Site icon Vistara News

Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್​ ಎಂದ ಇಡಿ

Aravind Kejriwal

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal ) ಅವರಿಗೆ ತಿಹಾರ್​ ಜೈಲಿನಲ್ಲಿ ಮಾವಿನ ಹಣ್ಣುಗಳು ಹಾಗೂ ಸಿಹಿ ತಿಂಡಿಗಳ ಪುಷ್ಕಳ ಭೋಜನ ನಡೆಯುತ್ತಿದೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ಸಕ್ಕರೆ ಅಂಶವಿರುವ ವಸ್ತುಗಳನ್ನು ತಿನ್ನುತ್ತಿದ್ದಾರೆ. ಇದು ಕುತಂತ್ರ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಂಡು ಕೋರ್ಟ್​​ ಮುಂದೆ ತಮಗೆ ಸಕ್ಕರೆ ಕಾಯಿಲೆ ಇದೆ ಎಂದು ಹೇಳುವ ಮೂಲಕ ಜಾಮೀನು ಕೋರುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮ ಸಕ್ಕರೆ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ವೈದ್ಯರನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಿಚಾರಣೆ ನಡೆಸಿತು. ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಳಿತಗೊಳ್ಳುತ್ತಿದೆ ಮತ್ತು ಅವರು ತಮ್ಮ ನಿಯಮಿತ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕೇಜ್ರಿವಾಲ್ ಅವರು ವಾರಕ್ಕೆ ಮೂರು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗಿದೆ ಎಂದು ಹೇಳಿದರು.

“ಅಧಿಕ ಮಧುಮೇಹವಿದೆ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ. ಮಾವಿನ ಹಣ್ಣುಗಳನ್ನು ಸೇವಿಸುವುದು, ನಿಯಮಿತವಾಗಿ ಸಿಹಿತಿಂಡಿಗಳನ್ನು ಸೇವಿಸುವುದು ಮತ್ತು ಸಕ್ಕರೆ ಇರುವ ಚಹಾ ಸೇವಿಸುತ್ತಿದ್ದಾರೆ. ಈ ಮೂಲಕ ಸಕ್ಕರೆ ಮಟ್ಟ ಹೆಚ್ಚಿಸಿಕೊಂಡು ಜಾಮೀನು ಪಡೆಯಲು ಸುಳ್ಳು ಹೇಳುತ್ತಿದ್ದಾರೆ ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್​ ಮುಂದೆ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಿ: ಕಾಗೇರಿ ಮನವಿ

ಈ ಉದ್ದೇಶಪೂರ್ವಕ ಸೇವನೆಯ ಹಿಂದೆ ಕೇಜ್ರಿವಾಲ್ ಅವರ ಕೆಟ್ಟ ಉದ್ದೇಶವಿದೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳನ್ನು ಉಲ್ಲೇಖಿಸಿ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಹುಸೇನ್ ವಾದಿಸಿದರು.

ಈಗ ರದ್ದುಪಡಿಸಲಾದ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ನಂತರ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣಾ ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23, 2024 ರವರೆಗೆ ವಿಸ್ತರಿಸಿತು.

ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಮತ್ತು ನಂತರದ ರಿಮಾಂಡ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ

ವಿಧಾನಸಭಾ ಸದಸ್ಯರು ಮತ್ತು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲು ಕೇಜ್ರಿವಾಲ್ ಅವರಿಗೆ ಅವಕಾಶ ನೀಡುವ ಮೂಲಕ ದೆಹಲಿಯ ದಕ್ಷ ಆಡಳಿತಕ್ಕಾಗಿ ವ್ಯವಸ್ಥೆ ಮಾಡಲು ಕಾರಾಗೃಹಗಳ ಮಹಾನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ಸಂಬಂಧಿಸಿದ ತಪ್ಪು ಸಂದೇಶಗಳನ್ನು ಸಾರುವ ಶೀರ್ಷಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

Exit mobile version