Site icon Vistara News

Ashwin Dani: ಮಾರುಕಟ್ಟೆಯ ‘ಬಣ್ಣ’ ಬದಲಿಸಿದ ಏಷ್ಯನ್ ಪೇಂಟ್ಸ್‌‌ನ ಅಶ್ವಿನ್ ದಾಣಿ ನಿಧನ

Asian Paints Ashwin Dani dies at 79

ಮುಂಬೈ: ಏಷ್ಯನ್ ಪೇಂಟ್ಸ್ (Asian Paints) ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಅಶ್ವಿನ್ ದಾಣಿ (Ashwin Dani) ಅವರು ಗುರುವಾರ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. 2021ರಲ್ಲಿ ಆಡಳಿತ ಮಂಡಳಿಯ ದೀಪಕ್ ಸತ್ವಾಳ್ಕೇಕರ್ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಿದ ಬಳಿಕ, ದಾಣಿ ಅವರು ಕಂಪನಿಯ ನಾನ್ ಎಕ್ಸಿಕ್ಯೂಟಿವ್ (Non-Executive Director) ಹಾಗೂ ಪ್ರಮೋಟರ್ ಡೈರೆಕ್ಟರ್ ಆಗಿ ಮುಂದುವರಿದಿದ್ದರು. ಭಾರತದಲ್ಲಿ ಪೇಂಟ್ಸ್ ಮಾರುಕಟ್ಟೆಯನ್ನು (Paits Market of India) ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ದಾಣಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಅಶ್ವಿನ್ ದಾಣಿ ಅವರ ನಿಧನದ ಸುದ್ದಿಯನ್ನು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿರುವ ಏಷ್ಯನ್ ಕಂಪನಿಯು, ಅನಾರೋಗ್ಯದಿಂದ ಬಳಲುತ್ತಿದ್ದ ದಾಣಿ ನಿಧನರಾಗಿದ್ದಾರೆ ಎಂದು ತಿಳಿಸಿದೆ. ಅಶ್ವಿನ್ ಅವರು 1968ರಿಂದಲೂ ಕಂಪನಿಯಲ್ಲಿದ್ದರು. ಕಂಪನಿಯು ತಾಂತ್ರಿಕತೆಯಲ್ಲಿ ನೈಪುಣ್ಯತೆಯನ್ನು ಸಾಧಿಸುವುದರ ಹಿಂದಿ ಶಕ್ತಿಯಾಗಿದ್ದರು. ಕಂಪನಿಯ ಆಡಳಿತ ಮಂಡಳಿಗೆ ಅವರು 1970ರಲ್ಲಿ ಸೇರ್ಪಡೆಯಾಗಿದ್ದರು. 1998ರಿಂದ 2009ರವರೆಗೆ ಅವರ ಕಂಪನಿಯ ವೈಸ್ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದೆ.

2009ರಿಂದ ಅಶ್ವಿನ್ ದಾಣಿ ಅವರು ಮಂಡಳಿ ಮತ್ತು ಕಂಪನಿಯ ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿ ಮುಂದುವರಿದ್ದರು. 2018 ರಿಂದ 2021ರ ನಡುವಿನ ಅವಧಿಗೆ ಅವರು ಮಂಡಳಿ ಮತ್ತು ಕಂಪನಿಯ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಅಶ್ವಿನ್ ದಾಣಿ ಕಂಪನಿಗೆ ಅವರು ನೀಡಿದ ಮಹತ್ವದ ಕೊಡುಗೆಗಳಿಗಾಗಿ ಯಾವಾಗಲೂ ಸ್ಮರಿಸಲಾಗುವುದು ಎಂದು ಏಷ್ಯನ್ ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಶ್ವಿನ್ ದಾಣಿ ಅವರ ನಾಯಕತ್ವದಲ್ಲಿ, ಏಷ್ಯನ್ ಪೇಂಟ್ಸ್ ತನ್ನ ಜಾಗತಿಕ ಕಾರ್ಯಾಚರಣೆಗಳನ್ನು ಗಣನೀಯವಾಗಿ ವಿಸ್ತರಿಸಿತು. ಜಾಗತಿಕ ಬಣ್ಣದ ಉದ್ಯಮದಲ್ಲಿ ಕಂಪನಿಯನ್ನು ಪ್ರಮುಖ ಸ್ಥಾನಕ್ಕೆ ಏರಿತು. ಗಮನಾರ್ಹವಾಗಿ, ಅವರು ಭಾರತದ ಮೊದಲ ಗಣಕೀಕೃತ ಬಣ್ಣ ಮಿಶ್ರಣ ಕಾರ್ಯಕ್ರಮವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಶ್ವಿನ್ ದಾಣಿ ಅವರ ತಂದೆ ಹಾಗೂ ಇತರ ಮೂವರು 1942ರಲ್ಲಿ ಏಷ್ಯನ್ ಕಂಪನಿಯನ್ನು ಸ್ಥಾಪಿಸಿದ್ದರು. ಈ ಕಂಪನಿಯನ್ನು 1968ರಲ್ಲಿ ಸೇರಿದ ದಾಣಿ ಅವರು ಕಂಪನಿಯ ಏಳ್ಗೆಗಾಗಿ ನಿರಂತರವಾಗಿ ದುಡಿದಿದ್ದಾರೆ. 1998 ಮತ್ತು 2009 ಮಾರ್ಚ್ ಅವಧಿಯಲ್ಲಿ ಅವರು ಕಂಪನಿ ಉಪ ಚೇರ್ಮನ್ನರಾಗಿ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ : ಖ್ಯಾತ ಉದ್ಯಮಿ ಅಣ್ಣಪ್ಪ ಪೈ ನಿಧನ

