ಹೊಸದಿಲ್ಲಿ: ಇತ್ತೀಚೆಗೆ ತಾನು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮೂರು ರಾಜ್ಯಗಳಲ್ಲಿ (Assembly Election 2023) ಮುಖ್ಯಮಂತ್ರಿಗಳನ್ನು (Chief minister) ಆಯ್ಕೆ ಮಾಡಲು ಬಿಜೆಪಿ ನಾಯಕತ್ವವು (BJP High command) ಮ್ಯಾರಥಾನ್ ಸಭೆಗಳನ್ನು ನಡೆಸುತ್ತಿದೆ. ಮೂರೂ ರಾಜ್ಯಗಳಲ್ಲೂ ಹೊಸ ಮುಖಗಳನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯು ಅಮೋಘ ಚುನಾವಣಾ ಗೆಲುವು ದಾಖಲಿಸಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಮುಖಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗುತ್ತಿದೆ. ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸಾಧ್ಯತೆಗಳ ಕುರಿತು ಪಕ್ಷದ ಕೇಂದ್ರ ನಾಯಕತ್ವ ಚರ್ಚೆ ನಡೆಸುತ್ತಿದೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿವಾಸದಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಸಭೆ ನಡೆಸಲಾಗಿದ್ದು, ಈ ವೇಳೆ ಮೂರು ರಾಜ್ಯಗಳ ಮುಂಚೂಣಿಯಲ್ಲಿರುವವರನ್ನು ಪರಿಗಣಿಸಲಾಗಿದೆ. ಸಭೆಯಲ್ಲಿ ಪ್ರಧಾನಿ, ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ (JP Nadda) ಉಪಸ್ಥಿತರಿದ್ದರು. ಈ ಮ್ಯಾರಥಾನ್ ಸಭೆಯಲ್ಲಿ ಈ ರಾಜ್ಯಗಳ ಬಿಜೆಪಿಯ ಉಸ್ತುವಾರಿಗಳೊಂದಿಗೆ ರಾಜ್ಯ ನಾಯಕರ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಸಭೆ ನಡೆಸಲು ನಿರ್ಧರಿಸಲಾಗಿದೆ.
ಬಿಜೆಪಿಯ ಕೇಂದ್ರ ನಾಯಕತ್ವವು ಮೂರು ರಾಜ್ಯಗಳಿಗೆ ವೀಕ್ಷಕರನ್ನು ಶೀಘ್ರದಲ್ಲೇ ನೇಮಿಸುವ ಸಾಧ್ಯತೆಯಿದೆ. ಮೂರು ರಾಜ್ಯಗಳಲ್ಲಿ ಹೊಸದಾಗಿ ಚುನಾಯಿತ ಶಾಸಕರು ವಿಧಾನಸಭೆಯಲ್ಲಿ ತಮ್ಮ ನಾಯಕರನ್ನು ಆಯ್ಕೆ ಮಾಡಲು ನಡೆಸುವ ಸಭೆಗಳನ್ನು ಈ ವೀಕ್ಷಕರು ಮೇಲ್ವಿಚಾರಣೆ ಮಾಡುತ್ತಾರೆ.
ಮಧ್ಯಪ್ರದೇಶದಲ್ಲಿ, ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್, ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ತೋಮರ್ ಮತ್ತು ಹಿರಿಯ ರಾಜ್ಯ ನಾಯಕ ಕೈಲಾಶ್ ವಿಜಯವರ್ಗಿಯಾ ಅವರೊಂದಿಗೆ ಉನ್ನತ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ.
ರಾಜಸ್ಥಾನದ ಉನ್ನತ ಹುದ್ದೆಗೂ ಹಲವಾರು ಹೆಸರುಗಳು ಸುತ್ತು ಹಾಕುತ್ತಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಶಾಸಕರಾಗಿ ಆಯ್ಕೆಯಾಗಿದ್ದರೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್, ಪಕ್ಷದ ರಾಜ್ಯಾಧ್ಯಕ್ಷ ಸಿಪಿ ಜೋಶಿ, ಪ್ರಮುಖ ನಾಯಕರಾದ ದಿಯಾ ಕುಮಾರಿ ಮತ್ತು ಮಹಂತ ಬಾಲಕನಾಥ್ ಅವರನ್ನು ಸಂಭಾವ್ಯ ಎಂದು ಪರಿಗಣಿಸಲಾಗಿದೆ.
ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಸ್ಪರ್ಧಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ ಸಾವೊ, ವಿರೋಧ ಪಕ್ಷದ ನಾಯಕ ಧರ್ಮಲಾಲ್ ಕೌಶಿಕ್ ಮತ್ತು ಮಾಜಿ ಐಎಎಸ್ ಅಧಿಕಾರಿ ಓ.ಪಿ ಚೌಧರಿ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಬಿಜೆಪಿ ನಾಯಕತ್ವ ಅಚ್ಚರಿದಾಯಕ ಆಯ್ಕೆಗಳಿಗೆ ಹೆಸರಾಗಿದೆ. ಹೀಗಾಗಿ ಈ ಪಟ್ಟಿಗಳಲ್ಲಿ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಶಾಕ್ ನೀಡಲೂ ಸಾಧ್ಯತೆಗಳಿವೆ.
ಇದನ್ನೂ ಓದಿ: Assembly election 2023: ಐದು ರಾಜ್ಯಗಳ ಎಲೆಕ್ಷನ್‌ನಲ್ಲಿ ಶೇ.18ರಷ್ಟು ಅಭ್ಯರ್ಥಿಗಳು ಕ್ರಿಮಿನಲ್!