Site icon Vistara News

Coronavirus | ಕೊರೊನಾ ಭೀತಿ, ಇದುವರೆಗೆ ಕೇಂದ್ರ ತೆಗೆದುಕೊಂಡ ಪ್ರಮುಖ ಕ್ರಮಗಳು ಯಾವವು? ತಯಾರಿ ಹೇಗಿದೆ?

As Covid-19 cases surge, health ministry asks states to follow 5-fold strategy

As Covid-19 cases surge, health ministry asks states to follow 5-fold strategy

ನವದೆಹಲಿ: ಕೊರೊನಾದ (Coronavirus) ಮೊದಲನೇ ಹಾಗೂ ಎರಡನೇ ಅಲೆಗಳು ದೇಶವನ್ನೇ ಬಾಧಿಸಿದ್ದವು. ಮೂಲ ಸೌಕರ್ಯ ಕೊರತೆ, ಆಮ್ಲಜನಕ, ಔಷಧ ಸಮಸ್ಯೆಯಿಂದಾಗಿ ಜನ ಪರಿತಪಿಸುವಂತಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರವು ಚೀನಾದಲ್ಲೀಗ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಹಲವಾರು ಕ್ರಮ ತೆಗೆದುಕೊಂಡಿದೆ. ಆ ಮೂಲಕ ನಾಲ್ಕನೇ ಅಲೆಯ ಭೀತಿ ಹುಟ್ಟಿಸಿರುವ ಓಮಿಕ್ರಾನ್‌ ಉಪತಳಿ ಬಿಎಫ್‌.7ಅನ್ನು ತಡೆಯಲು ಅಣಿಯಾಗಿದೆ. ಇದುವರೆಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ಕ್ರಮಗಳು ಹೀಗಿವೆ.

ಆರೋಗ್ಯದ ಮಾಹಿತಿ ಒದಗಿಸುವುದು ಕಡ್ಡಾಯ
ಚೀನಾ, ಅಮೆರಿಕ, ಬ್ರೆಜಿಲ್‌ ಸೇರಿ ಹಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರವು ವಿದೇಶಿ ಪ್ರಯಾಣಿಕರು ಭಾರತಕ್ಕೆ ಬರುವ ಮುನ್ನ ಲಸಿಕೆ ಹಾಕಿಸಿಕೊಂಡಿರುವುದು ಸೇರಿ ಅವರ ಆರೋಗ್ಯದ ಕುರಿತು ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 2020ರಲ್ಲಿಯೇ ಏರ್‌ ಸುವಿಧಾ ಎಂಬ ಪೋರ್ಟಲ್‌ ಅಭಿವೃದ್ಧಿಪಡಿಸಿದೆ. ಈಗ ಪೋರ್ಟಲ್‌ನಲ್ಲಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

ಆರ್‌ಟಿ-ಪಿಸಿಆರ್‌ ತಪಾಸಣೆ
ವಿದೇಶದಲ್ಲಿ ಮಾತ್ರ ಸೋಂಕಿನ ಪ್ರಸರಣ ಜಾಸ್ತಿಯಾಗಿರುವುದರಿಂದ ಬೇರೆ ರಾಷ್ಟ್ರಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಚೀನಾ, ಜಪಾನ್‌, ಸಿಂಗಾಪುರ, ಥೈಲ್ಯಾಂಡ್‌ ಹಾಗೂ ಸಿಂಗಾಪುರದಿಂದ ಭಾರತಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು, ತುರ್ತು ಸಂದರ್ಭಗಳಲ್ಲಿ ಯಾವುದೇ ತೊಂದರೆ ಆಗದಿರಲು ಡಿಸೆಂಬರ್‌ 27ರಂದು ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸೇರಿ ಹಲವು ದಿಸೆಯಲ್ಲಿ ಅಣಕು ಪ್ರದರ್ಶನ ಕೈಗೊಳ್ಳುವಂತೆ ನಿರ್ದೇಶಿಸಿದೆ.

ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಿಸಲು ಸೂಚನೆ
ಎರಡನೇ ಅಲೆಯಲ್ಲಿ ಕೃತಕ ಆಮ್ಲಜನಕ, ವೆಂಟಿಲೇಟರ್‌ ಸೇರಿ ಹಲವು ಸೌಕರ್ಯಗಳ ಕೊರತೆಯಿಂದಾಗಿ ಜನ ಪರಿತಪಿಸಿದರು. ಹಾಗಾಗಿ, ಕೇಂದ್ರ ಸರ್ಕಾರವು ನಾಲ್ಕನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದೆ. ಕೃತಕ ಆಮ್ಲಜನಕ ಘಟಕಗಳ ಕಾರ್ಯನಿರ್ವಹಣೆ, ಆಕ್ಸಿಜನ್‌ ಸಿಲಿಂಡರ್‌ ಸಂಗ್ರಹಣೆ, ವೆಂಟಿಲೇಟರ್‌, ಔಷಧಗಳ ಲಭ್ಯತೆಯನ್ನು ದೃಢಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಉನ್ನತ ಮಟ್ಟದ ಸಭೆ, ರಾಜ್ಯಗಳ ಜತೆ ಚರ್ಚೆ
ಚೀನಾದಲ್ಲಿ ಆತಂಕ ಹುಟ್ಟಿಸಿರುವ ಬಿಎಫ್‌.7 ಉಪತಳಿಯ ಕೆಲವೇ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗುತ್ತಲೇ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರೇ ಉನ್ನತ ಮಟ್ಟದ ಸಭೆ ನಡೆಸಿ ಮಾಹಿತಿ ಪಡೆದರು. ಹಾಗೆಯೇ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ ಹಲವು ನಿರ್ದೇಶನ ನೀಡಿದರು. ಮೋದಿ ಅವರು ಮನ್‌ ಕೀ ಬಾತ್‌ನಲ್ಲೂ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಇದನ್ನೂ ಓದಿ | China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ

Exit mobile version