ದೇಶ
ಹೆಂಡತಿಗೆ ಎಂಪಿ ಟಿಕೆಟ್ ನೀಡಿಲ್ಲವೆಂದು ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪತ್ನಿಗೆ ಟಿಕೆಟ್ ನೀಡಲಿಲ್ಲ ಎಂದು ಅಸ್ಸಾಂ ಕಾಂಗ್ರೆಸ್ ಶಾಸಕ ಭರತ್ ಚಂದ್ರ ನಾರಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ಅವರ ಮುಂದಿನ ನಡೆಯು ನಿಗೂಢವಾಗಿದೆ.
ದಿಸ್ಪುರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಹಂತ ಹಂತವಾಗಿ ಘೋಷಿಸುತ್ತಿವೆ. ಹೈಕಮಾಂಡ್ ಮನವೊಲಿಕೆ, ಲಾಬಿ ಸೇರಿ ಹಲವು ಕಸರತ್ತುಗಳ ಮೂಲಕ ಟಿಕೆಟ್ ಪಡೆದುಕೊಂಡವರು ಸಂತಸದಲ್ಲಿದ್ದರೆ, ಟಿಕೆಟ್ ಸಿಗದವರು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಸ್ಸಾಂನಲ್ಲಿ (Assam) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಂಡತಿಗೆ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಶಾಸಕ (Congress MLA) ಭರತ್ ಚಂದ್ರ ನಾರಾ (Bharat Chandra Narah) ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅಸ್ಸಾಂನ ಲಖೀಮ್‌ಪುರ ಜಿಲ್ಲೆಯ ನೌಬೊಯಿಚಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಭರತ್ ಚಂದ್ರ ನಾರಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಸ್ಸಾಂ ಕಾಂಗ್ರೆಸ್ ಮೀಡಿಯಾ ಸೆಲ್ ಮುಖ್ಯಸ್ಥನ ಹುದ್ದೆಯನ್ನೂ ಅವರು ತ್ಯಜಿಸಿದ್ದಾರೆ. “ನಾನು ತತ್‌ಕ್ಷಣದಿಂದಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಆದರೆ, ಇದುವರೆಗೆ ಭರತ್ ಚಂದ್ರ ನಾರಾ ಅವರು ತಮ್ಮ ಮುಂದಿನ ನಡೆಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
Assam Congress MLA Bharat Chandra Narah tenders his resignation from the party. pic.twitter.com/3aauZNQFYm
— ANI (@ANI) March 25, 2024
ಕೇಂದ್ರದ ಮಾಜಿ ಸಚಿವೆಯೂ ಆಗಿರುವ, ಪತ್ನಿ ರಾಣಿ ನಾರಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸ ಭರತ್ ಚಂದ್ರ ನಾರಾ ಅವರದ್ದಾಗಿತ್ತು. ಲಖೀಮ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಪತ್ನಿಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಲಖೀಮ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಉದಯ್ ಶಂಕರ್ ಹಜಾರಿಕಾ ಅವರಿಗೆ ಟಿಕೆಟ್ ನೀಡಿದೆ. ಈಗ ರಾಣಿ ನಾರಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯು ಪ್ರಧಾನ್ ಬುರೌಹ್ ಅವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?
ಇದರಿಂದಾಗಿ ಭರತ್ ಚಂದ್ರ ನಾರಾ ಅವರಿಗೆ ಪಕ್ಷದ ನಿರ್ಧಾರ ಬಗ್ಗೆ ಭಾರಿ ಬೇಸರ ಉಂಟಾಗಿದೆ. ರಾಣಿ ನಾರಾ ಅವರು ಲಖೀಮ್‌ಪುರ ಲೋಕಸಭೆ ಕ್ಷೇತ್ರದಿಂದ ಇದಕ್ಕೂ ಮೊದಲು ಮೂರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಒಮ್ಮೆ ಅವರು ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಹಾಗಾಗಿ, ರಾಣಿ ನಾರಾ ಅವರು ಈ ಬಾರಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಸ್ಸಾಂನ 14 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ಸಾಂ ಜೈತ್ಯಾ ಪರಿಷತ್ (AJP) ಪಕ್ಷಕ್ಕೆ ಬೆಂಬಲ ಘೋಷಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ದೇಶ
Pralhad Joshi : ನನಗೆ ಸಹೋದರಿಯೇ ಇಲ್ಲ! ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ- ಪ್ರಲ್ಹಾದ ಜೋಶಿ
Pralhad Joshi : ನನಗೆ ಸಹೋದರಿಯೇ ಇಲ್ಲ. ನನ್ನ ಸಹೋದರ ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ (Pralhad Joshi) ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಬಗ್ಗೆ ಹೀಗೆ ಸ್ಪಷ್ಟನೆ ನೀಡಿದರು.
ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು. ಗೋಪಾಲ್ ಜೋಶಿ ಮಾತ್ರವಲ್ಲ ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಲ್ಹಾದ ಜೋಶಿ ಪುನರುಚ್ಚರಿಸಿದರು.
ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿಟ್ ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಪ್ರಲ್ಹಾದ ಜೋಶಿ ಸ್ಪಷ್ಟನೆ ನೀಡಿದರು . ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದರು.
ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ
ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸಹ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜೋಶಿ ಕಿಡಿ ಕಾರಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಒಂದು ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ “ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು”. ಇಂಥ ಒಂದು ಖಾತೆ ನಿರ್ವಹಿಸಿದಾಗ್ಯೂ ಯಾವತ್ತೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
ಬೆಂಗಳೂರು
Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್ ಪಾರ್ಕ್
Bengaluru Airport : ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (BACL) ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ 2 ದಶಲಕ್ಷ ಚದರ ಅಡಿ ಪ್ರದೇಶದ ಬಿಸಿನೆಸ್ ಪಾರ್ಕ್ ತೆರೆಯಲು ಮೊದಲ ಹೆಜ್ಜೆ ಇಟ್ಟಿದೆ.
ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಅಂಗ ಸಂಸ್ಥೆಯಾದ (Bengaluru Airport) ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (BACL) ನ ಮಹತ್ವಾಕಾಂಕ್ಷಿ ಯೋಜನೆಯಾದ “ಬಿಸಿನೆಸ್ ಪಾರ್ಕ್” ತೆರೆಯಲು 2 ದಶಲಕ್ಷ ಚದರ ಅಡಿ ಪ್ರದೇಶವನ್ನು ತನ್ನದಾಗಿಸಿಕೊಳ್ಳುವ ಮೂಲಕ ಈ ಯೋಜನೆಯತ್ತ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ.
ಜಾಗತಿಕ ಸಾಮರ್ಥ್ಯ ಕೇಂದ್ರ (ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್,ಜಿಸಿಸಿ) ಗಳಲ್ಲೇ ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದಲಾಗಿದ್ದು, ಇದರ ಭಾಗವಾಗಿ ಬೃಹತ್ ಬಿಸಿನೆಸ್ ಪಾರ್ಕ್ ತೆರೆಯಲಾಗುತ್ತಿದೆ. ಇದರಿಂದ ಒಟ್ಟು 3.5 ಲಕ್ಷ ಉದ್ಯೋಗ ಸೃಷ್ಟಿಗೆ ಹಾಗೂ ಆರ್ಥಿಕತೆಗೆ 50 ಶತಕೋಟಿ ಡಾಲರ್ ಕೊಡುಗೆ ನೀಡಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BLR ವಿಮಾನ ನಿಲ್ದಾಣ) ಆವರಣದ್ಲಲಿರುವ ಬೆಂಗಳೂರು ವಿಮಾನ ನಿಲ್ದಾಣ ನಗರವನ್ನು ವಿಶ್ವ ದರ್ಜೆಯ ಮಿಶ್ರ-ಬಳಕೆಯ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ವಿಮಾನ ನಿಲ್ದಾಣ ನಗರದಲ್ಲಿ ಪ್ರಮುಖವಾಗಿ ವ್ಯಾಪಾರ, ಉದ್ಯಾನವನಗಳು, ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕೇಂದ್ರಗಳು ಮತ್ತು ವಿವಿಧ ಮನರಂಜನಾ ಹಾಗೂ ಆತಿಥ್ಯ ತಾಣಗಳು ತಲೆಯೆತ್ತಲಿದೆ. ಈ ನಗರವು ಸುಸ್ಥಿರ, ಸ್ಮಾರ್ಟ್, ಆಕರ್ಷಕ ನಗರಾಭಿವೃದ್ಧಿಯಿಂದ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಿ ಈ ನಗರ ಕಾರ್ಯನಿರ್ವಹಿಸಲು ಸಿದ್ಧವಾಗುತ್ತಿದೆ.
ಈ ಬ್ಯುಸಿನೆಸ್ ಪಾರ್ಕ್ ಅನ್ನು 17.7 ಎಕರೆಗಳಲ್ಲಿ ನಿರ್ಮಿಸಲಾಗುತ್ತಿರುವ ಈ ಬಿಸಿನೆಸ್ ಪಾರ್ಕ್, ನಾಲ್ಕು ಬ್ಲಾಕ್‌ಗಳನ್ನು ಒಳಗೊಂಡಿದ್ದು, ಪ್ರತಿ ಬ್ಲಾಕ್ 0.5 ಮಿಲಿಯನ್ ಚದರ ಅಡಿ ನಗರ ಅರಣ್ಯದೊಳಗೆ ಮೂಡಿಬರಲಿದೆ. ಬಯೋಫಿಲಿಕ್ ವಿನ್ಯಾಸವು ಸೊಂಪಾದ ಉದ್ಯಾನಗಳು, ಬಾಲ್ಕನಿಗಳು ಮತ್ತು ಹಸಿರಿನಿಂದ ಕೂಡಿರುವ ಸ್ಥಳಗಳನ್ನು ಒಳಗೊಂಡಿದ್ದು, ಈ ಮೂಲಕ ವ್ಯಾಪಾರ ವಹಿವಾಟನ್ನು ಇನ್ನಷ್ಟು ಆಸಕ್ತಿದಾಯಗೊಳಿಸುವ ಉದ್ದೇಶವನ್ನು ಹೊಂದಿದೆ.
ಬಿಎಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಮಾತನಾಡಿ, “ಬೆಂಗಳೂರು ವಿಶ್ವದ ಜಿಸಿಸಿ ರಾಜಧಾನಿಯಾಗಿ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಹನ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಶೇ. 36ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCCs) ಬೆಂಗಳೂರು, ಭಾರತದ ಪ್ರಧಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿರುವ 2 ಮಿಲಿಯನ್ ಚದರ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಿಸಿನೆಸ್ ಪಾರ್ಕ್ ಸಾಕಷ್ಟು ನೆಟ್‌ವರ್ಕಿಂಗ್ ಅವಕಾಶಗಳು, ಸುಧಾರಿತ ಮೂಲಸೌಕರ್ಯಗಳು ಹಾಗೂ ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಈ ನಮ್ಮ ಯೋಜನೆಯು ಕರ್ನಾಟಕ ರಾಜ್ಯದ ಪ್ರಸ್ತುತ ಜಿಸಿಸಿ ನೀತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಮೂಲಕ, ಬೆಂಗಳೂರನ್ನು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಕೇಂದ್ರಬಿಂದುವಾಗಿಸಲಿದೆ. ವಿಮಾನ ನಿಲ್ದಾಣ ನಗರದ ಒಟ್ಟಾರೆ ಅಭಿವೃದ್ಧಿಯ ಶೇ.52 ರಷ್ಟು ಭಾಗವು ವ್ಯಾಪಾರ ಉದ್ಯಾನವನಗಳ (ಬಿಸಿನೆಸ್ ಪಾರ್ಕ್) ಜಾಲವನ್ನು ಹೊಂದಲಿದ್ದು, ಸಹಯೋಗ ಹಾಗೂ ನಾವಿನ್ಯತೆಗೆ ಪ್ರೋತ್ಸಾಹ ಕೊಡಲಿದೆ.
