ನವದೆಹಲಿ: ಅರುಣಾಚಲ ಪ್ರದೇಶದ (Arunachal Pradesh) ವಿಚಾರದಲ್ಲಿ ಪದೇಪದೆ ಮೂಗು ತೂರಿಸುವ, ತನ್ನ ದೇಶದ ಮ್ಯಾಪ್‌ನಲ್ಲಿ ಸೇರಿಸುವ ಮೂಲಕ ಉದ್ಧಟತನ ಮೆರೆಯುವ, ಭಾರತದ್ದೇ ಪ್ರಧಾನಿ, ಸಿಎಂ, ಸಚಿವ ಭೇಟಿ ನೀಡಿದರೂ ತಗಾದೆ ತೆಗೆಯುವ ಕಪಟಿ ರಾಷ್ಟ್ರ ಚೀನಾಗೆ (China) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿರುಗೇಟು ನೀಡಿದ್ದಾರೆ. “ಅರುಣಾಚಲ ಪ್ರದೇಶವು ಹಿಂದೆಯೂ ಭಾರತದ್ದಾಗಿತ್ತು. ಈಗಲೂ ಭಾರತದ್ದಾಗಿದೆ ಹಾಗೂ ಮುಂದೆಯೂ ಭಾರತದ್ದೇ ಆಗಿರಲಿದೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಚೀನಾಗೆ ಸಂದೇಶ ರವಾನಿಸಿದ್ದಾರೆ.
“ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೇಂದ್ರದ ಯೋಜನೆಗಳು ಕ್ಷಿಪ್ರವಾಗಿ ಅರುಣಾಚಲ ಪ್ರದೇಶವನ್ನು ತಲುಪುತ್ತಿವೆ. ಇದರೊಂದಿಗೆ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲಾಗುತ್ತಿದೆ. ವಿಕಸಿತ ಭಾರತ, ವಿಕಸಿತ ಈಶಾನ್ಯ ಎಂಬ ಯೋಜನೆ ಅನ್ವಯ ಕಳೆದ ತಿಂಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 55 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ತವಾಂಗ್‌ಗೆ ಸಂಪರ್ಕ ಕಲ್ಪಿಸುವ, ಎಲ್ಲ ಹವಾಮಾನಗಳಲ್ಲೂ ಕಾರ್ಯನಿರ್ವಹಿಸುವ ಸೆಲಾ ಸುರಂಗವು ಗೇಮ್ ಚೇಂಜರ್ ಆಗಿದೆ” ಎಂದು ಅಸ್ಸಾಂ ಟ್ರಿಬ್ಯೂನ್‌ಗೆ ನೀಡಿದ ಸಂದರ್ಶನದ ವೇಳೆ ಮೋದಿ ಹೇಳಿದ್ದಾರೆ.
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಂಗ್ ಕ್ಸಿಯೋಗಾಂಗ್ ಅವರು ಅರುಣಾಚಲ ಪ್ರದೇಶದ ಕುರಿತು ಉದ್ಧಟತನದ ಹೇಳಿಕೆ ನೀಡಿದ್ದರು. “ಭಾರತವು ಅಕ್ರಮವಾಗಿ ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಿದೆ. ಅರುಣಾಚಲ ಪ್ರದೇಶವು ಎಂದಿಗೂ ಚೀನಾದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳನ್ನು ಚೀನಾ ಖಡಾಖಂಡಿತವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದರು. ಇದಾದ ಬಳಿಕ ಭಾರತ ಕೂಡ ಚೀನಾಗೆ ಸರಿಯಾಗಿಯೇ ತಿರುಗೇಟು ನೀಡಿತ್ತು. ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕಿಲ್ಲ ಎಂದು ತಪರಾಕಿ ನೀಡಿತ್ತು.
ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತದೆ. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದನ್ನು ವಿರೋಧಿಸಿದ್ದ ಚೀನಾ, ನಮ್ಮ ಭೂಪ್ರದೇಶ ಎಂದು ಉದ್ಧಟತನದ ಹೇಳಿಕೆ ನೀಡಿತ್ತು. ಇಂತಹ ಪರಿಸ್ಥಿತಿಯ ಮಧ್ಯೆಯೇ, ಅಮೆರಿಕವು ಭಾರತದ ಪರವಾಗಿ ನಿಂತಿರುವುದು, ಅರುಣಾಚಲ ಪ್ರದೇಶವು ಭಾರತದ್ದು ಎಂಬುದಾಗಿ ಹೇಳಿರುವುದು ಚೀನಾಗೆ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ, ಮೋದಿ ಕೂಡ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಮೋದಿ ಮತ್ತೆ ಪಿಎಂ ಆಗಲೆಂದು 13 ಸಾವಿರ ಅಡಿಯಿಂದ ಸ್ಕೈ ಡೈವ್ ಮಾಡಿದ ವಿಜಯಪುರ ಫ್ಯಾನ್ಸ್!