Site icon Vistara News

Arvind Kejriwal: ಕೇಜ್ರಿವಾಲ್‌ ಜೈಲಿಗೆ; ಮುಂದಿನ ದಿಲ್ಲಿಯ ಮುಖ್ಯಮಂತ್ರಿ ಯಾರು?

arvind kejriwal arrest

ಹೊಸದಿಲ್ಲಿ: ಅಬಕಾರಿ ನೀತಿ (Delhi Excise policy) ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಬಂಧನವು ಆಮ್ ಆದ್ಮಿ (Aam Admi Party) ಪಕ್ಷದಲ್ಲಿ ಮತ್ತು ದೆಹಲಿ ಸರ್ಕಾರದಲ್ಲಿ ನಾಯಕತ್ವದ ಬಿಕ್ಕಟ್ಟನ್ನು ಉಂಟುಮಾಡಿದೆ. ಕೇಜ್ರಿವಾಲ್‌ ಜೈಲಿನಲ್ಲಿದ್ದುಕೊಂಡು ಸಿಎಂ ಸ್ಥಾನವನ್ನು ನಿರ್ವಹಿಸಲು ಸಾಧ್ಯವಿಲ್ಲವಾದ್ದರಿಂದ, ಇದೀಗ ದಿಲ್ಲಿಯ ಮುಖ್ಯಮಂತ್ರಿ (Delhi CM) ಯಾರಾಗುತ್ತಾರೆಂಬುದು ಮುಂದಿನ ಪ್ರಶ್ನೆಯಾಗಿದೆ.

ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಕ್ಯಾಬಿನೆಟ್ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರುಗಳೂ ಕೇಳಿಬರುತ್ತಿವೆ. ಆದರೆ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ದೆಹಲಿಯಲ್ಲಿ ಪಕ್ಷ ಮತ್ತು ಅದರ ಸರ್ಕಾರ ಎರಡನ್ನೂ ನಿಭಾಯಿಸಬಲ್ಲ ಯೋಗ್ಯ ನಾಯಕರ ಆಯ್ಕೆ ಈಗ AAP ಮುಂದಿರುವ ಸವಾಲು.

2012ರಲ್ಲಿ ಪ್ರಾರಂಭವಾದಾಗಿನಿಂದ ಪಕ್ಷದ ಸಂಚಾಲಕರಾಗಿ ಮತ್ತು ಸುಮಾರು ಒಂದು ದಶಕದ ಕಾಲ ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ನೀಡಿರುವ ನಾಯಕತ್ವ ಹಾಗೂ ಅವರ ಸ್ಥಾನಮಾನಕ್ಕೆ ಹತ್ತಿರವಾಗುವಂತಹವರನ್ನು ಹುಡುಕುವುದು ಎಎಪಿ ನಾಯಕತ್ವಕ್ಕೆ ನಿಜವಾಗಿಯೂ ಸವಾಲಾಗಿದೆ. ಪಂಜಾಬ್, ದೆಹಲಿ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕೇಜ್ರಿವಾಲ್ ಅವರ ಬಂಧನವಾಗಿದೆ. ಈ ರಾಜ್ಯಗಳಲ್ಲಿ ಅವರು ಪಕ್ಷದ ಪ್ರಮುಖ ಪ್ರಚಾರಕರೂ ಆಗಿದ್ದರು.

