪಾಂಡೆ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಮನೋಜ್ ಪಾಂಡೆಯವರ ತೆರವಾದ ಸ್ಥಾನಕ್ಕೆ ಮೇ 1ರಂದು ಲೆ, ಜ. ಬಿ.ಎಸ್. ರಾಜು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ | ಮೋದಿ ಭೇಟಿಗೆ 2 ದಿನ ಮುನ್ನ ಜಮ್ಮುವಿನಲ್ಲಿ ಗುಂಡಿನ ಸದ್ದು: ಬಸ್ ಮೇಲೆ ದಾಳಿ
ಲೆ.ಜೆನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು
ಬಿಜಾಪುರದ ಸೈನಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (NDA) ತರಬೇತಿ ಪಡೆದು 1984ರ ಡಿಸೆಂಬರ್ 15ರಂದು ‘ಜಾಟ್’ ರೆಜಿಮೆಂಟ್ʼಗೆ ಪ್ರವೇಶ ಪಡೆದರು. ಪ್ರಸ್ತುತ ಸೇನೆಯ ಕಾರ್ಯಾಚರಣೆಯ ನಿರ್ದೇಶಕ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಪೂರ್ವ ಲಡಾಖ್‌ನ ಸೇನಾ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮನೋಜ್ ಪಾಂಡೆ ಅವರು ಭಾಗಿಯಾಗಿದ್ದ ಆಪರೆಷನ್ ಪರಾಕ್ರಮದಲ್ಲಿ ಸೋಮಶೇಖರ್ ಕೂಡ ಒಮದು ರೆಜಿಮೇಂಟ್ ನ ನೇತೃತ್ವ ವಹಿಸಿದ್ದರು.
ಯಾಕೆ ಸೋಮಶೇಖರ್ ಅವರಿಗೆ ಈ ಜವಾಬ್ಧಾರಿ?
ಸೋಮಶೇಖರ್ ಅವರು 38 ವರ್ಷಗಳ ಕಾಲ ಸೇನೆಯಲ್ಲಿ ಸೇವೆಗೈದ ಅನುಭವ ಹೊಂದಿದ್ದಾರೆ. ಅಲ್ಲದೆ, ಈ ಅವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ ಗರಿಮೆ ಇವರಿಗಿದೆ.
- ಸಮರ್ಥ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ.
- ಪಶ್ಚಿಮ ಗಡಿ ಭಾಗ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಿದ ಆಪರೇಷನ್ ಪರಾಕ್ರಮ್ ನ ಒಂದು ಬೆಟಾಲಿಯನ್ ನೇತೃತ್ವ ವಹಿಸಿದ ಅನುಭವ.
- ಲೈನ್ ಆಫ್ ಕಂಟ್ರೋಲ್ ಭಾಗದಲ್ಲಿ ಉರಿ ಬ್ರಿಗೇಡ್ ನ ಕಮಾಂಡರ್. ಹಾಗೂ ಭಾರತೀಯ ಸೇನೆಯ ತರಬೇತಿಯಲ್ಲಿ ಕಮಾಂಡರ್.
- ಸೇನೆಯ ಮುಖ್ಯ ಕಾರ್ಯಾಲಯದಲ್ಲಿ ಸೇನೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯ ಜವಾಬ್ಧಾರಿ ಹಾಗೂ ತಂಡ ನಿರ್ಮಾಣದ ಅನುಭವ.
- UNOSOM II (UN peacekeeping and humanitarian missions II),ಯ ಭಾಗವಾಗಿ ಸೊಮಾಲಿಯದ ಮುಖ್ಯ ವಾಯು ಕಾರ್ಯಾಚರಣೆ ಹಾಗೂ ಹೆಲಿಕಾಪ್ಟರ್ ಉಡಾವಣೆಯ ನೇತೃತ್ವ.
ಪ್ರಶಸ್ತಿಗಳು:
ಸೋಮಶೇಖರ್ ಅವರು ಸೇನೆಯಲ್ಲಿ ಮಾಡಿದ ಸೇವೆ ಹಾಗೂ ಅಪೂರ್ವ ಸಾಧನೆಗೆ ಭಾರತ ಸರ್ಕಾರವು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
- ಉತ್ತಮ್ ಯುದ್ಧ ಸೇವಾ ಪದಕ
- ಯುದ್ಧ ಸೇವಾ ಪದಕ
- ಅತಿ ವಿಶಿಷ್ಟ ಸೇವಾ ಪದಕ
ಕನ್ನಡಿಗರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರಿರುವುದಕ್ಕೆ ನಾಡಿನಾದ್ಯಂತ ಹರ್ಷ ವ್ಯಕ್ತವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, “ಕನ್ನಡಿಗರಾದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣ & ಸಂಭ್ರಮದ ಸಂದರ್ಭ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಪರಂಪರೆಯ ಇನ್ನೊಂದು ಗರಿ ಜನರಲ್ ಬಿ.ಎಸ್.ರಾಜು ಅವರು.” ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್ ಮಾಡಿ, ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಚಿಕ್ಕಮಗಳೂರಿನ ಅಜ್ಜಂಪುರ ಮೂಲದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ನಮ್ಮ ಸೇನೆ ಮತ್ತಷ್ಟು ಬಲಿಷ್ಟವಾಗಲಿ” ಎಂದು ತಿಳಿಸಿದ್ದಾರೆ.