Site icon Vistara News

Arvind Kejriwal: ಮಧ್ಯಂತರ ಜಾಮೀನು ಅವಧಿ ಮುಗಿದು ಜೈಲಿಗೆ ಮರಳಿದ ಅರವಿಂದ್‌ ಕೇಜ್ರಿವಾಲ್‌; ಜೂ. 5ರ ತನಕ ನ್ಯಾಯಾಂಗ ಬಂಧನ

Arvind Kejriwal

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡಿದ್ದು, ಇಂದು (ಜೂ. 2) ಅವರು ತಿಹಾರ್‌ ಜೈಲಿಗೆ ಮರಳಿದ್ದಾರೆ. ಈ ಹಿಂದೆ ದೆಹಲಿಯ ರೋಸ್‌ ಅವನ್ಯೂ ಕೋರ್ಟ್‌ ಜೂನ್‌ 5ರ ತನಕ ದೆಹಲಿ ಮುಖ್ಯಮಂತ್ರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೋರ್ಟ್‌ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. 

21 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಶರಣಾದರು. ಶರಣಾದ ಕೇಜ್ರಿವಾಲ್ ಅವರನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಸಂಜೀವ್ ಅಗರ್ವಾಲ್ ಅವರ ಮುಂದೆ ಹಾಜರುಪಡಿಸಲಾಯಿತು.

ಮೇ 20ರಂದು ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಕೋರ್ಟ್‌ ಮೆಟ್ಟಿಲೇರಿ ವಿಚಾರಣೆಗಾಗಿ ಕೇಜ್ರಿವಾಲ್‌ ಅವರನ್ನು ಇನ್ನೂ 14 ದಿನ ತಮ್ಮ ವಶಕ್ಕೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅರವಿಂದ್ ಕೇಜ್ರಿವಾಲ್ ಅವರ ವಕೀಲರಾದ ರಿಷಿಕೇಶ್ ಕುಮಾರ್ ಮತ್ತು ವಿವೇಕ್ ಜೈನ್ ವಿರೋಧ ವ್ಯಕ್ತಪಡಿಸಿದ್ದರು. ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಮೊದಲು ಕೇಜ್ರಿವಾಲ್ ಶರಣಾಗಬೇಕಾಗುತ್ತದೆ ಎಂದು ಇ.ಡಿ. ಹೇಳಿತ್ತು. ಅದರಂತೆ ಅವರು ಇದೀಗ ಜೈಲಿಗೆ ಮರಳಿದ್ದು, ರೂಸ್ ಅವೆನ್ಯೂ ಕೋರ್ಟ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜೂನ್ 5ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಶರಣಾಗುವ ಮುನ್ನ ದೆಹಲಿ ಸಿಎಂ ಹೇಳಿದ್ದೇನು?

ಇಂದು ತಿಹಾರ್‌ ಜೈಲಿಗೆ ತೆರಳುವ ಮುನ್ನ ಕೇಜ್ರಿವಾಲ್‌ ಹನುಮಂತನ ದೇಗುಲ, ಗಾಂಧಿ ಸ್ಮಾರಕ ಮತ್ತು ಆಪ್ ಕಚೇರಿಗೆ ಭೇಟಿ ನೀಡಿದ್ದರು. ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ʼʼಜಾಮೀನಿನ ಮೂಲಕ ಹೊರಗಡೆ ಬಂದ ನಾನು ಈ 21 ದಿನದಲ್ಲಿ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆದಿಲ್ಲ. ನಮ್ಮ ಎಲ್ಲ ಮಿತ್ರ ಪಕ್ಷಗಳಿಗಾಗಿ ಪ್ರಚಾರ ನಡೆಸಿದೆ. ದೇಶವನ್ನು ಉಳಿಸಲು ಹೋರಾಟ ನಡೆಸಿದೆ. ನನಗೆ ಆಮ್‌ ಆದ್ಮಿ ಪಾರ್ಟಿಗಿಂತ ದೇಶ ಮೊದಲುʼʼ ಎಂದು ಹೇಳಿದರು. ಜತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಹೊಂದಿದೆ ಎಂದೂ ಆರೋಪಿಸಿದರು.

ಇದನ್ನೂ ಓದಿ: Arvind Kejriwal: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಇಂದು ಮತ್ತೆ ತಿಹಾರ್‌ ಜೈಲಿಗೆ

ಪ್ರಕರಣದ ಹಿನ್ನೆಲೆ

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು.

Exit mobile version