Site icon Vistara News

Assam Flood: ಮಹಾ ಪ್ರವಾಹ ಬಲಿ ಸಂಖ್ಯೆ190ಕ್ಕೆ ಏರಿಕೆ, ನೆಲೆ ಕಳೆದುಕೊಂಡ 9 ಲಕ್ಷ ಜನ

assam rain update

ಗುವಾಹಟಿ: ಅಸ್ಸಾಂನಲ್ಲಿ ಭೀಕರ ಮಳೆಗೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ದಕ್ಷಿಣ ಅಸ್ಸಾಂನ ಬಹುತೇಕ ಭಾಗಗಳು ಜಲಸಮಾಧಿಯಾಗಿದ್ದು, ಮನೆ, ಮಠಗಳನ್ನು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ಮಳೆಯ ರುದ್ರ ನರ್ತನಕ್ಕೆ 11 ಜಿಲ್ಲೆಗಳು ಜರ್ಜರಿತವಾಗಿದ್ದು, 9 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನು ಈವರೆಗೂ ಮಳೆಯ ಆರ್ಭಟಕ್ಕೆ 190 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಪ್ರವಾಹದ ವರದಿಯ ಪ್ರಕಾರ, ಬಜಲೀ, ಚಚಾರ್ಮ ಚಿರಾಂಗ್, ದಿಬುರ್​ಗರ್, ಹೈಲಕಂದಿ, ಕಾಮ್​ರೂಪ್, ಕರಿಂಗಂಜ್, ಮೊರಿಗಾಂವ್, ನಾಗೋನ್, ಶಿವಸಾಗರ್ ಮತ್ತು ತಮುಲ್​ಪುರ ಜಿಲ್ಲೆಗಳಲ್ಲಿ ಪ್ರವಾಹದ ಹೊಡೆತ ಹೆಚ್ಚಾಗಿದ್ದು, ಈ ಜಿಲ್ಲೆಗಳಲ್ಲಿರುವ ಅನೇಕ ಗ್ರಾಮಗಳು ನಡುಗಡ್ಡೆಯಾಗಿದ್ದು, ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ.

ಕಳೆದ 24 ಗಂಟೆಯಲ್ಲಿ ಒಂದು ಮಗು ಸೇರಿದಂತೆ ಮೂವರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಇಬ್ಬರು ಚಚಾರ್ ಮತ್ತು ನಾಗೊನ್​ ಜಿಲ್ಲೆಯವರಾಗಿದ್ದು, ಮತ್ತೊಬ್ಬ ಹೈಲಕಂದಿ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರ್ಷ ಅಸ್ಸಾಂ ಮಹಾ ಪ್ರವಾಹ, ಭೂಕುಸಿತಕ್ಕೆ 190 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ| Assam Floods: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ, ಆಸರೆ ಕಳೆದುಕೊಂಡ ಜನರ ಸಂಕಟ, ಪರದಾಟ

ಇಷ್ಟು ಮಾತ್ರವಲ್ಲದೆ 620ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹದ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದೆ. ಮತ್ತು 14,402 ಹೆಕ್ಟೇರ್​ ಕೃಷಿ ಭೂಮಿಯು ನಾಶವಾಗಿದ್ದು, ಜನರು ಜನರು ಮನೆ ಮಠಗಳ ಜೊತೆಗೆ ಫಲ ಬಂದಿದ್ದ ಬೆಳೆಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. 10 ಜಿಲ್ಲೆಗಳಲ್ಲಿ 173 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ 75,185 ಜನರು ಆಶ್ರಯ ಪಡೆಯುತ್ತಿದ್ದಾರೆ ಎಂದು ಎಎಸ್​ಡಿಎಂಎ ವರದಿ ತಿಳಿಸಿದೆ.  

ಕೇವಲ ಅಸ್ಸಾಂ ಪ್ರವಾಹ ಮನುಷ್ಯರಿಗೆ ಮಾತ್ರ ಸಮಸ್ಯೆ ಮಾಡಿಲ್ಲ, ಪ್ರಾಣಿಗಳು ಸಹ ಈ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ಈವರೆಗೂ 1,42,173 ಸಾಕು ಪ್ರಾಣಿ, ಪಕ್ಷಿಗಳು ಪ್ರವಾಹ ಹೊಡೆತಕ್ಕೆ ಸಾವನ್ನಪ್ಪಿದ್ದು, ಜನರಲ್ಲದೆ, ಸಾಕು ಪ್ರಾಣಿ ಪಕ್ಷಿಗಳು ಕೂಡ ತಮ್ಮವರನ್ನು, ತಮ್ಮ ಜೀವವನ್ನು ಉಳಿಸಿಕೊಳ್ಳಲು ಒದ್ದಾಡಿವೆ. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಪಡೆದಿದ್ದಾರೆ. ಆದರೆ, ಈ ಮಹಾಮಳೆಗೆ ಜನರು ಹೈರಾಣಾಗಿದ್ದು, ಈವರೆಗೂ ಸರ್ಕಾರದ ವತಿಯಿಂದ ಸೂಕ್ತ ಸವಲತ್ತು ಸಿಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಹ ಪೀಡಿತ ಸ್ಥಳಗಳಲ್ಲಿ ಎನ್​ಡಿಆರ್​ಎಫ್​ ತಂಡ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳಿಸಲಾಗುತ್ತಿದೆ. ಜೊತೆಗೆ ಕೆಲವೊಂದು ಸ್ವಯಂ ಸೇವಾ ಸಂಘಟನೆಗಳು ಕೂಡ ಅಸ್ಸಾಂನ ಜನರ ನೆರವಿಗೆ ನಿಂತಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತಿದೆ. ಮುಂಗಾರು ಆರಂಭವಾದ್ದರಿಂದ ಇನ್ನು ಕೆಲ ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಸಾಧ್ಯತೆ ಇದ್ದು, ಅಸ್ಸಾಂ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಅಸ್ಸಾಂ ಮೊದಲಿನಂತೆ ಆಗಲಿ ಅಂತ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.

ಇದನ್ನು ಓದಿ| Video: ಅಸ್ಸಾಂ ಸಿಎಂಗೆ ಟವೆಲ್ ಕೊಡಲು ಪ್ರವಾಹಕ್ಕೆ ಇಳಿದ ಯುವಕ; ಅಪಾಯ ಎಂದರೂ ಕೇಳಲಿಲ್ಲ

Exit mobile version