ಇದನ್ನೂ ಓದಿ: Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’
ಮುಂದಿನ ದಿನಗಳಲ್ಲಿ ತಲೆ ಎತ್ತಲಿರುವ ಏರ್‌ಪೋರ್ಟ್ ವೆಸ್ಟ್ ಮೆಟ್ರೋ ನಿಲ್ದಾಣವು ಈ ಬಿಸಿನೆಸ್ ನ ಅತಿ ಸಮೀಪದಲ್ಲಿದ್ದು, ಬೆಂಗಳೂರಿನ ಸಿಟಿ ಸೆಂಟರ್‌ಗೆ ಸಂಪರ್ಕವನ್ನು ಕಲ್ಪಿಸಲಿದೆ. ಇದರಿಂದ ಉದ್ಯೋಗಿಗಳು, ಸಂದರ್ಶಕರಿಗೂ ಸಹ ವೇಗ ಮತ್ತು ಪರಿಸರ ಸ್ನೇಹಿ ಪ್ರಯಾಣವನ್ನು ಒದಗಿಸಲಿದೆ. ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಧಾರಿತ ತಂತ್ರಜ್ಞಾನ ಕೇಂದ್ರವನ್ನು ರೂಪಿಸುತ್ತಿದ್ದು, ಇದರಲ್ಲಿ 3D ಮುದ್ರಣ ಸಂಸ್ಥೆ ಮತ್ತು ಹೈಟೆಕ್ ಕೇಂದ್ರ ಪಾಕಶಾಲೆಗಳು ಸೇರಿದಂತೆ ಹಲವು ನಾವಿನ್ಯತೆಯ ಕೇಂದ್ರಬಿಂದುವಾಗಿರಲಿದೆ ಎಂದರು.
ಈ ನಗರದಲ್ಲಿ ಮನರಂಜನೆ ಮತ್ತು ಆತಿಥ್ಯ ತಾಣಗಳು ತಲೆ ಎತ್ತುತ್ತಿದ್ದು, ವಿಮಾನ ನಿಲ್ದಾಣ ಪರಿಸರ ವ್ಯವಸ್ಥೆಯಲ್ಲಿ ಭಾರತದ ಪ್ರಪ್ರಥಮ ಕನ್ಸರ್ಟ್ ಅರೆನಾ, ಸಮಾವೇಶ ಮತ್ತು ಪ್ರದರ್ಶನ ಕೇಂದ್ರಗಳನ್ನು ಸಹ ಈ ಯೋಜನೆ ಒಳಗೊಂಡಿದೆ. ಈಗಾಗಲೇ ಏರ್‌ಪೋರ್ಟ್ ಆವರಣದಲ್ಲಿರುವ ಹೋಟೆಲ್ ತಾಜ್ ಬೆಂಗಳೂರು ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 775 ಕೊಠಡಿಗಳ ಕಾಂಬೋ ಹೋಟೆಲ್ (ವಿವಾಂಟಾ & ಜಿಂಜರ್) ಸೇರಿದಂತೆ ಏರ್‌ಪೋರ್ಟ್ ಸಿಟಿಯೊಳಗೆ 5,200 ಹೋಟೆಲ್ ಕೊಠಡಿಗಳನ್ನು ಒಳಗೊಂಡು ಬೃಹತ್ ಆತಿಥ್ಯ ತಾಣವಾಗಿ ಹೊರಹೊಮ್ಮಲಿದೆ.
ಏರ್‌ಪೋರ್ಟ್ ಸಿಟಿಯು ಅದ್ಭುತ ವಿನ್ಯಾಸದಿಂದ ರೂಪುಗೊಳ್ಳುತ್ತಿದ್ದು, ಇಡೀ ಆವರಣ ಶಕ್ತಿ-ತಟಸ್ಥವಾಗಿ ಕಾರ್ಯನಿರ್ವಹಿಸಿ, ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುತ್ತಿದ್ದು, ಐಜಿಬಿಸಿ ಯ ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣೀಕರಣವನ್ನು ಗಳಿಸಿದೆ. ಅಷ್ಟೇ ಅಲ್ಲದೆ, ಬೃಹತ್ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗುತ್ತಿದ್ದು , ಇದರಿಂದ ವಿಮಾನ ನಿಲ್ದಾಣ ನಗರದ ನೀರಿನ ಅಗತ್ಯಗಳನ್ನು ಪೂರೈಸಲಿದೆ, ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪರಿಸರ ಸ್ನೇಹಿ, ಸುಸ್ಥಿರ ಅಭಿವೃದ್ಧಿ ಮಾರ್ಗದರ್ಶನದ ಜವಾಬ್ದಾರಿ ನಿರ್ವಹಣೆಯ ಧ್ಯೇಯದೊಂದಿಗೆ ಹೊಂದಿಸಲಾಗಿದೆ.
ಇನ್ನು, ಬೆಂಗಳೂರು ವಿಮಾನ ನಿಲ್ದಾಣ ನಗರವು ಅತಿ ನಿರೀಕ್ಷಿತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ, ಇದಕ್ಕಾಗಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸುತ್ತಿದ್ದು, ಇದು ರಾಜ್ಯದ ಶೈಕ್ಷಣಿಕ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಲೈಫ್ ಸೈನ್ಸಸ್ ಪಾರ್ಕ್ ಅನ್ನು ಸ್ಥಾಪಿಸುತ್ತಿದೆ. BIAL ಅಕಾಡೆಮಿ ಮತ್ತು ಏರ್ ಇಂಡಿಯಾ ಅಕಾಡೆಮಿಯಂತಹ ಸಂಸ್ಥೆಗಳು ಮುಂದಿನ ಪೀಳಿಗೆಯ ವಾಯುಯಾನ ಮತ್ತು ಆತಿಥ್ಯ ವೃತ್ತಿಪರರಿಗೆ ತರಬೇತಿ ನೀಡಲಿವೆ.
ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಸ್ಥಿರ, ನವೀನ ಮತ್ತು ಸಂಪರ್ಕಿತ ನಗರಾಭಿವೃದ್ಧಿಯ ದೃಷ್ಟಿಯನ್ನು ಸಾಕಾರಗೊಳಿಸುತ್ತಿದ್ದು, ಮಿಶ್ರ-ಬಳಕೆಯ ನಗರದ ಯೋಜನೆಗೆ ಜಾಗತಿಕವಾಗಿ ಮಾದರಿಯಾಗಲಿದೆ. ಈ ಪ್ರದೇಶದ ಆರ್ಥಿಕ ಬೆಳವಣಿಗೆಯ ಕೇಂದ್ರಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR ವಿಮಾನ ನಿಲ್ದಾಣ) ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಕಳೆದ ವರ್ಷ 37.5 ದಶಲಕ್ಷ ರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣವು 2030 ರ ವೇಳೆಗೆ ತನ್ನ ಸಾಮರ್ಥ್ಯವನ್ನು 90 ದಶಲಕ್ಷ ಪ್ರಯಾಣಿಕರಿಗೆ ವಿಸ್ತರಿಸಲು ಯೋಜಿಸಲಾಗಿದೆ. ಈ ಅಭಿವೃದ್ಧಿ ಬೆಂಗಳೂರಿನ ಪಾತ್ರವನ್ನು ಜಾಗತಿಕ ವ್ಯವಹಾರಗಳಿಗೆ ಮತ್ತು ಸುಧಾರಿತ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಗಟ್ಟಿಗೊಳಿ ಸಲು ಅನುವುಮಾಡಿಕೊಡಲಿದೆ. ವಿಶೇಷವಾಗಿ ಏರೋಸ್ಪೇಸ್ ವಲಯದಲ್ಲಿ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಉದ್ಯಮದ ದೈತ್ಯರು ನಗರದ ನುರಿತ ಉದ್ಯೋಗಿಗಳಿಂದ ಲಾಭ ಪಡೆಯಲಿದ್ದಾರೆ.
ಹೊಸ ಸುದ್ದಿ
Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’
Jio Cloud PC : ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ.
ನವದೆಹಲಿ : ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ (Jio Cloud PC) ಹೆಸರಿನ ಈ ತಂತ್ರಜ್ಞಾನವು ಕೇವಲ ನೂರು ರೂಪಾಯಿಗಳಿಗೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಇದಕ್ಕೆ ಬೇಕಾಗಿರುವುದು ಇಂಟರ್ ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಷನ್. ಟಿವಿಗಳು ಸ್ಮಾರ್ಟ್ ಅಲ್ಲದಿದ್ದಲ್ಲಿ ಸಾಮಾನ್ಯ ಟಿವಿಗಳು ಸಹ ಜಿಯೋಫೈಬರ್ (JioFiber) ಅಥವಾ ಜಿಯೋಏರ್ ಫೈಬರ್ (JioAirFiber) ಜತೆಗೆ ಬರುವ ಸೆಟ್-ಟಾಪ್ ಬಾಕ್ಸ್ ಮೂಲಕ ಕಂಪ್ಯೂಟರ್ ಆಗಬಹುದು.
ಜಿಯೋ ಕ್ಲೌಡ್ ಪಿಸಿ ಎಂಬುದು ತಂತ್ರಜ್ಞಾನವಾಗಿದ್ದು, ಯಾವುದೇ ಟಿವಿಯು ಇಂಟರ್ ನೆಟ್ ಮೂಲಕ ಕ್ಲೌಡ್ ಕಂಪ್ಯೂಟಿಂಗ್‌ಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಬಳಸುವುದಕ್ಕೆ ಸಹ ಸುಲಭ. ಆದರೆ ಗ್ರಾಹಕರು ಅಪ್ಲಿಕೇಷನ್‌ಗೆ ಲಾಗಿನ್ ಮಾಡಬೇಕಾಗುತ್ತದೆ ಮತ್ತು ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲ ಡೇಟಾ ಟಿವಿಯಲ್ಲಿ ಕಾಣಿಸುತ್ತದೆ. ಇಮೇಲ್, ಸಂದೇಶ ಕಳುಹಿಸುವುದು, ಸಾಮಾಜಿಕ ನೆಟ್‌ವರ್ಕಿಂಗ್, ಇಂಟರ್ ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್ ಗಳು, ಕಚೇರಿ ಪ್ರಸೆಂಟೇಷನ್ ಮುಂತಾದ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಮನೆಯ ಟಿವಿಯಲ್ಲಿ ಮಾಡಬಹುದು. ಸರಳವಾಗಿ ಹೇಳುವುದಾದರೆ, ಎಲ್ಲ ಡೇಟಾವು ಕ್ಲೌಡ್‌ನಲ್ಲಿರುತ್ತದೆ ಮತ್ತು ಸರ್ವರ್, ಸ್ಟೋರೇಜ್, ಡೇಟಾಬೇಸ್, ನೆಟ್‌ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಅನಲಿಟಿಕ್ಸ್ ಥರದ ಸೇವೆಗಳನ್ನು ಟಿವಿ ಮೂಲಕ ಬಳಕೆ ಮಾಡಬಹುದು.
ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್‌ಗೆ ಸಂಪರ್ಕ ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನ ವರದಾನವಿದ್ದಂತೆ. ಏಕೆಂದರೆ ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಸುರಕ್ಷಿತ ಮಾತ್ರವಲ್ಲ, ಡೇಟಾ ಮರುಪಡೆಯುವಿಕೆ ಸಹ ಸಾಮಾನ್ಯ ಕಂಪ್ಯೂಟರ್ ಅನ್ನು ಬಳಸುವುದಕ್ಕಿಂತ ಸುಲಭವಾಗಿದೆ. ಟಿವಿ ಜೊತೆಗೆ ಮೊಬೈಲ್ ನಲ್ಲೂ ಬಳಸಬಹುದು. ಕಂಪನಿಯು ಈ ಅಪ್ಲಿಕೇಷನ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.
ಭಾರತದ ಡೇಟಾವು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಬೇಕು: ಆಕಾಶ್ ಅಂಬಾನಿ
ಭಾರತದ ಡೇಟಾವನ್ನು ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಿಸಬೇಕು ಎಂದು ರಿಲಯನ್ಸ್ ಜಿಯೋದ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಪ್ರತಿಪಾದನೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್- 2024ರಲ್ಲಿ ಭಾಗವಹಿಸಿದ್ದ ಅವರು ಈ ಅಭಿಪ್ರಾಯ ಪಟ್ಟರು. ಭಾರತದಲ್ಲಿ ಡೇಟಾ ಉತ್ಪಾದನೆ ಪ್ರಮಾಣ ಹಾಗೂ ವೇಗ ಎರಡೂ ತೀವ್ರವಾಗಿ ಹೆಚ್ಚಾಗಿದೆ. ಇನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನೊಂದಿಗೆ (ಕೃತಕ ಬುದ್ಧಿಮತ್ತೆ) ಇದು ಇನ್ನಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದ ದೇಶದಲ್ಲಿಯೇ ಎಐ ಹಾಗೂ ಮಶೀನ್ ಲರ್ನಿಂಗ್ ಡೇಟಾ ಸೆಂಟರ್ ಗಳನ್ನು ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಭಾರತೀಯ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ದತ್ತಾಂಶ ಕೇಂದ್ರ ನೀತಿ- 2020ರ ಕರಡನ್ನು ಶೀಘ್ರದಲ್ಲಿಯೇ ನವೀಕರಿಸಬೇಕು ಎಂದು ಅವರು ಸರ್ಕಾರನ್ನು ಮನವಿ ಮಾಡಿದರು.
ಆಕಾಶ್ ಅಂಬಾನಿ ಅವರು ಮಾತು ಮುಂದುವರಿಸಿ, “ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೃತಕ ಬುದ್ಧಿಮತ್ತೆ (AI) ಅತ್ಯಂತ ಮುಖ್ಯವಾಗಿದೆ. ಮತ್ತು ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪ್ರತಿ ಭಾರತೀಯರಿಗೂ ತಲುಪಿಸಲು ಜಿಯೋ ಪ್ರಯತ್ನಗಳನ್ನು ಆರಂಭಿಸಿದೆ. ನಾವು ಮೊಬೈಲ್ ಬ್ರಾಡ್‌ಬ್ಯಾಂಡ್‌ನೊಂದಿಗೆ ಮಾಡಿದಂತೆಯೇ ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತವಾದ ಎಐ ಮಾದರಿಗಳು ಮತ್ತು ಸೇವೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಇದಕ್ಕಾಗಿ, ನಾವು ರಾಷ್ಟ್ರೀಯ ಎಐ ಮೂಲಸೌಕರ್ಯದ ಆಧಾರ ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ಆಕಾಶ್ ಅಂಬಾನಿ, “ಇಂದು ಭಾರತೀಯ ಮೊಬೈಲ್ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯಿಂದಾಗಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಜಗತ್ತಿಗೆ ಎಐ ಸಲ್ಯೂಷನ್ ಗಳನ್ನು ಒದಗಿಸಬಹುದು. ಸರ್ಕಾರವು ಉದ್ಯಮ ಮತ್ತು ನಾವೀನ್ಯತೆಗೆ ಹೆಚ್ಚು ಪ್ರೋತ್ಸಾಹ- ಉತ್ತೇಜನ ನೀಡುವುದರಿಂದ ಭಾರತದಲ್ಲಿ ಅತಿದೊಡ್ಡ ಡಿಜಿಟಲ್ ಕ್ರಾಂತಿ ಸಂಭವಿಸಿದೆ. ನವ ಭಾರತದಲ್ಲಿ ಈಗ ವ್ಯಾಪಾರ ಸಂಪೂರ್ಣ ಬದಲಾಗಿದೆ. 145 ಕೋಟಿ ಭಾರತೀಯರ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸರ್ಕಾರ ಮತ್ತು ಉದ್ಯಮವು ಉತ್ತಮ ಬಾಂಧವ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.
