Site icon Vistara News

Assembly Election 2023: ರೈತರಿಗೆ ಹಣ ವಿತರಣೆ ನಿಲ್ಲಿಸಲು ತೆಲಂಗಾಣ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

cm k chandrashekar rao

ಹೈದರಾಬಾದ್:‌ ರೈತ ಬಂಧು ಯೋಜನೆಯಡಿ (Rythu Bandhu Scheme) ರೈತರಿಗೆ ರಬಿ ಬೆಳೆಗಳಿಗೆ ಆರ್ಥಿಕ ಸಹಾಯವನ್ನು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ (Election Commission) ಸೋಮವಾರ ಹಿಂಪಡೆದಿದೆ.

ಇದರೊಂದಿಗೆ ಕೆ. ಚಂದ್ರಶೇಖರ ರಾವ್ (K. Chandrashekar Rao) ಅವರ ಭಾರತ್ ರಾಷ್ಟ್ರ ಸಮಿತಿಗೆ ಹಿನ್ನಡೆಯಾಗಿದೆ. ರಾಜ್ಯ ಸಚಿವರು ಚುನಾವಣಾ (Assembly Election 2023) ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವ ಕಾರಣದಿಂದ ಹೀಗೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ. “ತೆಲಂಗಾಣ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಪೂರ್ಣವಾಗಿ ಕೊನೆಯಾಗುವವರೆಗೆ ಯೋಜನೆಯ ಅಡಿಯಲ್ಲಿ ಯಾವುದೇ ವಿತರಣೆ ಇರುವುದಿಲ್ಲ” ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಸಮಿತಿಯು ಕೆಸಿಆರ್ ನೇತೃತ್ವದ ತೆಲಂಗಾಣ ಸರ್ಕಾರಕ್ಕೆ ಕೆಲವು ನಿಬಂಧನೆಗಳ ಮೇಲೆ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ರಬಿ ಕಂತನ್ನು ವಿತರಿಸಲು ಒಪ್ಪಿಗೆ ನೀಡಿತ್ತು. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. ರಾಜ್ಯ ಸರ್ಕಾರವು ರೈತ ಬಂಧು ಯೋಜನೆಯಡಿ ಮೊತ್ತವನ್ನು ನವೆಂಬರ್ 28ರ ಮೊದಲು ವಿತರಿಸಲು ನವೆಂಬರ್ 24ರಂದು ಇಸಿ ಹಸಿರು ನಿಶಾನೆ ತೋರಿತ್ತು.

ಇಸಿಐ ತನ್ನ ಅನುಮತಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ತಿಳಿಸಿದೆ. ರಾಜ್ಯ ಹಣಕಾಸು ಸಚಿವರು ರಬಿ ಕಂತುಗಳ ವಿತರಣೆಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡಿದ್ದರು. “ಸೋಮವಾರದಂದು ವಿತರಣೆ ಮಾಡಲಾಗುವುದು. ರೈತರು ತಮ್ಮ ಬೆಳಗಿನ ಉಪಹಾರ ಪೂರೈಸುವ ಮುನ್ನವೇ ಅವರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು” ಎಂದಿದ್ದರು.

ಭಾನುವಾರ, ತನ್ನ ಚುನಾವಣಾ ಪ್ರಚಾರದಲ್ಲಿ ರೈತ ಬಂಧು ಮೊತ್ತದ ವಿತರಣೆಯನ್ನು ಉಲ್ಲೇಖಿಸದಂತೆ ಬಿಆರ್‌ಎಸ್ ಮೇಲೆ ನಿರ್ಬಂಧಗಳನ್ನು ವಿಧಿಸುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ ಮನವಿ ಮಾಡಿತ್ತು. ಸಿಇಸಿ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ಬಿಆರ್‌ಎಸ್ ನಾಯಕರು ಮತದಾರರ ಮೇಲೆ ಪ್ರಭಾವ ಬೀರುವ ಸಾಧನವಾಗಿ ರೈತಬಂಧು ಹಣವನ್ನು ತಮ್ಮ ಜೇಬಿನಿಂದ ನೀಡುತ್ತಿರುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ರೈತ ಬಂಧು ಯೋಜನೆ ಎಂದರೇನು?

ರೈತ ಬಂಧು ಯೋಜನೆಯನ್ನು ರೈತರ ಹೂಡಿಕೆ ಬೆಂಬಲ ಯೋಜನೆ (FISS) ಎಂದೂ ಕರೆಯಲಾಗುತ್ತದೆ. ಇದು 2018ರಲ್ಲಿ ತೆಲಂಗಾಣ ಸರ್ಕಾರ ತಂದ ರೈತರ ಕಲ್ಯಾಣ ಕಾರ್ಯಕ್ರಮ. ಯೋಜನೆಯಡಿ, ರಾಜ್ಯ ಸರ್ಕಾರವು ತೆಲಂಗಾಣದ 58 ಲಕ್ಷ ರೈತರಿಗೆ ಎರಡು ಬೆಳೆಗಳಿಗೆ ಕೃಷಿ ಬಂಡವಾಳವಾಗಿ ಅವರ ಪ್ರತಿ ಎಕರೆ ಭೂಮಿಗೆ ₹5,000 ಅನ್ನು ಒದಗಿಸುತ್ತದೆ. ಈ ಹೂಡಿಕೆಯನ್ನು ವರ್ಷಕ್ಕೆ ಎರಡು ಬಾರಿ, ಒಮ್ಮೆ ಖಾರಿಫ್ ಕೊಯ್ಲಿಗೆ ಮತ್ತು ಒಮ್ಮೆ ರಬಿ ಕೊಯ್ಲಿಗೆ ಮಾಡಲಾಗುತ್ತದೆ. ರೈತ ಬಂಧು ಯೋಜನೆಯು ದೇಶದ ಮೊದಲ ನೇರ ರೈತ ಹೂಡಿಕೆ ಬೆಂಬಲ ಯೋಜನೆಯಾಗಿದ್ದು, ಫಲಾನುಭವಿಗೆ ನೇರವಾಗಿ ಹಣವನ್ನು ಪಾವತಿಸಲಾಗುತ್ತದೆ. ಈ ಯೋಜನೆಗೆ ರಾಜ್ಯ ಬಜೆಟ್‌ನಿಂದ ₹12,000 ಕೋಟಿಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Karnataka Election 2023 : ಜೆಡಿಎಸ್‌ ಪರ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ, ಚಂದ್ರಶೇಖರ ರಾವ್‌ ಏಕೆ ಬರಲಿಲ್ಲ?

Exit mobile version