ಮಾಜಿ ಐಆರ್‌ಎಸ್ ಅಧಿಕಾರಿಯಾಗಿರುವ ಸುನೀತಾ ಕೇಜ್ರಿವಾಲ್ ಹೊರತಾಗಿ, ಆಪ್ ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರುಗಳೂ ಉನ್ನತ ಹುದ್ದೆಗೆ ಸುತ್ತು ಹಾಕುತ್ತಿವೆ. ಶಿಕ್ಷಣ, ಹಣಕಾಸು, ಪಿಡಬ್ಲ್ಯೂಡಿ, ಆದಾಯ ಮತ್ತು ಸೇವೆಗಳು ಸೇರಿದಂತೆ ದೆಹಲಿ ಸರ್ಕಾರದಲ್ಲಿ ಅತಿಶಿ ಹೆಚ್ಚಿನ ಸಂಖ್ಯೆಯ ಖಾತೆಗಳನ್ನು ಹೊಂದಿದ್ದಾರೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಪಕ್ಷದ ವಕ್ತಾರರೂ ಆಗಿರುವ ಅವರು ಎಎಪಿ ಸರ್ಕಾರ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸೌರಭ್ ಭಾರದ್ವಾಜ್ ಕೂಡ ದೆಹಲಿ ಕ್ಯಾಬಿನೆಟ್‌ನ ಪ್ರಮುಖ ಸದಸ್ಯರಾಗಿದ್ದು, ಆರೋಗ್ಯ ಮತ್ತು ನಗರಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಅವರು ಪಕ್ಷದ ಚಿರಪರಿಚಿತ ಮುಖವೂ ಆಗಿದ್ದಾರೆ. ಆಗಾಗ್ಗೆ ಪಕ್ಷವನ್ನು ಮತ್ತು ಅದರ ನಾಯಕರನ್ನು ರಕ್ಷಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಆಡಳಿತ ಮತ್ತು ರಾಜಕೀಯದ ವಿಷಯಗಳ ಬಗ್ಗೆ ಕೇಂದ್ರದ ಬಿಜೆಪಿ ಮತ್ತು ಅದರ ಸರ್ಕಾರಕ್ಕೆ ಪ್ರತಿದಾಳಿ ಮಾಡುತ್ತಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಎಪಿ “ಮೈ ಭಿ ಕೇಜ್ರಿವಾಲ್ (ನಾನು ಕೂಡ ಕೇಜ್ರಿವಾಲ್)” ಎಂಬ ಸಹಿ ಅಭಿಯಾನವನ್ನು ಪ್ರಾರಂಭಿಸಿತು. ಅವರನ್ನು ಬಂಧಿಸಿದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಅಥವಾ ಜೈಲಿನಿಂದ ಸರ್ಕಾರವನ್ನು ನಡೆಸಬೇಕೇ ಎಂದು ಜನರನ್ನು ಕೇಳಲಾಯಿತು. ಈ ಸಮಯದಲ್ಲಿ ಎಎಪಿ ಮುಖ್ಯಸ್ಥರು ಪಕ್ಷದ ಶಾಸಕರು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್‌ಗಳನ್ನು ಈ ವಿಷಯದ ಕುರಿತು ಪ್ರತಿಕ್ರಿಯೆ ಪಡೆಯಲು ಭೇಟಿಯಾದರು.

“ಈ ಅಭಿಯಾನದಲ್ಲಿ ಸುಮಾರು 90% ಜನರು, ಕೇಜ್ರಿವಾಲ್ ಅವರು ದೆಹಲಿಯ ಜನಾದೇಶವನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಅವರು ಎಲ್ಲಿಯೇ ಇದ್ದರೂ ದೆಹಲಿಯಲ್ಲಿ ಸರ್ಕಾರವನ್ನು ನಡೆಸುತ್ತಾರೆ” ಎಂದು ಭಾರದ್ವಾಜ್ ಇತ್ತೀಚೆಗೆ ಹೇಳಿದ್ದರು.

ಎಎಪಿ ನಾಯಕತ್ವವು ಗುಜರಾತ್ ಮತ್ತು ಗೋವಾದಲ್ಲಿಯೂ ಶಾಸಕರನ್ನು ಹೊಂದಿದ್ದು, ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರಗಳನ್ನು ನಡೆಸುವ ಪಕ್ಷದ ಸಂಚಾಲಕರನ್ನೂ ಹುಡುಕಬೇಕಾಗಿದೆ. ಸುನಿತಾ ಕೇಜ್ರಿವಾಲ್ ಅವರ ಹೊರತಾಗಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಅತಿಶಿ ಹೆಸರು ಕೂಡ ಹೊಸ ಎಎಪಿ ರಾಷ್ಟ್ರೀಯ ಸಂಚಾಲಕನ ಜವಾಬ್ದಾರಿಗೆ ಕೇಳಿಬರುತ್ತಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ ಬಂಧನ ವಿರೋಧಿಸಿ ಎಎಪಿ ಕಾರ್ಯಕರ್ತರ ಪ್ರತಿಭಟನೆ; ಪ್ರಿಯಾಂಕಾ ವಾಗ್ದಾಳಿ

Exit mobile version