ಹೊಸದಿಲ್ಲಿ: ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರಸಕ್ತ ಸುತ್ತಿನ ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳಲ್ಲಿ ಮಹಿಳೆಯರ ಪ್ರಮಾಣ 12%ಕ್ಕಿಂತಲೂ ಕಡಿಮೆಯಾಗಿದೆ.
ಇದು ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ವಿಧೇಯಕದಲ್ಲಿ (women’s reservation bill ) ಸೂಚಿಸಲಾದ 33%ರ ಮಹತ್ವಾಕಾಂಕ್ಷೆಯ ಗುರಿಗಿಂತ ತುಂಬಾ ಕಡಿಮೆ. ನೂತನ ವಿಧೇಯಕ ಮುಂದಿನ ಜನಗಣತಿ ಮತ್ತು ಡಿಲಿಮಿಟೇಶನ್ ನಂತರವೇ ಜಾರಿಗೆ ಬರಲಿದೆ.
ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನ 679 ಸ್ಥಾನಗಳ ಪೈಕಿ ಬಿಜೆಪಿ 643 ಮತ್ತು ಕಾಂಗ್ರೆಸ್ 666 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಬಿಜೆಪಿ ಕೇವಲ 80 ಮಹಿಳಾ ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ 74 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ನವೆಂಬರ್ 17ರಂದು ನಡೆಯಲಿರುವ ಚುನಾವಣೆಗಳಲ್ಲಿ ಬಿಜೆಪಿ 28 ಮತ್ತು ಕಾಂಗ್ರೆಸ್ 30 ಮಹಿಳೆಯರನ್ನು ಕಣಕ್ಕಿಳಿಸಿದೆ. 2018ರಲ್ಲಿ ಈ ಸಂಖ್ಯೆಗಳು ಕ್ರಮವಾಗಿ 24 ಮತ್ತು 27 ಆಗಿತ್ತು. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 20 ಮತ್ತು 28 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 2018ರಲ್ಲಿ 23 ಮತ್ತು 27 ಮಹಿಳೆಯರಿದ್ದರು.
ಛತ್ತೀಸ್‌ಗಢದಲ್ಲಿ ಎರಡು ಹಂತದ ಚುನಾವಣೆಯಲ್ಲಿ (ನವೆಂಬರ್ 7 ಮತ್ತು 17) ಬಿಜೆಪಿ 14 ಮಹಿಳಾ ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ 3 ಮಹಿಳೆಯರನ್ನು ಕಣಕ್ಕಿಳಿಸಿವೆ. ಛತ್ತೀಸ್‌ಗಢ ವಿಧಾನಸಭೆಯು 90 ಸ್ಥಾನಗಳನ್ನು ಹೊಂದಿದೆ. ನವೆಂಬರ್ 30ರಂದು ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್ 11 ಮಹಿಳಾ ಅಭ್ಯರ್ಥಿಗಳನ್ನು ಘೋಷಿಸಿದೆ. 40 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದ ಮಿಜೋರಾಂನಲ್ಲಿ ಕಾಂಗ್ರೆಸ್ ಇಬ್ಬರು ಮತ್ತು ಬಿಜೆಪಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಬಹು ನಿರೀಕ್ಷಿತ ಮಸೂದೆಯಾದ ʼನಾರಿ ಶಕ್ತಿ ವಂದನ್ ಅಧಿನಿಯಮ್ʼ ಅನ್ನು ಸೆಪ್ಟೆಂಬರ್‌ನಲ್ಲಿ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸುವ ಕ್ರೆಡಿಟ್ ಪಡೆಯಲು ಬಿಜೆಪಿ ಪ್ರಯತ್ನಿಸಿದೆ. ಆದರೆ ಮಹಿಳೆಯರಿಗೆ ಟಿಕೆಟ್ ನೀಡುವಲ್ಲಿ ಮಾತ್ರ ಸಂಪ್ರದಾಯವಾದಿಯಾಗಿದೆ. ಯುಪಿಎ ಆಡಳಿತಾವಧಿಯಲ್ಲಿ ಮಸೂದೆಯನ್ನು ಅಂಗೀಕರಿಸಲು ಕೀರ್ತಿಯನ್ನು ಪಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಅದೂ ಕೂಡ ಬಿಜೆಪಿಯಂತೆಯೇ ಮಾಡಿದೆ.
ʼಗೆಲುವಿನ ಸಾಧ್ಯತೆʼಯ ಅಂಶವು ಇದಕ್ಕೆ ಕಾರಣ ಎಂದು ಉಭಯ ಪಕ್ಷಗಳ ಪದಾಧಿಕಾರಿಗಳು ಹೇಳಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಲು ಪಕ್ಷ ಬದ್ಧವಾಗಿದೆ. ಆದರೆ ಅದೇ ವೇಳೆಗೆ ನಾವು ಅಭ್ಯರ್ಥಿಯ ಗೆಲುವಿನ ಬಗ್ಗೆ ನೋಡುತ್ತೇವೆ. “ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ”ದ ಪಕ್ಷದ ಮೌಲ್ಯಮಾಪನಕ್ಕೆ ಅನುಗುಣವಾಗಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಮೊದಲಿನಂತೆಯೇ ಇರಿಸಲಾಗಿದೆ. ಅಭ್ಯರ್ಥಿಗಳನ್ನು ನಿರ್ಧರಿಸಲು ದೀರ್ಘಾವಧಿಯ ಪ್ರಕ್ರಿಯೆಯಿದೆ. ಇದರಲ್ಲಿ ಜಾತಿ, ಲಿಂಗ ಮತ್ತು ಅನುಭವದಂತಹ ಅಂಶಗಳು ಸೇರಿವೆʼʼ ಎಂದು ಬಿಜೆಪಿ ಹೇಳಿದೆ.
