Site icon Vistara News

Assam rain: ರಣಭೀಕರ ಮಳೆಗೆ ಅಸ್ಸಾಂ ಅತಂತ್ರ, ಸಾವಿನ ಸಂಖ್ಯೆ 100ಕ್ಕೇರಿಕೆ, ಲಕ್ಷಾಂತರ ಜನರು ಬೀದಿಪಾಲು

flood assam

ಗುವಾಹಟಿ: ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಅಪಾರ ಸಾವು ನೋವು ಸಂಭವಿಸುತ್ತಿದೆ (Assam rain). ಅಸ್ಸಾಂನ ಹಲವು ಭಾಗಗಳು ವಸ್ತುಶಃ ನಡುಗಡ್ಡೆಯಾಗಿವೆ. ೩೨ ಜಿಲ್ಲೆಗಳಲ್ಲಿ ನಲುಗಿಸಿರುವ ಈ ಭೀಕರ ಪ್ರಾಕೃತಿಕ ವೈಪರೀತ್ಯದಿಂದಾಗಿ ೧೦೦ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಮನೆ, ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಮಹಾರಾಷ್ಟ್ರ ರಾಜಕಾರಣದಲ್ಲೂ ಅಸ್ಸಾಂ ಪ್ರಧಾನ ಪಾತ್ರ ವಹಿಸಿದೆ. ಮಹಾ ವಿಕಾಸ ಅಘಾಡಿ ಸರಕಾರದ ಭಾಗವಾಗಿರುವ ಶಿವಸೇನೆಯಲ್ಲಿ ಭಿನ್ನಮತ ಉಂಟಾಗಿದ್ದು, ಶಾಸಕರ ಒಂದು ದೊಡ್ಡ ಗುಂಪು ಏಕನಾಥ್‌ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಬೀಡುಬಿಟ್ಟಿದೆ. ಈ ವಿಚಾರ ರಾಷ್ಟ್ರಾದ್ಯಂತ ಸುದ್ದಿಯಾಗಿದೆ. ಆದರೆ, ಇಡೀ ರಾಜ್ಯವೇ ನೀರಿನಲ್ಲಿ ಮುಳುಗಿರುವ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಜನರು ತಮ್ಮ ಹತಾಶೆಯನ್ನು ತೋಡಿಕೊಂಡಿದ್ದಾರೆ.

ಅಸ್ಸಾಂ ಜನರು ಮಹಾ ಪ್ರವಾಹಕ್ಕೆ ಹೈರಾಣಾಗಿದ್ದು, ಮನೆ ಮಠ, ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ನಾಗೋನ್​, ಸಿಲ್​ಚಾರ್​ ಮತ್ತು ಚಿರಾಂಗ್​ ನಗರ ಅಕ್ಷರಶಃ ಮುಳುಗಿ ಹೋಗಿದ್ದು, ಜನರು ತಮ್ಮ ಜೀವಗಳನ್ನ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ.

ಸದ್ಯ ಮಹಾಪ್ರವಾಹದಿಂದ ಈವರೆಗೂ 89 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ಕೂಡ ನಾಲ್ಕು ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಪ್ರವಾಹದಿಂದ 54.7 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ 845 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಮತ್ತು 1025 ಆಹಾರವನ್ನು ನೀಡುವ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 2.71 ಲಕ್ಷ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ | Flood effects | ಭೀಕರ ಮಳೆಗೆ ನಲುಗಿದ ಅಸ್ಸಾಂ, ಮೇಘಾಲಯ: ಪ್ರವಾಹಕ್ಕೆ ಸಿಲುಕಿ 31 ಮಂದಿ ಸಾವು

