ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸ ಮತ ಗೆದ್ದಿದೆ. ಒಟ್ಟು 62 ಎಎಪಿ ಶಾಸಕರ ಪೈಕಿ 54 ಮಂದಿ ಸರ್ಕಾರದ ಪರ ಮತ ಚಲಾಯಿಸಿದ್ದಾರೆ. ಧ್ವನಿ ಮತದ ಮೂಲಕ ವಿಶ್ವಾಸಮತ ಯಾಚನೆ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಯಾವುದೇ ಎಎಪಿ ಶಾಸಕರನ್ನು ಪಕ್ಷಾಂತರ ಮಾಡಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಈ ವೇಳೆ ಹೇಳಿದ್ದಾರೆ. “ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಕೆಲವರು ರಾಜ್ಯದಿಂದ ಹೊರಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ. 70 ಸದಸ್ಯರ ವಿಧಾನಸಭೆಯಲ್ಲಿ ಎಪಿಪಿ 62 ಶಾಸಕರನ್ನು ಹೊಂದಿದ್ದರೆ ಬಿಜೆಪಿಯ ಸಂಖ್ಯಾ ಬಲ 8. ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಮತ್ತು ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಾಗಿ ವಿಶ್ವಾಸ ಮತ ಯಾಚಿಸುವುದು ಅಗತ್ಯವಿದೆ ಎಂದು ಈ ಹಿಂದೆ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು. ಈ ಮೂಲಕ ಎಪಿಪಿ ಎರಡನೇ ಬಾರಿ ವಿಶ್ವಾಸ ಮತ ಯಾಚಿಸಿದಂತಾಗಿದೆ.
ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿದ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ʼʼಇಬ್ಬರು ಎಎಪಿ ಶಾಸಕರು ತಮ್ಮನ್ನು ಬಿಜೆಪಿ ಸದಸ್ಯರು ಸಂಪರ್ಕಿಸಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಿಜೆಪಿಯವರು ನಮ್ಮ ಶಾಸಕರ ಬಳಿ ತಿಳಿಸಿದ್ದಾರೆʼʼ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
“ಎಎಪಿಯ 21 ಶಾಸಕರು ಪಕ್ಷವನ್ನು ತೊರೆಯಲು ಒಪ್ಪಿಕೊಂಡಿದ್ದಾರೆ ಮತ್ತು ಹೆಚ್ಚಿನವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಾಸಕರಿಗೆ ತಿಳಿಸಲಾಗಿದೆ. ಅಲ್ಲದೆ ಅವರು ಬಿಜೆಪಿಗೆ ಸೇರಲು ಶಾಸಕರಿಗೆ 25 ಕೋಟಿ ರೂ. ಆಫರ್ ನೀಡಿದ್ದಾರೆ. ಆದರೆ ನಮ್ಮ ಶಾಸಕರು ಇದನ್ನು ಒಪ್ಪಿಲ್ಲ. ಬಿಜೆಪಿಯವರು ಮತ್ತೊಂದು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದ್ದರು. ಸದ್ಯ ಕೇಜ್ರಿವಾಲ್ ಸರ್ಕಾರ ಯಾವುದೇ ಆತಂಕ ಇಲ್ಲದೆ ವಿಶ್ವಾಸ ಮತ ಗಳಿಸಿದೆ.
ವಿಶ್ವಾಸ ಮತ ಯಾಚನೆಗೂ ಮೊದಲು ಕೇಜ್ರಿವಾಲ್ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi liquor policy scam) ಸಂಬಂಧಿಸಿದಂತೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯದ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ʼʼದೆಹಲಿಯಲ್ಲಿ ವಿಧಾನಸಭೆ ಕಲಾಪ ನಡೆಯುತ್ತಿದ್ದು, ಇಂದು ವಿಶ್ವಾಸ ಮತಯಾಚನೆ ನಡೆಯಲಿದೆ. ಆ ಕಾರಣದಿಂದ ಕೇಜ್ರಿವಾಲ್ ಸದನದಲ್ಲಿ ಹಾಜರಿರಬೇಕು. ಅದಕ್ಕಾಗಿ ಕೋರ್ಟ್ ವಿಚಾರಣೆಗೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದಾರೆʼʼ ಎಂದು ಕೇಜ್ರಿವಾಲ್ ಪರ ವಕೀಲರು ಹೇಳಿದ್ದರು.
ಇದನ್ನೂ ಓದಿ: Arvind Kejriwal: ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಅರವಿಂದ್ ಕೇಜ್ರಿವಾಲ್
ಈ ಹಿಂದೆ ನೀಡಿದ ಆರು ಸಮನ್ಸ್ಗೆ ಉತ್ತರ ನೀಡದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಈ ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಸದ್ಯ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