ಮಹಿಳೆಯರು ಬಿಜೆಪಿಗೆ ಪ್ರಮುಖ. ಅವರ ಬೆಂಬಲದಿಂದ ಪಕ್ಷವು ಯಶಸ್ಸು ಗಳಿಸಿದೆ. ಅವರಿಗಾಗಿ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ, ಅಧಿಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಲು 1.25 ಕೋಟಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹1,250 ನೀಡುವ ಲಾಡ್ಲಿ ಬೆಹ್ನಾ ಯೋಜನೆಯನ್ನು ಪಕ್ಷವು ನಡೆಸುತ್ತಿದೆ. ಆರ್ಥಿಕ ಸಬಲೀಕರಣದ ಜತೆಗೆ ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸಲು ಪಕ್ಷದ ಸ್ಥಾನಗಳಲ್ಲಿ ಮಹಿಳೆಯರಿಗೆ 33% ಮೀಸಲನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಅನೇಕ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಮಹಿಳಾ ನಾಯಕಿಯೊಬ್ಬರು, ಲಿಂಗ ಪಕ್ಷಪಾತದಿಂದಾಗಿ ಮಹಿಳೆಯರು ಟಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. “ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ, ಆದರೆ ಇಲ್ಲಿಯವರೆಗೆ ಅವರು ದಾಟಲು ಸಾಧ್ಯವಾಗದ ಒಂದು ನಿರ್ದಿಷ್ಟ ತಡೆ ಇದೆ. ದೇಶದ ಅನೇಕ ಭಾಗಗಳಲ್ಲಿ, ಮಹಿಳೆಯರು ಪ್ರಮುಖ ಪಾತ್ರಗಳನ್ನು ಪಡೆಯುವುದಕ್ಕೆ ಇನ್ನೂ ವಿರೋಧವಿದೆ” ಎಂದಿದ್ದಾರೆ. “ನಾನು ಮೊದಲ ಬಾರಿಗೆ ಸ್ಪರ್ಧಿಸಿದಾಗ, ನನ್ನ ಮತ್ತು ನನ್ನ ತಂಡದ ಪರವಾಗಿ ಪ್ರಚಾರ ಮಾಡುವ ಕಾರ್ಯಕರ್ತರ ನಡುವೆ ಆರಂಭದಲ್ಲಿ ಒತ್ತಡವಿತ್ತು. ಹಲವು ವರ್ಷಗಳಲ್ಲಿ ಇಂತಹ ಅಡೆತಡೆಗಳನ್ನು ನಿವಾರಿಸಿದ್ದೇವೆ. ಆದರೆ ಪಕ್ಷದ ಕಾರ್ಯಕರ್ತರು ಮಹಿಳಾ ಅಭ್ಯರ್ಥಿಗಳ ಪರ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಮತಗಳನ್ನು ಸೆಳೆಯಲು ಕಷ್ಟವಾಗುತ್ತದೆ” ಎನ್ನುತ್ತಾರೆ ಅವರು.
2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆಯ ಅನುಮೋದನೆಯನ್ನು ಪಡೆದ ಮೊದಲ ಪಕ್ಷ ತಮ್ಮದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. “ನಾವು ನಮ್ಮ ಕಾರ್ಯಕಾರಿ ಸಮಿತಿ, ಅತ್ಯುನ್ನತ ಕಾರ್ಯಕಾರಿ ಸಂಸ್ಥೆಗಳಲ್ಲಿ ಮಹಿಳಾ ಕೋಟಾವನ್ನು ಪರಿಚಯಿಸಿದ್ದೇವೆ. ಚುನಾವಣೆಯಲ್ಲೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನ ನೀಡುವುದನ್ನು ಮುಂದುವರಿಸಿದ್ದೇವೆ. ಈ ಅನುಪಾತವು ಖಂಡಿತವಾಗಿಯೂ ಸುಧಾರಿಸಲಿದೆ. ಆದರೆ ನಿರ್ಣಾಯಕ ಚುನಾವಣೆಗಳಿಗೆ ಬಂದಾಗ ನಾವು ಗೆಲ್ಲುವ ಅಂಶವನ್ನು ನೋಡುತ್ತೇವೆ” ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Assembly Elections 2023 | ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದ ರಾಜಕೀಯ ಸ್ಥಿತಿ ಹೇಗಿದೆ? ಯಾವ ಪಕ್ಷದ ಬಲ ಹೆಚ್ಚಿದೆ?