ಭೀಕರ ಮಳೆಯಿಂದಾಗಿ ಕೊಪಿಲಿ, ದಿಸಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ರಭಸವಾಗಿ ಹರಿಯುತ್ತಿದ್ದು, ಈ ವರ್ಷದಲ್ಲೇ ಸುಮಾರು 99,026 ಹೆಕ್ಟೇರ್ ಕೃಷಿ ಭೂಮಿಯನ್ನು ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ನದಿಗಳ ಸುತ್ತಮುತ್ತ ಇರುವ ಗ್ರಾಮಗಳು ಕೂಡ ಮುಳುಗಡೆಯಾಗಿದ್ದು, ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ನಗರದ ರಸ್ತೆಗಳಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಅಲ್ಲಿನ  ನಿವಾಸಿಗಳನ್ನು ಎನ್​ಡಿಆರ್​ಎಫ್​ ತಂಡ ಹಗ್ಗದ ಸಹಾಯದ ಮೂಲಕ ರಸ್ತೆ ದಾಟಿಸಿ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಮುಳುಗಡೆಯಾಗಿರುವ ಮನೆಗಳ ಮೇಲೆ ಜನರಿದ್ದು. ಇತ್ತ ಕೆಳಗೆ ಇಳಿಯಲು ಅಗದೇ ಮೇಲೆ ಇರಲು ಆಗದ ಸ್ಥಿತಿಯಲ್ಲಿದ್ದಾರೆ. ವಿದ್ಯುತ್​ ಇಲ್ಲ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಡೀ ಅಸ್ಸಾಂ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ.

ಎಲ್ಲಿ ನೋಡಿದರೂ ನೀರು ಕತ್ತಿನವರೆಗೂ ನೀರು ಬಂದರೂ ಅದೇ ನೀರಿನಲ್ಲೇ ಜನರ ಓಡಾಟ, ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ವಾಹನಗಳನ್ನ ಹರಸಾಹಸ ಪಟ್ಟು ತೆಗೆದುಕೊಂಡು ಹೋಗುತ್ತಿರುವ ದೃಶ್ಯ. ಅಸ್ಸಾಂ ರಾಜ್ಯದ ಅರ್ಧದಷ್ಟು ಪ್ರದೇಶ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿದ್ದು, ಜನರು ಊಟ, ನಿದ್ದೆಯಿಲ್ಲದೆ ಸರಿಯಾದ ಮೂಲಭೂತ ವ್ಯವಸ್ಥೆಯಿಲ್ಲದೆ ನಲುಗಿ ಹೋಗಿದ್ದಾರೆ. ಸರ್ಕಾರ ಕೇವಲ ಅಲ್ಲಲ್ಲಿ ಮಾತ್ರ ನಿರಾಶ್ರಿತ ಕೇಂದ್ರಗಳನ್ನು ತೆರೆದಿದೆ. ಆದರೆ, ಯಾರಿಗೂ ಸಮಪರ್ಕವಾದ ಆಹಾರ ಸಿಗುತ್ತಿಲ್ಲ. ಅಸ್ಸಾಂ ಜನತೆಯ ಸ್ಥಿತಿ ಅತಂತ್ರವಾಗಿದ್ದು, ಪ್ರವಾಹದಿಂದ ರೋಸಿ ಹೋಗಿದ್ದಾರೆ.

ಇದನ್ನು ಓದಿ| Maharashtra Politics: ಏಕ್‌ನಾಥ್‌ ಶಿಂಧೆಗೆ ಮತ್ತಷ್ಟು ಬಲ; ಅಸ್ಸಾಂಗೆ ತೆರಳಿದ ಇನ್ನೂ ಮೂವರು ಶಾಸಕರು

ಅಸ್ಸಾಂನ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಕೇವಲ ನಾಮಕವಸ್ಥೆಗೆ ಸಮಿಕ್ಷೆ ನಡೆಸಲಾಗಿದ್ದು, ಜನರು ಈಗಲೂ ಮಹಾಮಳೆಗೆ ಹೈರಾಣಾಗಿದ್ದಾರೆ. ಬಿಜೆಪಿ ಸರ್ಕಾರ ಮಹಾರಾಷ್ಟ್ರ ಪತನಕ್ಕಾಗಿ ಕಾದು ಕುಳಿತಿದ್ದು, ಅದಕ್ಕಾಗಿ ಎಂಎಲ್​ಎಗಳನ್ನು ಅಸ್ಸಾಂಗೆ ಕರೆತಂದು 5 ಸ್ಟಾರ್​ ಹೋಟೆಲ್​ನಲ್ಲಿ ಇರಿಸಿ ಉಪಚಾರ ಮಾಡುತ್ತಿದೆ. ಆದರೆ, ತಮ್ಮದೆ ರಾಜ್ಯದ ಪ್ರಜೆಗಳು ಪ್ರವಾಹದಿಂದ ನರಳಾಡುತ್ತಿದ್ದರು, ಸರ್ಕಾರ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಅಸ್ಸಾಂ ಜನತೆ ಆಕ್ರೋಶ ವ್ಯಕ್ತ ಪಡಿಸಿದೆ.  

Exit mobile version