ಮುಂಬೈಯಲ್ಲಿ ಜನಿಸಿದ ದಾಣಿ ಅವರು ಮುಂಬೈ ವಿಶ್ವವಿದ್ಯಾಲಯದ ವಿಜ್ಞಾನ ಸಂಸ್ಥೆಯಿಂದ ಬಿಎಸ್‌ಸಿ ಪದವಿಯನ್ನು ಪಡೆದುಕೊಂಡಿದ್ದರು. ಬಳಿಕ ಅವರು, ಅಮೆರಿಕದ ಒಹಿಯೊ ರಾಜ್ಯದ ಯುನಿರ್ವಸಿಟಿ ಆಫ್ ಅಕ್ರಾನ್‌ನಲ್ಲಿ ಪಾಲಿಮರ್ ಸೈನ್ಸ್‌ನಲ್ಲಿ ಎಂಎಸ್ಸಿ ಪದವಿಯನ್ನು ಸಂಪಾದಿಸಿದರು. ನ್ಯೂಯಾರ್ಕ್‌ನ ಟ್ರಾಯ್‌ನಲ್ಲಿರುವ ರೆನ್ಸೆಸ್ಸೆಲೀರ್‌ ಪಾಲಿಟೆಕ್ನಿಕ್‌ನಿಂದ ಕಲರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡರು. ಏಷ್ಯನ್ ಪೇಂಟ್ಸ್ ಸೇರುವ ಮುಂಚೆ ದಾಣಿ ಅವರು ಅಮೆರಿಕದ ಡೆಟ್ರಾಯಿಟ್‌ನಲ್ಲಿರುವ ಇನ್ನಾಮಾಂಟ್‌ ಕಾರ್ಪ್‌ನಲ್ಲಿ ಡೆವಲಪ್ಮೆಂಟ್ ಕೆಮಿಸ್ಟ್ ಆಗಿ ಕೆಲಸ ಮಾಡಿದ್ದರು.

ಅಶ್ವಿನ್ ದಾಣಿ ಅವರು ಇನಾ ದಾನಿಯನ್ನು ವಿವಾಹವಾಗಿದ್ದಾರೆ. ಮೂವರು ಮಕ್ಕಳಿದ್ದಾರೆ. ಪುತ್ರ ಮಾಲವ್ ದಾಣಿ ಏಷ್ಯನ್ ಪೇಂಟ್ಸ್ ನಿರ್ದೇಶಕರಾಗಿದ್ದಾರೆ. ದಾಣಿ ಅವರು ಯೋಗ ಪ್ರಾಕ್ಟಿಸ್ ಮಾಡುತ್ತಿದ್ದರು. ಆರ್ಟ್ ಕಲೆಕ್ಷನ್‌ನಲ್ಲಿ ಆಸಕ್ತಿ ಹೊಂದಿದ್ದರು. ಅಶ್ವಿನ್ ದಾಣಿ ಕುಟುಂಬದ ಸಂಪತ್ತು ಅಂದಾಜು 7.7 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ಅಂದಾಜಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version