Site icon Vistara News

AshoK Gehlot | ಕಾಂಗ್ರೆಸ್‌ ಚುನಾವಣೆ ಸಿದ್ಧತೆ ಮಧ್ಯೆಯೇ ಶಾಸಕರ ಸಭೆ ನಡೆಸಿ ಅಶೋಕ್‌ ಗೆಹ್ಲೋಟ್‌ ಶಕ್ತಿ ಪ್ರದರ್ಶನ

Ashok Gehlot and Sachin Pilot

ಜೈಪುರ: ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲು ದಿನಗಣನೆ ಆರಂಭವಾಗಿದೆ. ರಾಹುಲ್‌ ಗಾಂಧಿ ಅವರು ಮತ್ತೆ ಅಧ್ಯಕ್ಷರಾಗಲು ಒಪ್ಪದ ಕಾರಣ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌‌ (AshoK Gehlot) ಇಲ್ಲವೇ ಸಂಸದ ಶಶಿ ತರೂರ್‌ ಅವರಿಗೆ ಹೈಕಮಾಂಡ್‌ ಮಣೆ ಹಾಕುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಅಶೋಕ್‌ ಗೆಹ್ಲೋಟ್‌ ಅವರು ಜೈಪುರದಲ್ಲಿ ರಾತ್ರೋರಾತ್ರಿ ಶಾಸಕರ ಜತೆ ಸಭೆ ನಡೆಸಿದ್ದು, ಕಾಂಗ್ರೆಸ್‌ ಚುನಾವಣೆಗೂ ಮುನ್ನವೇ ಶಕ್ತಿ ಪ್ರದರ್ಶಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಅಧ್ಯಕ್ಷರಾದರೂ ಅಶೋಕ್‌ ಗೆಹ್ಲೋಟ್‌ ಅವರಿಗೆ ರಾಜಸ್ಥಾನ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಲು ಇಷ್ಟವಿಲ್ಲ. ಈಗಾಗಲೇ ಅದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಗೆಹ್ಲೋಟ್‌ ಅವರು ಅಧ್ಯಕ್ಷರಾದರೆ, ರಾಜಸ್ಥಾನ ಮುಖ್ಯಮಂತ್ರಿಯಾಗಬೇಕು ಎಂಬುದು ಸಚಿನ್‌ ಪೈಲಟ್‌ ಅವರ ಉದ್ದೇಶವಾಗಿದೆ. ಹಾಗಾಗಿಯೇ, ತಮ್ಮ ಪರ ಇರುವ ಶಾಸಕರ ಸಭೆ ನಡೆಸಿ ಗೆಹ್ಲೋಟ್‌ ಶಕ್ತಿ ಪ್ರದರ್ಶಿಸಿದ್ದಾರೆ ಎನ್ನಲಾಗುತ್ತದೆ.

“ಅಶೋಕ್‌ ಗೆಹ್ಲೋಟ್‌ ಅವರು ರಾಜಸ್ಥಾನ ಬಿಟ್ಟು ಹೋಗುವುದಿಲ್ಲ. ಅವರು ಕಾಂಗ್ರೆಸ್‌ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆ” ಎಂದು ಸಭೆ ನಡೆಸಿದ ಬಳಿಕ ಸಚಿವರೂ ಆದ ಗೆಹ್ಲೋಟ್‌ ಆಪ್ತ ಪ್ರತಾಪ್‌ ಸಿಂಗ್‌ ಕಂಚಾರಿಯಾವಾಸ್‌ ತಿಳಿಸಿದ್ದಾರೆ.

ಹಾಗಾಗಿ, ಕಾಂಗ್ರೆಸ್‌ ಅಧ್ಯಕ್ಷರಾದರೂ ಗೆಹ್ಲೋಟ್‌ ಅವರು ಮುಖ್ಯಮಂತ್ರಿಯಾಗಿಯೇ ಉಳಿಯುವ ಸಾಧ್ಯತೆ ಇದೆ ಅಥವಾ ಇದಕ್ಕಾಗಿ ಈಗಿನಿಂದಲೇ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈಗಾಗಲೇ ಬಂಡಾಯದ ಬಿಸಿ ತೋರಿಸಿರುವ ಸಚಿನ್‌ ಪೈಲಟ್‌ ಅವರ ನಡೆ ಏನೆಂಬುದು ಕುತೂಹಲ ಮೂಡಿಸಿದೆ. ಅಕ್ಟೋಬರ್‌ ೧೭ರಂದು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಸೆಪ್ಟೆಂಬರ್‌ ೩೦ರವರೆಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಸೋಮವಾರ ಗೆಹ್ಲೋಟ್‌ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಇದನ್ನೂ ಓದಿ | Cong Prez Poll | ಯಾರ ಅಪ್ಪಣೆ ಯಾಕೆ?- ಶಶಿ ತರೂರ್​​ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಜೈರಾಮ್​ ರಮೇಶ್​ ಟ್ವೀಟ್​

Exit mobile version