Site icon Vistara News

Arvind Kejriwal: ʼಕೇಜ್ರಿವಾಲ್‌ ಕರ್ಮವೇ ಕಾರಣ…ʼ ಪ್ರಣಬ್‌ ಪುತ್ರಿಯ ಬಳಿಕ ಅಣ್ಣಾ ಹಜಾರೆ ಟೀಕೆಯ ಸರದಿ

anna hazare arvind kejriwal

ಅಹ್ಮದ್‌ನಗರ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಸ್ವಯಂಕೃತ ಅಪರಾಧಗಳಿಂದ ಬಂಧನಕ್ಕೊಳಗಾಗಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, “ಕರ್ಮದ ಪ್ರತಿಫಲದಿಂದಾಗಿ ಇಂದು ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾಗಿದ್ದಾರೆ” ಎಂದು ಹೇಳಿದ್ದರು.

ಕೇಜ್ರಿವಾಲ್‌ ಅವರ ಬಂಧನದ ನಂತರ ಮಾತನಾಡಿರುವ ಅಣ್ಣಾ ಹಜಾರೆ, ಎಎಪಿ ಮುಖ್ಯಸ್ಥರ ಬಂಧನಕ್ಕೆ “ಅವರ ಸ್ವಂತ ಕರ್ಮಗಳು ಕಾರಣ” ಎಂದು ಹೇಳಿದ್ದಾರೆ. “ನನ್ನೊಂದಿಗೆ ಕೆಲಸ ಮಾಡುತ್ತಿದ್ದ, ಮದ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದ ಅರವಿಂದ್ ಕೇಜ್ರಿವಾಲ್ ಈಗ ಮದ್ಯದ ನೀತಿಗಳನ್ನು ಮಾಡುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ. ಅವರ ಸ್ವಂತ ಕೃತ್ಯಗಳಿಂದ ಅವರ ಬಂಧನವಾಗಿದೆ” ಎಂದು ಹಜಾರೆ ಹೇಳಿದರು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಇಬ್ಬರು ಹಿರಿಯ ಎಎಪಿ ನಾಯಕರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು 2011ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಚಳವಳಿಯನ್ನು ಸೇರಿದ್ದರು. ಅಲ್ಲಿ ಪಡೆದ ಜನಪ್ರಿಯತೆಯನ್ನು ಅಧರಿಸಿ 2012ರಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟಿ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದರು.

ಮತ್ತೊಂದು ಬೆಳವಣಿಗೆಯಲ್ಲಿ, ದೆಹಲಿ ಮುಖ್ಯಮಂತ್ರಿ ಅವರು ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನ್ನ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯನ್ನು ಹಿಂದೆಗೆದುಕೊಂಡರು.

ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ದೆಹಲಿ ಹೈಕೋರ್ಟ್ ನೀಡಿದ ಒಂಬತ್ತು ಸಮನ್ಸ್‌ಗಳನ್ನು ಅವರು ನಿರ್ಲಕ್ಷಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣವು ದೆಹಲಿ ಅಬಕಾರಿ ನೀತಿ ಪ್ರಕರಣ 2022ರ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳಿಗೆ ಸಂಬಂಧಿಸಿದೆ. ನೀತಿಯನ್ನು ನಂತರ ರದ್ದುಗೊಳಿಸಲಾಗಿದೆ.

ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಇಡಿ ಬಂಧಿಸಿದ ಕೆಲವೇ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾಗಿದೆ.

ಈ ಹಿಂದೆ ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಹಲವು ಸುತ್ತಿನ ವಿಚಾರಣೆಯ ನಂತರ ಫೆಬ್ರವರಿ 26ರಂದು ಸಿಬಿಐ ಬಂಧಿಸಿತ್ತು. ಅಕ್ಟೋಬರ್ 5ರಂದು ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ಸಿಂಗ್ ಅವರನ್ನು ಇಡಿ ಬಂಧಿಸಿತ್ತು. ಏಪ್ರಿಲ್ 19ರಿಂದ ಜೂನ್ 1ರವರೆಗೆ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನವೇ ಅರವಿಂದ ಕೇಜ್ರಿವಾಲ್ ಅವರ ಬಂಧನವೂ ಆಗಿದೆ.

ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ ಬಂಧನ ‘ಕರ್ಮದ ಫಲ’ ಎಂದ ಪ್ರಣಬ್‌ ಮುಖರ್ಜಿ ಪುತ್ರಿ; ಏನದು ಕರ್ಮ?

Exit mobile version