ರಾಂಚಿ: ನಾನು ತಪ್ಪಿತಸ್ಥ ಎನ್ನುವುದಾದರೆ, ನನ್ನನ್ನು ಏಕೆ ವಿಚಾರಣೆ ಮಾಡುತ್ತಿದ್ದೀರಿ? ನಿಮಗೆ ಸಾಧ್ಯವಾದರೆ, ಬನ್ನಿ ಅರೆಸ್ಟ್ ಮಾಡಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರು ಕೇಂದ್ರ ತನಿಖಾ ಸಂಸ್ಥೆಗಳಿಗೆ ಸವಾಲು ಹಾಕಿದ್ದಾರೆ. ಬುಡಕಟ್ಟು ಸಮುದಾಯದ ಮುಖ್ಯಮಂತ್ರಿ(ಹೇಮಂತ್ ಸೋರೆನ್)ಯೊಬ್ಬರಿಗೆ ಕಿರುಕುಳ ನೀಡುವುದಕ್ಕಾಗಿ ಜಾರಿ ನಿರ್ದೇಶನಾಲಯವು ತನಿಖೆಗೆ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಡಳಿತರೂಢ ಬಿಜೆಪಿಯನ್ನು ಯಾರಾದರೂ ವಿರೋಧಿಸಿದರೆ ಅವರನ್ನು ಹತ್ತಿಕ್ಕುವುದಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೊಂದು ಸಂಚು. ಇದಕ್ಕೆ ತಕ್ಕ ಉತ್ತರವನ್ನು ನೀಡಲಾಗುವುದು ಎಂದು ಪಕ್ಷದ ಕಾರ್ಯಕರ್ತರನ್ನು ರಾಂಚಿಯಲ್ಲಿ ಉದ್ದೇಶಿಸಿ ಅವರು ಹೇಳಿದರು.
ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಮ್ಮ ಒಡೆತನದ ಗಣಿ ಕಂಪನಿಗಳಿಗೆ ಅನುಮತಿ ನೀಡುವುದಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ಶಾಸಕ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಬಿಜೆಪಿ ದೂರು ನೀಡಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್ ನೀಡಿತ್ತು. ಅವರು ಗುರುವಾರ ರಾಂಚಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾಗಬೇಕಿತ್ತು.
ವಿಚಾರಣೆಗಾಗಿ ಇ.ಡಿ ಕಚೇರಿಗೆ ಗೈರು ಹಾಜರಾಗಿರುವ ಅವರು, ತಮ್ಮ ಮನೆಯ ಮುಂದೆ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ಮಾಡಿದರು. ಅಲ್ಲದೇ, ತಾಖತ್ ಇದ್ದರೆ, ತನಿಖಾ ಸಂಸ್ಥೆಗಳು ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ | ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್ ಸೊರೆನ್