ಭಾರತವು ಮೊಬೈಲ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುತ್ತದೆ. ಆದರೆ ನಾವು ಸಂಪರ್ಕಿತ (ಕನೆಕ್ಟೆಡ್), ಬುದ್ಧಿವಂತ (ಇಂಟೆಲಿಜೆಂಟ್) ಭವಿಷ್ಯಕ್ಕಾಗಿ ಎಐ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಅಳವಡಿಕೆ ಸಮಯದಲ್ಲಿ ಆದಂತೆಯೇ ಇದರಿಂದಲೂ ಉದ್ಯೋಗವೂ ಹೆಚ್ಚಾಗುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.
ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ 16,563 ಕೋಟಿ ರೂಪಾಯಿ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಸೋಮವಾರ (ಅಕ್ಟೋಬರ್ 14) ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಘೋಷಣೆ ಮಾಡಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭವು ಶೇಕಡಾ 9.4ರಷ್ಟು ಏರಿಕೆಯಾಗಿ 16,563 ಕೋಟಿ ರೂಪಾಯಿ ತಲುಪಿದೆ. ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಪ್ರಸಕ್ತ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕ ಗಳಿಸಿರುವ ಆದಾಯವು 2.35 ಲಕ್ಷ ಕೋಟಿಗಳಾಗಿದ್ದು, ಕಳೆದ ತ್ರೈಮಾಸಿಕದಲ್ಲಿ ಆದಾಯವು 2.36 ಲಕ್ಷ ಕೋಟಿ ರೂಪಾಯಿಗಳಿತ್ತು.
ಜಿಯೋ ಪ್ಲಾಟ್ ಫಾರ್ಮ್
ರಿಲಯನ್ಸ್ ಕಂಪನಿಯ ಡಿಜಿಟಲ್ ಸೇವೆ ವ್ಯವಹಾರದ ಅಂಗವಾದ ಜಿಯೋ ಪ್ಲಾಟ್ ಫಾರ್ಮ್ಸ್ ಜುಲೈನಿಂದ ಸೆಪ್ಟೆಂಬರ್ ಕೊನೆ ತನಕದ ತ್ರೈಮಾಸಿಕದಲ್ಲಿ ದಾಖಲೆಯ 6,536 ಕೋಟಿ ರೂಪಾಯಿ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 23.2ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಯೋ 5,058 ಕೋಟಿ ರೂಪಾಯಿ ವರದಿ ಮಾಡಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 14.5ರಷ್ಟು ಏಇಕೆ ಕಂಡು, 28,338 ಕೋಟಿ ರೂಪಾಯಿ ತಲುಪಿದೆ. “ಡಿಜಿಟಲ್ ಸೇವೆಯಲ್ಲಿನ ಬೆಳವಣಿಗೆಗೆ ಮುಖ್ಯ ಕಾರಣ ನೋಡುವುದಾದರೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯದಲ್ಲಿನ ಹೆಚ್ಚಳ ಹಾಗೂ ಗ್ರಾಹಕರು ತೊಡಗಿಕೊಳ್ಳುವ ಪ್ರಮಾಣದಲ್ಲಿನ ಸುಧಾರಣೆಯಿಂದ ನಮ್ಮ ಸೇವೆಗಳಲ್ಲಿ ಪ್ರಬಲವಾದ ಮೌಲ್ಯ ಸೇರ್ಪಡೆಯಾಗಿದೆ,” ಎಂದು ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.
ಜಿಯೋದ ತಿಂಗಳ ಎಆರ್ ಪಿಯು (ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯ) ವರ್ಷದಿಂದ ವರ್ಷಕ್ಕೆ ಶೇಕಡಾ 7.4ರಷ್ಟು ಏರಿಕೆಯಾಗಿ, 195.1 ರೂಪಾಯಿ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸರಾಸರಿ ಆದಾಯವು 181.70 ರೂಪಾಯಿ ಇತ್ತು. ಇನ್ನು ಮುಂದಿನ ಎರಡು- ಮೂರು ತ್ರೈಮಾಸಿಕದಲ್ಲಿ ದರ ಏರಿಕೆಯ ಪೂರ್ಣ ಪ್ರಮಾಣದ ಪ್ರಭಾವ ತಿಳಿಯಲಿದೆ ಎಂದು ಕಂಪನಿ ಹೇಳಿದೆ. 5ಜಿ ಸೇವೆಯ ವಿಚಾರದಲ್ಲಿ ಮಾರುಕಟ್ಟೆಯಲ್ಲಿ ಜಿಯೋ ನಾಯಕತ್ವದ ಸ್ಥಾನದಲ್ಲಿದೆ. ಒಟ್ಟಾರೆ ಜಿಯೋ 5ಜಿ ಬಳಕೆದಾರರ ಸಂಖ್ಯೆ 14.8 ಕೋಟಿ ತಲುಪಿದೆ. ರಿಲಯನ್ಸ್ ಜಿಯೋದ ಒಟ್ಟಾರೆ ವೈರ್ ಲೆಸ್ ಡೇಟಾ ದಟ್ಟಣೆಯ ಶೇಕಡಾ 34ರಷ್ಟು ಈ ಸೆಗ್ಮೆಂಟ್ ನಿಂದ ಬಂದಿದೆ. ಇನ್ನು ಸದ್ಯದಲ್ಲೆ ಜಿಯೋಕ್ಲೌಡ್ ಬೀಟಾ ಜಿಯೋದಿಂದ ಆರಂಭವಾಗಲಿದೆ.
