ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣ (Delhi Excise Policy Case)ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಜಾಮೀನು ಅರ್ಜಿಯನ್ನು ಮಂಗಳವಾರ (ಏಪ್ರಿಲ್ 9) ದೆಹಲಿ ಹೈಕೋರ್ಟ್ (Delhi high court) ವಜಾಗೊಳಿಸಿದೆ. ಈ ಮೂಲಕ ಯುಗಾದಿ ಹಬ್ಬದಂದೂ ದೆಹಲಿ ಮುಖ್ಯಮಂತ್ರಿಗೆ ಸಿಹಿ ಸುದ್ದಿ ಸಿಕ್ಕಿಲ್ಲ. ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಅವರು ತಮ್ಮ ಬಂಧನ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ)ದ ರಿಮ್ಯಾಂಡ್ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
”ಕೇಜ್ರಿವಾಲ್ ಅವರ ಬಂಧನ ಮತ್ತು ರಿಮ್ಯಾಂಡ್ ಅನ್ನು ಕಾನೂನುಬಾಹಿರ ಎಂದು ಕರೆಯಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾ. ಸ್ವರಾನಾ ಕಾಂತ ಶರ್ಮಾ ಅವರುಳ್ಳ ಪೀಠ ನಡೆಸಿತ್ತು. ವಿಶೇಷವಾಗಿ ಈಗ ರದ್ದುಪಡಿಸಲಾದ ದಿಲ್ಲಿ ಅಬಕಾರಿ ನಿಯಮ ರೂಪಿಸಲು ಅವರು ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಇ.ಡಿ ಹೇಳಿಕೊಂಡಿದೆ. ಇದರಿಂದ ಹಗರಣದ ʼಕಿಂಗ್ ಪಿನ್ʼ ಎಂದು ಇ.ಡಿ ಕರೆದಿರುವ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಏಪ್ರಿಲ್ 15ರವರೆಗೆ ದೆಹಲಿಯ ತಿಹಾರ್ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.
Delhi High Court dismisses CM Arvind Kejriwal's plea challenging his arrest by the Enforcement Directorate in the Excise Policy money laundering case.
— ANI (@ANI) April 9, 2024
ED was in possession of enough material which had led them to arrest Kejriwal. Non-joining of investigation by Kejriwal, delay… pic.twitter.com/i07wwSlJiE
ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಸ್ಪೆಷಲ್ ಟ್ರೀಟ್‌ಮೆಂಟ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆರೋಪಿಯನ್ನು ಬಂಧಿಸಿರುವುದು ಮತ್ತು ರಿಮ್ಯಾಂಡ್ ಅನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕೇ ಹೊರತು ಚುನಾವಣಾ ಸಮಯದ ಪ್ರಕಾರ ಅಲ್ಲ ಎಂದು ತಿಳಿಸಿದೆ.
ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ಬಂಧಿಸಿರುವ ಕ್ರಮವು ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು. ಇದರಿಂದ ರಾಜಕೀಯ ಪ್ರತಿರೋಧಗಳ ವಿರುದ್ಧ ಹೋರಾಡುವ ಅವಕಾಶದಿಂದ ವಂಚಿತವಾದಂತಾಗಿದೆ ಎಂದು ಕೇಜ್ರಿವಾಲ್ ಅರ್ಜಿಯಲ್ಲಿ ವಾದಿಸಿದ್ದಾರೆ.
ಇತ್ತ ಜಾರಿ ನಿರ್ದೇಶನಾಲಯ (ಇ.ಡಿ) ಈ ವಾದವನ್ನು ತಳ್ಳಿ ಹಾಕಿದ್ದು, ಮುಂಬರುವ ಚುನಾವಣೆಗಳ ಆಧಾರದ ಮೇಲೆ ಕೇಜ್ರಿವಾಲ್ ಅವರಿಗೆ ಬಂಧನದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಕಾನೂನು ಅವರಿಗೆ ಮತ್ತು ಜನ ಸಾಮಾನ್ಯರಿಗೆ ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಎಂದು ಹೇಳಿದೆ.
ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇ.ಡಿ ಬಂಧಿಸಿತ್ತು. ನ್ಯಾಯಾಲಯದ ಆದೇಶದ ಪ್ರಕಾರ 10 ದಿನಗಳ ಕಾಲ ಇ.ಡಿ ವಶದಲ್ಲಿದ್ದರು.ಬಳಿಕ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಈ ಹಿಂದೆ, ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಕೇಜ್ರಿವಾಲ್ ನೇರ ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು.
ಇದನ್ನೂ ಓದಿ: Arvind Kejriwal: ಕೇಜ್ರಿವಾಲ್ ಬಂಧನ: ಮತ್ತೆ ಅಮೆರಿಕ ಕ್ಯಾತೆ; ಕಾಂಗ್ರೆಸ್ ಬ್ಯಾಂಕ್ ಅಕೌಂಟ್ ನಿರ್ಬಂಧ ಕುರಿತೂ ಕಿರಿಕ್
ಏನಿದು ಪ್ರಕರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