ಹೊಸದಿಲ್ಲಿ: ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (Enforcement Directorate – ED) ನೀಡಿದ ಸಮನ್ಸ್ ಧಿಕ್ಕರಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.
ಗುರುವಾರ ಇಡಿ ನೀಡಿದ ಸಮನ್ಸ್ ಅನುಗುಣವಾಗಿ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲಿಲ್ಲ. ಬದಲಿಗೆ ಮಧ್ಯಪ್ರದೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ.
ಇಡಿ ಅಕ್ಟೋಬರ್ 30ರಂದು ಕೇಜ್ರಿವಾಲ್ ಅವರಿಗೆ ಸಮನ್ಸ್ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 2ರಂದು ಬೆಳಿಗ್ಗೆ 11 ಗಂಟೆಗೆ ಇಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಹೇಳಿತ್ತು. ಕೇಜ್ರಿವಾಲ್ ಅವರು ಅದಕ್ಕೆ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಆಪ್ ಪಕ್ಷ ಯಾವುದೇ ಹೇಳಿಕೆ ನೀಡಿರಲಿಲ್ಲ. ಕೇಜ್ರಿವಾಲ್ ಅವರನ್ನು ಬಂಧಿಸುವ ಬಗ್ಗೆ ಮಾಹಿತಿ ಇದೆ ಎಂದು ಎಎಪಿ ನಾಯಕರು ಒಂದು ದಿನ ಮೊದಲು ಹೇಳಿದ್ದರು.
ಈ ನಡುವೆ ಅರವಿಂದ ಕೇಜ್ರಿವಾಲ್ ಅವರು ಸಮನ್ಸ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಕಟುವಾದ ಪತ್ರವೊಂದನ್ನು ಬರೆದಿದ್ದಾರೆ. ಇಡಿ ನೋಟಿಸ್ ಅನ್ನು ʼಅಕ್ರಮ’ ಮತ್ತು ʼರಾಜಕೀಯ ಪ್ರೇರಿತ’ ಎಂದು ಕರೆದಿದ್ದಾರೆ. “ಸಮನ್ಸ್ ನೋಟಿಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಯ ಒತ್ತಾಯದ ಮೇರೆಗೆ ನೋಟಿಸ್ ಕಳುಹಿಸಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಲು ನನಗೆ ಸಾಧ್ಯವಾಗದಂತೆ ಖಚಿತಪಡಿಸಿಕೊಳ್ಳಲು ನೋಟಿಸ್ ಕಳುಹಿಸಲಾಗಿದೆ. ಇಡಿ ತಕ್ಷಣ ನೋಟಿಸ್ ಹಿಂಪಡೆಯಬೇಕು” ಎಂದು ಕೇಜ್ರಿವಾಲ್ ಹೇಳಿದ್ದರು.
ಸಮನ್ಸ್ ಅನ್ನು ಧಿಕ್ಕರಿಸುವ ಕೇಜ್ರಿವಾಲ್ ಅವರ ಯೋಚನೆಯನ್ನು ಅವರ ಕೊನೆಯ ಕ್ಷಣದ ಪತ್ರ ಸ್ಪಷ್ಟಪಡಿಸಿದೆ. ಇಡಿ ಸಮನ್ಸ್ ನಿರಾಕರಿಸುವುದು ಅಥವಾ ಮಧ್ಯಪ್ರದೇಶಕ್ಕೆ ತೆರಳುವುದರ ಬಗ್ಗೆ ಕೇಜ್ರಿವಾಲ್ ಏನನ್ನೂ ಟ್ವೀಟ್ ಮಾಡಿಲ್ಲ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʼʼಇದು ಕೇಜ್ರಿವಾಲ್ ಅವರಿಗೆ ನಾಟಕದ ಸಮಯವಲ್ಲ. ಮುಖ್ಯಮಂತ್ರಿ ಇಡಿ ವಿಚಾರಣೆಯನ್ನು ಎದುರಿಸಬೇಕು. ನ್ಯಾಯಾಲಯಗಳು ನಿಮ್ಮ ವಿರುದ್ಧವೇ? ಸುಪ್ರೀಂ ಕೋರ್ಟ್ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆಯೇ?” ಎಂದು ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.
