ಬೆಂಗಳೂರು: ಈಗಾಗಲೆ ನವದೆಹಲಿ, ಪಂಜಾಬ್‌ನಲ್ಲಿ ಸರ್ಕಾರ ರಚಿಸಿರುವ ಆಮ್ ಆದ್ಮಿ ಪಕ್ಷದ ( Aam Aadmi Party) ಮುಂದಿನ ಗುರಿ ಕರ್ನಾಟಕದಲ್ಲಿ ಗದ್ದುಗೆ ಏರುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejrival) ಗುರುವಾರ ತಿಳಿಸಿದ್ದಾರೆ.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಹಾಸಮಾವೇಶ ಹಾಗೂ ಆಮ್ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ್ ಮಾತಾ ಕೀ, ಇನ್‌ಕ್ವಿಲಾಬ್, ವಂದೇ ಮಾತರಂ ಘೋಷಣೆಗಳ ಮೂಲಕ ಭಾಷಣವನ್ನು ಆರಂಭಿಸಿದ ಕೇಜ್ರಿವಾಲ್, ನನಗೆ ಕನ್ನಡ ಬರುವುದಿಲ್ಲವಾದ್ಧರಿಂದ ಹಿಂದಿಯಲ್ಲಿ ಮಾತನಾಡುತ್ತೇನೆ, ಅದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಹೇಳುತ್ತಲೇ ಮಾತು ಮುಂದುವರಿಸಿದರು.
ಎರಡು ದಿನದ ಹಿಂದೆ ನನಗೆ ಹಲ್ಲಿನ ಆಪರೇಷನ್ ಆಗಿದೆ, ತುಂಬಾ ನೋವಿದೆ. ಆದರೆ ಇಲ್ಲಿ ಕರ್ನಾಟಕದಲ್ಲಿ ರೈತರು ಸೇರುತ್ತಿದ್ದಾರೆ ಎಂಬ ಕಾರಣಕ್ಕೆ ಬಂದಿದ್ದೇನೆ. ಇದಕ್ಕಾಗಿ ನಾನು ಅನೇಕ ಪೇನ್ ಕಿಲ್ಲರ್ ಪಡೆದಿದ್ದೇನೆ. ರಾಮಚಂದ್ರ ದೇವರ ಅವತಾರ, ಅವರ ವಿರುದ್ಧ ಶತೃತ್ವ ಕಟ್ಟಿಕೊಳ್ಳಬೇಡ ಎಂದು ರಾವಣನ ಸಹೋದರ, ಪತ್ನಿ ಎಲ್ಲರೂ ತಿಳಿಹೇಳಿದರು. ಆದರೆ ಈ ಮಾತನ್ನು ಕೇಳದ ಅಹಂಕಾರಿ ರಾವಣನ ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು.
ಇದನ್ನೂ ಓದಿ | Covid-19 | ಮತ್ತೆ ಮಾಸ್ಕ್ ದಂಡ ಜಾರಿ ಚಿಂತನೆ: ನವದೆಹಲಿಯಲ್ಲಿ ಏರಿಕೆಯತ್ತ ಸೋಂಕು
ಅದೇ ರೀತಿ ಕೇಂದ್ರ ಸರ್ಕಾರಕ್ಕೂ ಅಹಂಕಾರವಿತ್ತು. ಮೂರು ಕ್ರೂರ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತು. ಇದನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ರೈತರು ಬೀದಿಗಿಳಿಯುತ್ತಾರೆ ಎಂದು ತಿಳಿ ಹೇಳಿದರೂ ಕೇಳಲಿಲ್ಲ. ಕೊನೆಗೆ 13 ತಿಂಗಳ ನಂತರ ವಾಪಸ್ ಪಡೆದರು. ನೀವೆಲ್ಲರೂ ಸೇರಿ ಕೇಂದ್ರ ಸರ್ಕಾರದ ಅಹಂಕಾರವನ್ನು ಹೊಸಕಿಹಾಕುವ ಮಹತ್ಕಾರ್ಯವನ್ನು ಮಾಡಿದ್ದೀರ. ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದರು.
ರಾಮಲೀಲಾ ಮೈದಾನದಲ್ಲಿ ಕುಳಿತು, ಭ್ರಷ್ಟಾಚಾರ ಮುಗಿಸಿ ಎನ್ನುತ್ತಿದ್ದೆವು. ಹಾಗಾದರೆ ನೀವೇ ರಾಜಕೀಯಕ್ಕೆ ಇಳಿಯಿರಿ, ನೀವೇ ಬದಲಾಯಿಸಿ ಎಂದರು. ನೀವು ಸಾಮಾನ್ಯ ಜನರನ್ನು ಕೆಣಕಬೇಡಿ ಎಂದು ಹೇಳಿದರೂ ಕೇಳಿದರು. ನಮಗೆ ನೀಡಿದ ಆಹ್ವಾನವನ್ನು ಸ್ವೀಕರಿಸಿದೆವು. ಇದರ ನಂತರ ದೆಹಲಿಯಲ್ಲಿ ಸರ್ಕಾರವಾಯಿತು, ಆನಂತರ ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರವಾಯಿತು. ಈಗ ಕರ್ನಾಟಕದಲ್ಲಿ ಸರ್ಕಾರ ರಚಿಸಬೇಕಿದೆ ಎಂದು ಕರೆ ನೀಡಿದರು.
ಆಯ್ಕೆ ನಿಮ್ಮದು
ಕರ್ನಾಟಕದಲ್ಲಿ ಹಿಂದಿನಸ ರ್ಕಾರ 20% ಸರ್ಕಾರವಿತ್ತು. ಈಗಿನದ್ದು 40% ಸರ್ಕಾರ. ದೆಹಲಿಯಲ್ಲಿ 0% ಸರ್ಕಾರವಿದೆ. ದೆಹಲಿಯಲ್ಲಿ ಕಟ್ಟರ್ ಪ್ರಾಮಾಣಿಕ ಸರ್ಕಾರವಿದೆ ಎಂದು ಸ್ವತಃ ಪ್ರಧಾನಮಂತ್ರಿಯವರಿಂದ ಪ್ರಮಾಣಪತ್ರ ಪಡೆದುಬಂದಿದ್ದೇನೆ. ನನ್ನ ಮೇಲೆ ಸಿಬಿಐ, ಆದಾಯ ತೆರಿಗೆ ಸೇರಿ ಎಲ್ಲರಿಂದ ದಾಳಿ ನಡೆಯಿತು. ಆದರೆ ಏನೂ ಸಿಗಲಿಲ್ಲ. ದೇಶದಲ್ಲಿ ಒಬ್ಬನೇ ಪ್ರಾಮಾಣಿಕ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಂದು ಪ್ರಮಾಣಪತ್ರ ನೀಡಬೇಕಾಯಿತು. ಹಾಗಾಗಿ 40%, 20% ಲೆಕ್ಕವನ್ನು ಬಂದ್ ಮಾಡಬೇಕಿದೆ, ಆಯ್ಕೆ ನಿಮ್ಮದು. ನನಗೆ ರಾಜಕೀಯ ಮಾಡಲು ಬರುವುದಿಲ್ಲ. ಆದರೆ ನನಗೆ ಸಾಮಾನ್ಯ ಜನರ ನೋವು ಅರ್ಥವಾಗುತ್ತದೆ ಎಂದರು.
ಶಿಕ್ಷಣ, ಆರೋಗ್ಯ, ಸಾರಿಗೆ, ವಿದ್ಯುತ್, ನೀರು ಸೇರಿ ಅನೇಕ ಕ್ಷೇತ್ರಗಳಲ್ಲಿ ದೆಹಲಿ ಸರ್ಕಾರದ ಯೋಜನೆಗಳನ್ನು ಕೇಜ್ರಿವಾಲ್ ವಿವರಿಸಿದರು. ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಪೃಥ್ವಿ ರೆಡ್ಡಿ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಉಪಸ್ಥಿತರಿದ್ದರು.
ಇದನ್ನೂ ಓದಿ | ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್ ಪಾಠ ಇರಲಿದೆ ಎಂದ ನಾಗೇಶ್