ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಮನೆ ಮೇಲೆ ಇಂದು ಜಾರಿ ನಿರ್ದೇಶನಾಲಯ (Enforcement Directorate – ED) ದಾಳಿ ನಡೆಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಎಂದು ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (Aam Admi Party) ನಾಯಕರು ಟ್ವೀಟ್ ಮಾಡಿದ್ದಾರೆ.
ದೆಹಲಿ ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಇಡಿ ಮುಂದೆ ಹಾಜರಾಗಲು ಮೂರನೇ ಬಾರಿಗೆ ಕೇಜ್ರಿವಾಲ್ ನಿರಾಕರಿಸಿದ ಗಂಟೆಗಳ ನಂತರ ಆಪ್ ನಾಯಕರು ಈ ಟ್ವೀಟ್‌ಗಳನ್ನು ಮಾಡಿದ್ದಾರೆ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಅಂತಹ ಯಾವುದೇ ಮಾಹಿತಿಯನ್ನು ತಾವು ಹೊಂದಿಲ್ಲ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಹೇಳಿವೆ.
News coming in that ED is going to raid @ArvindKejriwal’s residence tmrw morning. Arrest likely.
— Atishi (@AtishiAAP) January 3, 2024
“ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಬೆಳಿಗ್ಗೆ ಇಡಿ ದಾಳಿ ನಡೆಸಲಿದೆ ಎಂದು ಸುದ್ದಿ ಬರುತ್ತಿದೆ. ಬಂಧಿಸುವ ಸಾಧ್ಯತೆಯಿದೆ” ಎಂದು ಪಕ್ಷದ ಹಿರಿಯ ನಾಯಕಿ ಮತ್ತು ದೆಹಲಿ ಸಚಿವೆ ಆತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಸೌರಭ್ ಭಾರದ್ವಾಜ್, ಜಾಸ್ಮಿನ್ ಶಾ ಮತ್ತು ಸಂದೀಪ್ ಪಾಠಕ್ ಅವರ ಹ್ಯಾಂಡಲ್‌ಗಳಲ್ಲಿ ಕೂಡ ಇದೇ ರೀತಿಯ ಪೋಸ್ಟ್‌ಗಳು ಕಂಡುಬಂದಿವೆ.
ಅರವಿಂದ ಕೇಜ್ರಿವಾಲ್ ಒಟ್ಟು ಮೂರು ಬಾರಿ ವಿಚಾರಣೆಗೆ ಸಮನ್ಸ್ ತಪ್ಪಿಸಿದ್ದಾರೆ. ನಿನ್ನೆ ಕೊನೆಯ ಬಾರಿಗೆ ಅವರು ಹಾಜರಾಗಲು ನಿರಾಕರಿಸಿದ್ದರು. ಅವರು ನವೆಂಬರ್ 2 ಮತ್ತು ಡಿಸೆಂಬರ್ 21ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ್ದರು. ನಿಯಮಗಳ ಪ್ರಕಾರ, ಮೂರು ಬಾರಿ ವಿಚಾರಣೆಗೆ ಗೈರುಹಾಜರಾದರೆ ಅವರ ವಿರುದ್ಧ ಯಾವುದೇ ಸಮಯದಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಬಹುದು ಮತ್ತು ಅವರನ್ನು ಬಂಧಿಸಬಹುದು.
ಏಪ್ರಿಲ್‌ನಲ್ಲಿ ಅವರನ್ನು ಕೇಂದ್ರ ತನಿಖಾ ದಳ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿಲ್ಲ. ಸಮನ್ಸ್‌ಗಳು “ದುರುದ್ದೇಶದಿಂದ ಪ್ರೇರಿತ” ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ. ಪ್ರಕರಣದಲ್ಲಿ ನಾನು ಸಾಕ್ಷಿಯೋ ಅಥವಾ ಶಂಕಿತನೋ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಈ ವರ್ಷದ ಲೋಕಸಭೆ ಚುನಾವಣೆಯ ಪ್ರಚಾರದಿಂದ ಕೇಜ್ರಿವಾಲ್ ಅವರನ್ನು ದೂರ ಉಳಿಸುವ ಯೋಜನೆ ಇದಾಗಿದೆ ಎಂದು ಅವರ ಪಕ್ಷ ಹೇಳಿದೆ.
ಆಪ್‌ನ ಮೂವರು ನಾಯಕರಾದ ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮದ್ಯದ ಕಂಪನಿಗಳು ಭಾಗಿಯಾಗಿವೆ, ಅದಕ್ಕಾಗಿ ಸಚಿವರಿಗೆ 12 ಶೇಕಡಾ ಕಿಕ್‌ಬ್ಯಾಕ್ ನೀಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. “ಸೌತ್ ಗ್ರೂಪ್” ಎಂದು ಕರೆಯಲ್ಪಡುವ ಮದ್ಯದ ಲಾಬಿ ಕಿಕ್‌ಬ್ಯಾಕ್ ಪಾವತಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Arvind Kejriwal: 3ನೇ ಬಾರಿಯೂ ಇ.ಡಿ ವಿಚಾರಣೆಗೆ ಕೇಜ್ರಿವಾಲ್ ಗೈರು, ಮುಂದೇನಾಗುತ್ತದೆ?