ಗುವಾಹಟಿ : ಭೀಕರ ಮಳೆಗೆ ಅಸ್ಸಾಂ ಅಕ್ಷರಶಃ ಜಲ ಸಮಾಧಿಯಾದ ಸ್ಥಿತಿ ಅನುಭವಿಸುತ್ತಿದೆ. 35ಕ್ಕೂ ಹೆಚ್ಚು ಜಿಲ್ಲೆಗಳು ನಡುಗಡ್ಡೆಗಳಾಗಿವೆ. ಸತತ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂಕುಸಿತ, ಪ್ರವಾಹದಿಂದಾಗಿ ಈವರೆಗೂ 108 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಚಾರ್, ಬರ್ಪೇಟಾ, ಬಜಾಲಿ, ಧುಬ್ರಿ ಮತ್ತು ತಮುಲ್ ಪುರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಎನ್ಡಿಆರ್ಎಫ್ ತಂಡ ಪ್ರವಾಹಕ್ಕೆ ಸಿಲುಕಿರುವ ಜನರನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಐದು ಜಿಲ್ಲೆಗಳಲ್ಲಿ ಹೆಚ್ಚಾಗಿ ಸಾವು ನೋವು ಸಂಭವಿಸಿದ್ದು, ಇಡೀ ಜಿಲ್ಲೆ ನಡುಗಡ್ಡೆಯಾಗಿ ಬದಲಾಗಿದೆ.
ರಾಜ್ಯದಲ್ಲಿ ಒಟ್ಟಾರೆ 45,34,048 ವಸತಿ ಪ್ರದೇಶಗಳು ನಾಶವಾಗಿದ್ದು, 54 ಲಕ್ಷಕ್ಕೂ ಅಧಿಕ ಮಂದಿ ಮನೆ, ಮಠಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನು ಬರ್ಪೇಟಾ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, 1,00,869,76 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.
ಇದನ್ನು ಓದಿ | Assam rain: ರಣಭೀಕರ ಮಳೆಗೆ ಅಸ್ಸಾಂ ಅತಂತ್ರ, ಸಾವಿನ ಸಂಖ್ಯೆ 100ಕ್ಕೇರಿಕೆ, ಲಕ್ಷಾಂತರ ಜನರು ಬೀದಿಪಾಲು
ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಉಕ್ಕಿ ಹರಿಯುತ್ತಿದ್ದು, ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಪ್ರವಾಹದಿಂದ ನಲುಗಿರುವ 8 ಜಿಲ್ಲೆಗಳಲ್ಲಿ 592 ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೆ ನಿರಾಶ್ರಿತರಿಗೆ ನರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಮಾತ್ರ ಭೀಕರ ಮಳೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇಡೀ ಅಸ್ಸಾಂ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ.
ಅಸ್ಸಾಂನಲ್ಲಿ ಜೂನ್ 21 ರವರೆಗೆ 930 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಇನ್ನು ಕೆಲ ದಿನ ಹೀಗೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ.