Site icon Vistara News

Arvind Kejriwal: ಕೇಜ್ರಿವಾಲ್‌ ಬಂಧನ ವಿರೋಧಿಸಿ ಎಎಪಿ ಕಾರ್ಯಕರ್ತರ ಪ್ರತಿಭಟನೆ; ಪ್ರಿಯಾಂಕಾ ವಾಗ್ದಾಳಿ

app

app

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ (Delhi Liquor Scam)ದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate)ದ ತಂಡವು ಮಾರ್ಚ್ 21ರ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwa) ಅವರನ್ನು ಬಂಧಿಸಿದೆ. ಅವರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತರನ್ನು ಅರೆಸ್ಟ್‌ ಮಾಡಲಾಗಿದೆ. ಕೇಜ್ರಿವಾಲ್ ಅವರನ್ನು ಬಂಧಿಸಲು ಇಡಿ ತಂಡ ತಲುಪಿದ ಸ್ವಲ್ಪ ಸಮಯದ ನಂತರ ಎಎಪಿ ಕಾರ್ಯಕರ್ತರು ಕೇಜ್ರಿವಾಲ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೇಜ್ರಿವಾಲ್‌ ಅವರಿಗೆ ಜಾಮೀನು ನಿರಾಕರಿಸಿದ ಕೆಲವೇ ಗಂಟೆಗಳ ನಂತರ, ದೆಹಲಿ ಪೊಲೀಸರ ಬೆಂಗಾವಲು ಪಡೆಯೊಂದಿಗೆ ಇಡಿ ತಂಡವು ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ತಲುಪಿತು. ಕೇಜ್ರಿವಾಲ್ ಅವರನ್ನು 12ಕ್ಕೂ ಅಧಿಕ ಅಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡರು. ಲೋಕಸಭಾ ಚುನಾವಣೆ ಕೆಲವೇ ದಿನಗಳಿರುವಾಗ ಈ ಬೆಳವಣಿಗೆ ನಡೆದಿದೆ.

ಜೈಲಿನಿಂದಲೇ ಆಡಳಿತ ನಡೆಸುತ್ತಾರೆ

ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಮತ್ತು ಅಗತ್ಯವಿದ್ದರೆ ಸರ್ಕಾರವನ್ನು ಜೈಲಿನಿಂದ ನಡೆಸುತ್ತಾರೆ ಎಂದು ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಹೇಳಿದ್ದಾರೆ. ಫೆಡರಲ್ ಏಜೆನ್ಸಿಯ ಕ್ರಮದ ವಿರುದ್ಧ ಆಮ್ ಆದ್ಮಿ ಪಕ್ಷವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಅವರು ತಿಳಿಸಿದ್ದಾರೆ.

“ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅಗತ್ಯ ಬಿದ್ದರೆ ಅವರು ಜೈಲಿನಿಂದ ಸರ್ಕಾರ ನಡೆಸುತ್ತಾರೆ. ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ತಡೆಯುವ ಯಾವುದೇ ನಿಯಮವಿಲ್ಲ” ಎಂದು ಅತಿಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ʼʼಕೇಜ್ರಿವಾಲ್‌ ಅವರನ್ನು ಅವರನ್ನು ಇ.ಡಿ ಬಂಧಿಸಿರುವುದನ್ನು ರದ್ದುಗೊಳಿಸುವಂತೆ ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದೇವೆ. ಇಂದು ರಾತ್ರಿಯೇ ತುರ್ತು ವಿಚಾರಣೆಯನ್ನು ಕೋರಿದ್ದೇವೆʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ವಿರೋಧ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಾರಿ ನಿರ್ದೇಶನಾಲಯದ ಈ ಕ್ರಮವನ್ನು ಸಂಪೂರ್ಣ ತಪ್ಪು ಮತ್ತು ಅಸಂವಿಧಾನಿಕ ಎಂದು ಕರೆದಿದ್ದಾರೆ. “ಚುನಾವಣೆಯ ಕಾರಣದಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ರೀತಿ ಗುರಿಯಾಗಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಅಸಂವಿಧಾನಿಕವಾಗಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Arvind Kejriwal : ಅಬಕಾರಿ ಲಂಚ ಪ್ರಕರಣದಲ್ಲಿ ಡೆಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅರೆಸ್ಟ್​​

“ಚುನಾವಣಾ ಯುದ್ಧದಲ್ಲಿ ನಿಮ್ಮ ಟೀಕಾಕಾರರ ವಿರುದ್ಧ ಹೋರಾಡಿ, ಅವರನ್ನು ಧೈರ್ಯದಿಂದ ಎದುರಿಸಿ ಮತ್ತು ಅವರ ನೀತಿಗಳು ಮತ್ತು ಕಾರ್ಯಶೈಲಿಯ ಮೇಲೆ ದಾಳಿ ಮಾಡಿ – ಇದು ಪ್ರಜಾಪ್ರಭುತ್ವ. ಆದರೆ ಈ ರೀತಿಯಾಗಿ, ಒಬ್ಬರ ರಾಜಕೀಯ ಉದ್ದೇಶವನ್ನು ಪೂರೈಸಲು ದೇಶದ ಎಲ್ಲ ಸಂಸ್ಥೆಗಳ ಶಕ್ತಿಯನ್ನು ಬಳಸುವುದು ಮತ್ತು ಒತ್ತಡ ಹೇರುವ ಮೂಲಕ ಅವುಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವದ ಪ್ರತಿಯೊಂದು ತತ್ವಕ್ಕೆ ವಿರುದ್ಧ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version