ಇಡಿ ಮುಂದೇನು ಮಾಡಬಹುದು?
ಇಡಿ ಕೇಜ್ರಿವಾಲ್‌ಗೆ ಹೊಸ ಸಮನ್ಸ್ ನೀಡಲಿದೆ. ಒಬ್ಬ ವ್ಯಕ್ತಿ ಮೂರು ಬಾರಿ ED ಸಮನ್ಸ್ ಅನ್ನು ನಿರ್ಲಕ್ಷಿಸಬಹುದು. ಅದರ ನಂತರ, ಏಜೆನ್ಸಿಯು ಜಾಮೀನು ರಹಿತ ವಾರಂಟ್ (NBW) ಅನ್ನು ಪಡೆಯಬಹುದು. NBW ಎನ್ನುವುದು ನ್ಯಾಯಾಲಯದ ಆದೇಶವಾಗಿದ್ದು, ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಮಯ ಮತ್ತು ದಿನಾಂಕದಂದು ನ್ಯಾಯಾಲಯದ ಮುಂದೆ ಹಾಜರಾಗುವುದು ಅನಿವಾರ್ಯವಾಗುತ್ತದೆ. ವ್ಯಕ್ತಿ NBW ಅನ್ನು ಸಹ ನಿರ್ಲಕ್ಷಿಸಿದರೆ, ಆತನನ್ನು ಬಂಧಿಸಬಹುದು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು.
ಕೇಜ್ರಿವಾಲ್ ಏನು ಮಾಡಬಹುದು?
ಸಮನ್ಸ್ ಅನ್ನು ಪ್ರಶ್ನಿಸಲು ಕೇಜ್ರಿವಾಲ್ ನ್ಯಾಯಾಲಯದ ಮೊರೆ ಹೋಗಬಹುದು. ನಿರೀಕ್ಷಣಾ ಜಾಮೀನು ಸಹ ಕೋರಬಹುದು.
ಯಾಕೆ ಇಡಿ ತನಿಖೆ?
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇಡಿ 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯ (Delhi Liquor Scam) ಬಗ್ಗೆ ತನಿಖೆ ನಡೆಸುತ್ತಿವೆ. ಇದು ಕೆಲವು ಮದ್ಯ ಮಾರಾಟಗಾರರಿಗೆ ಲಾಭದಾಯಕವಾಗಿದೆ ಎಂದು ಆರೋಪಿಸಲಾಗಿದೆ. ಎಎಪಿ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆದ ನಂತರ ಈ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಶಿಫಾರಸು ಮಾಡಿದ್ದರು. ಕೋವಿಡ್-19 ಸಂಬಂಧಿತ ಮಾರಾಟದ ನಷ್ಟಕ್ಕೆ ಚಿಲ್ಲರೆ ಪರವಾನಗಿದಾರರಿಗೆ ₹ 144 ಕೋಟಿ ಮನ್ನಾ, ಮದ್ಯದಂಗಡಿ ತೆರೆಯಲು ನಿರಾಕ್ಷೇಪಣಾ ಪ್ರಮಾಣಪತ್ರ ಸೇರಿದಂತೆ ಮದ್ಯ ನೀತಿಯಲ್ಲಿನ ಹಲವಾರು ಅಕ್ರಮಗಳನ್ನು ವರದಿ ಉಲ್ಲೇಖಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಸೇರಿದಂತೆ ಆರ್ಥಿಕ ಅಪರಾಧಗಳನ್ನು ED ತನಿಖೆ ಮಾಡುತ್ತದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA) ಮೂಲಕ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪ್ರಶ್ನಿಸಲು ಮತ್ತು ದಾಖಲೆಗಳನ್ನು ಪಡೆಯಲು EDಗೆ ಅಧಿಕಾರ ಇದೆ.
ಇದನ್ನೂ ಓದಿ: Arvind Kejriwal: ಅಬಕಾರಿ ಕೇಸ್; ಸಿಎಂ ಕೇಜ್ರಿವಾಲ್‌ಗೂ ಇ.ಡಿ ಸಮನ್ಸ್, ಉರುಳಾಗುತ್ತಾ?