Site icon Vistara News

Arvind Kejriwal: 25 ಕೋಟಿ ರೂ. ಮತ್ತು 7 ಶಾಸಕರು; ಬಿಜೆಪಿ ವಿರುದ್ಧ ಆಪ್‌ನ ಹೊಸ ಆರೋಪವೇನು?

Arvind Kejriwal

Delhi CM Arvind Kejriwal withdraws from Supreme Court his plea against arrest by ED

ನವದೆಹಲಿ: ಆಮ್ ಆದ್ಮಿ ಪಾರ್ಟಿ(AAP)ಯ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejriwal) ಮತ್ತು ಬಿಜೆಪಿ (BJP) ನಡುವಿನ ಗುದ್ದಾಟ ಮುಂದುವರಿದಿದೆ. ಶನಿವಾರ (ಜನವರಿ 27) ಅರವಿಂದ್ ಕೇಜ್ರಿವಾಲ್‌ ಮತ್ತೆ ಕಮಲ ಪಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ʼʼದೆಹಲಿ ಸರ್ಕಾರವನ್ನು ಕೆಡವಲು ಬಿಜೆಪಿ ಪಿತೂರಿ ನಡೆಸಿದ್ದು, ನಮ್ಮ ಪಕ್ಷದ ಏಳು ಶಾಸಕರಿಗೆ 25 ಕೋಟಿ ರೂ. ಆಮಿಷವೊಡ್ಡಿದೆ. ಆ ಮೂಲಕ ಆಪ್‌ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆʼʼ ಎಂದು ಆರೋಪಿಸಿದ್ದಾರೆ.

ಎಎಪಿ ಶಾಸಕರೊಂದಿಗೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಮತ್ತು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ಇತ್ತೀಚೆಗೆ ಬಿಜೆಪಿಯವರು ದೆಹಲಿಯ ನಮ್ಮ 7 ಶಾಸಕರನ್ನು ಸಂಪರ್ಕಿಸಿದ್ದಾರೆ. ‘ನಾವು ಕೆಲವು ದಿನಗಳ ನಂತರ ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ಅದರ ನಂತರ ನಾವು ಶಾಸಕರನ್ನು ಬಿಜೆಪಿಗೆ ಸೇರಿಸುತ್ತೇವೆ. ಈ ಸಂಬಂಧ ಈಗಾಗಲೇ 21 ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಇತರರೊಂದಿಗೆ ಶೀಘ್ರ ಮಾತನಾಡುತ್ತೇವೆ. ಅದರ ಬಳಿಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವೂ ಬರಬಹುದು. ಇದಕ್ಕಾಗಿ 25 ಕೋಟಿ ರೂ. ಕೊಡುತ್ತೇವೆ. ಬಳಿಕ ಬಿಜೆಪಿ ಟಿಕೆಟ್‌ನಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆʼʼ ಎನ್ನುವುದು ಕ್ರೇಜಿವಾಲ್‌ ಅವರ ದೂರು.

21 ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಹೇಳಿಕೊಂಡಿದ್ದರೂ ಕೇವಲ ಏಳು ಶಾಸಕರ ವಿವರ ಮಾತ್ರ ಸದ್ಯಕ್ಕೆ ತಿಳಿದು ಬಂದಿದೆ. ಈ ಏಳು ಮಂದಿ ಪ್ರಸ್ತಾಪವನ್ನು ದೃಢವಾಗಿ ನಿರಾಕರಿಸಿದ್ದಾರೆ ಎಂದು ಕೇಜ್ರಿವಾಲ್ ಒತ್ತಿ ಹೇಳಿದ್ದಾರೆ. ಇದರರ್ಥ ಯಾವುದೇ ಮದ್ಯ ಹಗರಣದ ತನಿಖೆಗಾಗಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಬದಲಾಗಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುವುದೇ ಬಿಜೆಪಿಯ ಬಹು ದೊಡ್ಡ ಗುರಿ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. “ಒಂಬತ್ತು ವರ್ಷಗಳಲ್ಲಿ, ಬಿಜೆಪಿಯವರು ನಮ್ಮ ಸರ್ಕಾರವನ್ನು ಉರುಳಿಸಲು ಅನೇಕ ಪಿತೂರಿಗಳನ್ನು ನಡೆಸಿದ್ದಾರೆ. ಆದರೆ ಅವರು ಯಶಸ್ವಿಯಾಗಲಿಲ್ಲ. ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಈ ಬಾರಿಯೂ ಬಿಜೆಪಿಯ ಸಂಚು ಫಲಿಸುವುದಿಲ್ಲʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Delhi Liquor scam: ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ ಸಮನ್ಸ್! ಇದು ಅರೆಸ್ಟ್ ಮಾಡುವ ಸಂಚು; ಆಪ್

ʼʼರಾಷ್ಟ್ರ ರಾಜಧಾನಿಯಲ್ಲಿ ಎಎಪಿಯ ಉತ್ತಮ ಕೆಲಸಗಳಿಂದ ಜನಪ್ರಿಯತೆ ಗಳಿಸುತ್ತಿದೆ. ಇದನ್ನು ಸಹಿಸದೆ ಬಿಜೆಪಿ ಸರ್ಕಾರವನ್ನು ಉರುಳಿಸಲು ಮುಂದಾಗಿದೆ. ವಿವಿಧ ಅಡೆತಡೆಗಳ ಹೊರತಾಗಿಯೂ ದೆಹಲಿಯ ಜನರು ಎಎಪಿ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದಾರೆ. ವಿಶ್ವಾಸ ಇರಿಸಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ನಮ್ಮನ್ನು ಸೋಲಿಸುವುದು ಕಷ್ಟ ಎನಿಸಿ ಬಿಜೆಪಿ ಮುಖಂಡರು ಅಡ್ಡ ದಾರಿ ಹಿಡಿದಿದ್ದಾರೆʼʼ ಎಂದು ಕೇಜ್ರಿವಾಲ್‌ ದೂರಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್‌ ಹೆಸರು ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version