“ಜಿಯೋದ ವ್ಯಾಪಕ ಶ್ರೇಣಿ ಕೊಡುಗೆಗಳು ಭಾರತದ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಲು, ಹಾಗೆಯೇ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಸಹ ಸಕ್ರಿಯಗೊಳಿಸುತ್ತದೆ. ಡಿಜಿಟಲ್ ಸೇವೆಗಳ ವ್ಯವಹಾರವು ರಾಷ್ಟ್ರೀಯ ಮಟ್ಟದಲ್ಲಿ ನವೀನ ಡೀಪ್-ಟೆಕ್ ಸಲ್ಯೂಷನ್ ಗಳ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಿದೆ ಮತ್ತು ಎಲ್ಲ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಯೋಜನಗಳನ್ನು ತಲುಪಿಸುವ ಹಾದಿಯಲ್ಲಿದೆ,” ಎಂದು ಮುಕೇಶ್ ಅಂಬಾನಿ ಹೇಳಿದರು.
ಜಿಯೋ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷ ಕಿರಣ್ ಥಾಮಸ್ ಮಾತನಾಡಿ, ಕಂಪನಿಯ ಗೃಹ ಬಳಕೆಯ ಬ್ರಾಡ್‌ಬ್ಯಾಂಡ್ ವಿಭಾಗವು ಗಮನಾರ್ಹ ಬೆಳವಣಿಗೆ ದರವನ್ನು ಕಂಡಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದರು. ಪ್ರತಿ ತಿಂಗಳು ತಮ್ಮ ಬ್ರಾಡ್‌ಬ್ಯಾಂಡ್ ಸೇವೆಗೆ 1 ಮಿಲಿಯನ್, ಅಂದರೆ ಹತ್ತು ಲಕ್ಷ ಹೊಸ ಮನೆಗಳನ್ನು ತಲುಪುವುದು ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ರೀಟೇಲ್ ವೆಂಚರ್ಸ್
ರಿಲಯನ್ಸ್ ರೀಟೇಲ್ ವೆಂಚರ್ಸ್ ತೆರಿಗೆ ನಂತರದ ಲಾಭವು 2,935 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಇದು ಶೇ 20ರಷ್ಟಕ್ಕೆ ಹತ್ತಿರವಾಗುತ್ತದೆ. ಈ ರೀಟೇಲ್ ಘಟಕದ ಕಾರ್ಯಾಚರಣೆ ಮೂಲಕದ ಆದಾಯವು 66,502 ಕೋಟಿ ರೂಪಾಯಿ ಬಂದಿದೆ. ಕಳೆದ ತ್ರೈಮಾಸಿಕದಲ್ಲಿ ಇದು 66,260 ಕೋಟಿ ರೂಪಾಯಿ ಬಂದಿತ್ತು. “ರೀಟೇಲ್ ಸೆಗ್ಮೆಂಟ್ ತನ್ನ ಗ್ರಾಹಕರ ನೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. ಆನ್ ಲೈನ್ ಅಥವಾ ಆಫ್ ಲೈನ್ ಹೀಗೆ ಎಲ್ಲ ಚಾನೆಲ್ ಗಳಲ್ಲೂ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಿ, ಅವರ ಅಗತ್ಯಗಳ ಎಲ್ಲ ಮಾದರಿ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ,” ಎಂದು ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೈಲ ಹಾಗೂ ಅನಿಲ
ರಿಲಯನ್ಸ್ ಇಂಡಸ್ಟ್ರೀಸ್ ತೈಲ ಹಾಗೂ ಅನಿಲ ವ್ಯವಹಾರದಲ್ಲಿ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇಕಡಾ 11ರಷ್ಟು ಹೆಚ್ಚಳವಾಗಿ 5290 ಕೋಟಿ ರೂಪಾಯಿ ಮುಟ್ಟಿದೆ. ಕಳೆದ ವರ್ಷ ಇಬಿಐಟಿಡಿಎ 4760 ಕೋಟಿ ರೂಪಾಯಿ ಇತ್ತು. ಇನ್ನೂ ಮುಖ್ಯ ಸಂಗತಿ ಏನೆಂದರೆ, ವರ್ಷದಿಂದ ವರ್ಷಕ್ಕೆ ಇಬಿಐಟಿಡಿಎ ಮಾರ್ಜಿನ್ ಶೇ 72ರಿಂದ ಶೇ 85ಕ್ಕೆ ತಲುಪಿದೆ.
ಕಂಪನಿಯ ನ್ಯೂ ಎನರ್ಜಿ ಗಿಗಾ-ಫ್ಯಾಕ್ಟರಿಗಳ ಪ್ರಗತಿಯ ಬಗ್ಗೆ ಮುಕೇಶ್ ಅಂಬಾನಿ ಗಮನ ಸೆಳೆದರು. “ನಮ್ಮ ಮೊದಲ ನ್ಯೂ ಎನರ್ಜಿ ಗಿಗಾ-ಕಾರ್ಖಾನೆಗಳು ಈ ವರ್ಷದ ಅಂತ್ಯದ ವೇಳೆಗೆ ಸೌರ ಪಿವಿ ಮಾಡ್ಯೂಲ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಹಾದಿಯಲ್ಲಿದೆ. ನವೀಕರಿಸಬಹುದಾದ ಸಮಗ್ರ ಶ್ರೇಣಿಯೊಂದಿಗೆ ಸೌರಶಕ್ತಿ, ಇಂಧನ ಶೇಖರಣಾ ವ್ಯವಸ್ಥೆಗಳು, ಹಸಿರು ಜಲಜನಕ, ಜೈವಿಕ ಶಕ್ತಿ ಮತ್ತು ಪವನ ಸೇರಿದಂತೆ ಸಲ್ಯೂಷನ್ ಗಳು, ನ್ಯೂ ಎನರ್ಜಿ ವ್ಯವಹಾರವು ಜಾಗತಿಕ ಸ್ವಚ್ಛ ಇಂಧನ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡಲು ಸಿದ್ಧವಾಗಿದೆ,” ಎಂದು ಅವರು ಹೇಳಿದರು.
