ದಿಸ್ಪುರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಹಂತ ಹಂತವಾಗಿ ಘೋಷಿಸುತ್ತಿವೆ. ಹೈಕಮಾಂಡ್ ಮನವೊಲಿಕೆ, ಲಾಬಿ ಸೇರಿ ಹಲವು ಕಸರತ್ತುಗಳ ಮೂಲಕ ಟಿಕೆಟ್ ಪಡೆದುಕೊಂಡವರು ಸಂತಸದಲ್ಲಿದ್ದರೆ, ಟಿಕೆಟ್ ಸಿಗದವರು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಸ್ಸಾಂನಲ್ಲಿ (Assam) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಂಡತಿಗೆ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಶಾಸಕ (Congress MLA) ಭರತ್ ಚಂದ್ರ ನಾರಾ (Bharat Chandra Narah) ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅಸ್ಸಾಂನ ಲಖೀಮ್‌ಪುರ ಜಿಲ್ಲೆಯ ನೌಬೊಯಿಚಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಭರತ್ ಚಂದ್ರ ನಾರಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಸ್ಸಾಂ ಕಾಂಗ್ರೆಸ್ ಮೀಡಿಯಾ ಸೆಲ್ ಮುಖ್ಯಸ್ಥನ ಹುದ್ದೆಯನ್ನೂ ಅವರು ತ್ಯಜಿಸಿದ್ದಾರೆ. “ನಾನು ತತ್‌ಕ್ಷಣದಿಂದಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಆದರೆ, ಇದುವರೆಗೆ ಭರತ್ ಚಂದ್ರ ನಾರಾ ಅವರು ತಮ್ಮ ಮುಂದಿನ ನಡೆಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
Assam Congress MLA Bharat Chandra Narah tenders his resignation from the party. pic.twitter.com/3aauZNQFYm
— ANI (@ANI) March 25, 2024
ಕೇಂದ್ರದ ಮಾಜಿ ಸಚಿವೆಯೂ ಆಗಿರುವ, ಪತ್ನಿ ರಾಣಿ ನಾರಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸ ಭರತ್ ಚಂದ್ರ ನಾರಾ ಅವರದ್ದಾಗಿತ್ತು. ಲಖೀಮ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಲಖೀಮ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಉದಯ್ ಶಂಕರ್ ಹಜಾರಿಕಾ ಅವರಿಗೆ ಟಿಕೆಟ್ ನೀಡಿದೆ. ಈಗ ರಾಣಿ ನಾರಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಧಾನ್ ಬುರೌಹ್ ಅವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?
ಇದರಿಂದಾಗಿ ಭರತ್ ಚಂದ್ರ ನಾರಾ ಅವರಿಗೆ ಪಕ್ಷದ ನಿರ್ಧಾರ ಬಗ್ಗೆ ಭಾರಿ ಬೇಸರ ಉಂಟಾಗಿದೆ. ರಾಣಿ ನಾರಾ ಅವರು ಲಖೀಮ್‌ಪುರ ಲೋಕಸಭೆ ಕ್ಷೇತ್ರದಿಂದ ಇದಕ್ಕೂ ಮೊದಲು ಮೂರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಒಮ್ಮೆ ಅವರು ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಹಾಗಾಗಿ, ರಾಣಿ ನಾರಾ ಅವರು ಈ ಬಾರಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಸ್ಸಾಂನ 14 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ಸಾಂ ಜೈತ್ಯಾ ಪರಿಷತ್ (AJP) ಪಕ್ಷಕ್ಕೆ ಬೆಂಬಲ ಘೋಷಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