Site icon Vistara News

Arvind Kejriwal: 9 ಉಚಿತ ಗ್ಯಾರಂಟಿಗಳೊಂದಿಗೆ ಚುನಾವಣಾ ರಣಕಹಳೆ ಊದಿದ ಅರವಿಂದ ಕೇಜ್ರಿವಾಲ್‌

Arvind-Kejriwal

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (Aam Admi Party- AAP- ಎಎಪಿ) ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರದ ಕಹಳೆಯನ್ನು ಊದಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರೊಂದಿಗೆ ಸೇರಿ ಪಕ್ಷದ ಪ್ರಚಾರವನ್ನು ಶುಕ್ರವಾರ ಪ್ರಾರಂಭಿಸಿದ್ದು, ಮತದಾರರಿಗೆ 9 ಉಚಿತ ಯೋಜನೆಗಳನ್ನು (Guarantees) ನೀಡುವ ಕರಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ, ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಚಾರವನ್ನು ಪ್ರಾರಂಭಿಸಲಾಗಿದೆ. ʼನನ್ನ ಕುಟುಂಬವಾಗಿರುವ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ನಾನು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆʼ ಎಂದು ಕೇಜ್ರಿವಾಲ್ ಈ ಸಂದರ್ಭದಲ್ಲಿ ಹೇಳಿದರು. “ಸಂಸದ್ ಮೇ ಭಿ ಕೇಜ್ರಿವಾಲ್, ತೋ ದಿಲ್ಲಿ ಹೋಗಿ ಔರ್ ಖುಷ್ ಹಾಲ್’ (ಸಂಸತ್‌ನಲ್ಲೂ ಕೇಜ್ರಿವಾಲ್, ಹಾಗಾದರೆ ದಿಲ್ಲಿ ಇನ್ನಷ್ಟು ಖುಷಿ, ಸಮೃದ್ಧ) ಎಂಬುದು ನಮ್ಮ ಚುನಾವಣಾ ಘೋಷಣೆ” ಎಂದರು.

“ದೆಹಲಿ ಮತ್ತು ಪಂಜಾಬ್ ಇಂದು ಎಎಪಿ ಆಡಳಿತದಲ್ಲಿವೆ. ಈ ಎರಡು ರಾಜ್ಯಗಳಲ್ಲಿ ಮಾತ್ರ ಉಚಿತ ವಿದ್ಯುತ್ ಸರಬರಾಜು ಇದೆ. ಯಾವಾಗಲೂ ನಿಮ್ಮ ಕುಟುಂಬವನ್ನು ನೋಡಿಕೊಳ್ಳುವ ಮತ್ತು ಯಾವಾಗಲೂ ನಿಮ್ಮನ್ನು ರಕ್ಷಿಸುವ ನಿಮ್ಮ ಮಗನಿಗೆ ಈ ಬಾರಿ ನಿಮ್ಮ ಆಶೀರ್ವಾದ ನೀಡಿ. ನಿಮ್ಮ ಕೆಲಸ ಮತ್ತು ದೆಹಲಿಯ ಅಭಿವೃದ್ಧಿಯನ್ನು ತಡೆಯುವವರನ್ನು ಗುರುತಿಸಿ ಮತ್ತು ಅವರ ತಪ್ಪಿಗೆ ಈ ಬಾರಿ ಶಿಕ್ಷೆ ನೀಡಿ” ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಇದಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಎಪಿ ಸರ್ಕಾರವು ಬಿಜೆಪಿ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆ. ದೆಹಲಿಯ ಗವರ್ನರ್‌ ಮೂಲಕ ಆಪ್ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳನ್ನು ತಡೆಯಲು ಬಿಜೆಪಿ ಪ್ರಯತ್ನಿಸಿತು. ಆದರೆ ಅದರ ಏಳು ಸಂಸದರಲ್ಲಿ ಯಾರೂ ಅದರ ವಿರುದ್ಧ ಧ್ವನಿ ಎತ್ತಲಿಲ್ಲ” ಎಂದು ಅವರು ಹೇಳಿದರು.

ʻಇಂಡಿಯಾ ಬ್ಲಾಕ್ʼನಲ್ಲಿ ಕಾಂಗ್ರೆಸ್ ಪಾಲುದಾರನಾಗಿರುವ ಆಪ್‌, ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಸಾರ್ವತ್ರಿಕ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ದೆಹಲಿಯ ಏಳು ಲೋಕಸಭಾ ಸ್ಥಾನಗಳ ಪೈಕಿ ನಾಲ್ಕರಲ್ಲಿ ಎಎಪಿ ಸ್ಪರ್ಧಿಸಲಿದೆ ಮತ್ತು ಉಳಿದ ಮೂರರಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಗುಜರಾತ್‌ನಲ್ಲಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ನೊಂದಿಗೆ ಒಪ್ಪಂದದಲ್ಲಿ ಆಪ್‌ ಪಡೆದುಕೊಂಡಿದೆ- ಭರೂಚ್ ಹಾಗೂ ಜಾಮ್‌ನಗರ. ಹರಿಯಾಣದಲ್ಲಿ ಕುರುಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಅಸ್ಸಾಂನ ಗುವಾಹಟಿ, ದಿಬ್ರುಗಢ ಮತ್ತು ಸೋನಿತ್‌ಪುರ ಲೋಕಸಭಾ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಆಪ್‌ ಘೋಷಿಸಿದೆ.

ಇದನ್ನೂ ಓದಿ: Delhi Liquor Scam: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಮನ್ಸ್‌; ಕೋರ್ಟ್‌ ಹೇಳಿದ್ದೇನು?

Exit mobile version