ಇನ್ನು ಒಟ್ಟಾರೆ ಹಣಕಾಸು ಫಲಿತಾಂಶದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ನ ವೈವಿಧ್ಯಮಯವಾದ ವ್ಯವಹಾರಗಳ ಪೋರ್ಟ್ ಫೋಲಿಯೋಗೆ ಇರುವಂಥ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು.
ದೇಶ
Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್ ಸನ್ಮಾನವನ್ನೇ ಮಿಸ್ ಮಾಡಿದ್ದರು ರತನ್ ಟಾಟಾ!
Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್ ಸನ್ಮಾನವನ್ನೇ ರತನ್ ಟಾಟಾ ಮಿಸ್ ಮಾಡಿದ್ದರು. ಬೀದಿ ನಾಯಿಗಳ ಅವರ ಕಾಳಜಿಗೆ ಇಡೀ ಲಂಡನ್ ಜನತೆ ತಲೆಬಾಗಿತ್ತು.
ಭಾರತದ ಅತಿ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ (Ratan Tata) ಅವರ ಮಾನವೀಯ ಗುಣಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಮಾಡಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂ. ದಾನ ಮಾಡಿದ್ದು.. ಹೀಗೆ ನೂರಾರು ಉದಾಹರಣೆಗಳು ದೊರೆಯುತ್ತವೆ. ಅದಕ್ಕೆ ಇನ್ನೊಂದು ಪುರಾವೆಯು ಇಲ್ಲಿದೆ.
ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರು ಇಂಗ್ಲೆಂಡಿಗೆ ಆಮಂತ್ರಿಸಿದ್ದರು. ಅದು ರಾಯಲ್ ಮನೆತನದ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ರಾಜಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಅತಿ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣವನ್ನು ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡಿದ್ದರು.
ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ನಿಯುಕ್ತ ಆದವರು ಖ್ಯಾತ ಉದ್ಯಮಿಗಳು ಮತ್ತು ಅಂಕಣಕಾರರಾದ ಸುಹೇಲ್ ಸೇಥ ಅವರು. ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆಯನ್ನೂ ಮಾಡಿದ್ದರು.
ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭ ಆಯಿತು. ಸುಹೇಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು! ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಕಾಲ್ ಕನೆಕ್ಟ್ ಆಯಿತು. ಅಂದು ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು.
ಅವರು ಹೇಳುತ್ತಾ ಹೋದರು. “ಸುಹೇಲ್ ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂಥಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್‌ಗೆ ಬರಲು ಸಾಧ್ಯ ಇಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು” ಎಂದರು.
ಸುಹೇಲ್ ಅವರಿಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವರು “ರತನ್ ಜಿ. ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ. ಇಂಗ್ಲಿಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.
ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ನಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಅಂದು ಫೋನ್ ಇಟ್ಟರು. ಸುಹೇಲ್ ಅವರಿಗೆ ಈಗ ನಿಜವಾಗಿ ಉಭಯ ಸಂಕಟ ಆರಂಭ ಆಯಿತು. ಅವರು ಮರುದಿನವೇ ಮುಂಜಾನೆ ಬಕಿಂಗ್ ಹ್ಯಾಮ್ ಅರಮನೆಗೆ ಹೋದಾಗ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು.
ಅವರು ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಹೇಳಿದ್ದನ್ನು ಪ್ರೀತಿಯಿಂದ ಹೇಳಿದರು. ಅದೇ ಕಾರಣವನ್ನು ಕೂಡ ನಿವೇದನೆ ಮಾಡಿಕೊಂಡರು. ಒಮ್ಮೆ ಚಾರ್ಲ್ಸ್ ಹಣೆಯ ಮೇಲೆ ನೆರಿಗೆಗಳು ಕಂಡುಬಂದವು. ತಕ್ಷಣ ಅವರ ಮೊದಲ ಉದ್ಗಾರ – That’s the man!
“ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ” ಎಂದು ಚಾರ್ಲ್ಸ್ ಹೇಳಿದರು. ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮವು ಮುಂದೆ ನಡೆಯಲೇ ಇಲ್ಲ!
ಟಾಟಾ ಒಮ್ಮೆ ತಮ್ಮ ಎರಡು ನಾಯಿಗಳ ಬಗ್ಗೆ ಮಾಡಿದ ಟ್ವೀಟ್ ಹೀಗಿದೆ – Tito and Tango seek nothing in return for their affection other than a little love and attention. I miss them terribly when I am away!
ಯಾರೂ ಸುಖಾಸುಮ್ಮನೆ ದೊಡ್ಡವರು ಆಗುವುದಿಲ್ಲ! ಅವೆರಡೂ ರತನ್ ಟಾಟಾ ಸಾಕಿದ ಬೀದಿ ನಾಯಿಗಳು ಆಗಿದ್ದವು!
ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಪ್ರತಿ ಉದ್ಯೋಗಿಯನ್ನೂ ಅವರು ಅದೇ ಮಾನವೀಯ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ಅನೇಕರು ಹೇಳಿದ್ದಾರೆ. ಅಂದ ಹಾಗೆ ರತನ್ ಟಾಟಾ ಈವರೆಗೆ ಮದುವೆ ಆಗಿಲ್ಲ! ನಾನು ನಾಲ್ಕು ಬಾರಿ ಮದುವೆಯ ಹೊಸ್ತಿಲಿನ ತನಕ ಬಂದು ಭಯದಿಂದ ಹಿಂದೆ ಹೋಗಿದ್ದೆ ಎಂದವರು ತಮಾಷೆಗೆ ಹೇಳಿದ್ದಾರೆ!