ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi Liquor scam) ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ನೀಡಿದೆ(Summons). ಫೆಬ್ರವರಿ 2ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಇದು ಈ ಪ್ರಕರಣದಲ್ಲಿ ಆಪ್ (Aam Aadmi Party) ಮುಖ್ಯಸ್ಥನಿಗೆ ಜಾರಿಗೊಳಿಸಿದ 5ನೇ ಸಮನ್ಸ್. ಈ ಹಿಂದೆ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಜಾರಿಗೊಳಿಸಲಾದ ನಾಲ್ಕು ಸಮನ್ಸ್ ವೇಳೆಯಲ್ಲೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಮೊದಲ ಸಮನ್ಸ್
ಜಾರಿ ನಿರ್ದೇಶನಾಲಯವು 2023ರ ಅಕ್ಟೋಬರ್ 30ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲ ಸಮನ್ಸ್ ನೀಡಿತ್ತು. ಈಗ ರದ್ದುಪಡಿಸಲಾದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನವೆಂಬರ್ 2ರಂದು ಫೆಡರಲ್ ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅದು ಸೂಚಿಸಿತ್ತು. ತಮಗೆ ನೀಡಲಾದ ಸಮನ್ಸ್ ಕಾನೂನುಬಾಹಿರ, ರಾಜಕೀಯ ಪ್ರೇರಿತ ಮತ್ತು ಬಿಜೆಪಿಯ ಕೋರಿಕೆಯ ಮೇರೆಗೆ ನೀಡಲಾಗಿದೆ ಎಂದು ಅವರು ಹೇಳಿದ್ದರು ಮತ್ತು ವಿಚಾರಣೆಗೆ ಗೈರಾಗಿದ್ದರು. ಆ ಸಮಯದಲ್ಲಿ ಕೇಜ್ರಿವಾಲ್ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.
ಎರಡನೇ ಸಮನ್ಸ್
ಇನ್ನು ಎರಡನೇ ಬಾರಿ ಡಿಸೆಂಬರ್ 18ರಂದು ಸಮನ್ಸ್ ನೀಡಿ ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದು ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಕರೆದ ಕೇಜ್ರಿವಾಲ್ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು. ಅಲ್ಲದೆ ಈ ಸಮನ್ಸ್ ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಮೂರನೇ ಸಮನ್ಸ್
ಡಿಸೆಂಬರ್ 22ರಂದು ಕೇಜ್ರಿವಾಲ್ ಇಡಿಯಿಂದ ಮೂರನೇ ಬಾರಿ ಸಮನ್ಸ್ ಪಡೆದುಕೊಂಡಿದ್ದರು. 2024ರ ಜನವರಿ 3ರಂದು ನಡೆಯುವ ವಿಚಾರಣೆ ಎದುರಿಸುವಂತೆ ಸೂಚಿಸಲಾಗಿತ್ತು. ಆಗಲೂ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದ ದೆಹಲಿ ಮುಖ್ಯಮಂತ್ರಿ, ರಾಜ್ಯ ಸಭಾ ಚುನಾವಣೆ ಮತ್ತು ಗಣರಾಜ್ಯೋತ್ಸವದ ಕಾರಣ ನೀಡಿದ್ದರು.
ನಾಲ್ಕನೇ ಸಮನ್ಸ್
ಇನ್ನು ಈ ವರ್ಷದ ಜನವರಿ 13ರಂದು ಇಡಿಯಿಂದ ನಾಲ್ಕನೇ ಸಮನ್ಸ್ ಜಾರಿಗೊಳಿಸಲಾಗಿತ್ತು. ಜನವರಿ 18ರ ವಿಚಾರಣೆಗೆ ಆಗಮಿಸುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿತ್ತು. ಆ ಬಾರಿಯೂ ಎಂದಿನಂತೆ ಅವರು ವಿಚಾರಣೆಗೆ ಗೈರಾಗಿದ್ದರು. ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಸಂಸದರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಜನವರಿ 18ರಂದು ಗೋವಾಕ್ಕೆ ಮೂರು ದಿನಗಳ ಭೇಟಿಗೆ ತೆರಳಿದ್ದರು.
ಇದನ್ನೂ ಓದಿ: Delhi Liquor scam: ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ ಸಮನ್ಸ್! ಇದು ಅರೆಸ್ಟ್ ಮಾಡುವ ಸಂಚು; ಆಪ್
ಏನಿದು ದಿಲ್ಲಿ ಅಬಕಾರಿ ನೀತಿ ಹಗರಣ?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇಕಡಾ 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚ ನೀಡಲಾಗಿದೆ ಎನ್ನುವ ಆರೋಪವಿದೆ. ಇದನ್ನು ಎಎಪಿ ಪದೇ ಪದೆ ನಿರಾಕರಿಸುತ್ತಲೇ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