Site icon Vistara News

Assembly Election Result 2023: ರಾಜಸ್ಥಾನದಲ್ಲಿ ಇನ್ನೊಬ್ಬ ʼಯೋಗಿʼಯ ಉದಯ! ಇವರೇನಾ ಮುಖ್ಯಮಂತ್ರಿ?

baba balakanath

ಹೊಸದಿಲ್ಲಿ: ರಾಜಸ್ಥಾನದ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Result 2023) ಬಿಜೆಪಿ ಪರವಾಗಿ ಬಂದಿದೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಲ್ಲಿ ʼಯೋಗಿʼ ಇದ್ದಂತೆ, ರಾಜಸ್ಥಾನದಲ್ಲೂ ಒಬ್ಬ ʼಯೋಗಿʼ ಇದ್ದಾರೆ. ಈ ಸಲದ ಭರ್ಜರಿ ಫಲಿತಾಂಶ, ಬಿಜೆಪಿಯಲ್ಲಿ ಈ ಇನ್ನೊಬ್ಬ ಯೋಗಿಯನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಲಿದೆ ಎಂದು ಹೇಳಲಾಗುತ್ತಿದೆ.

ಹೌದು, ರಾಜಸ್ಥಾನದ ಗೆಲುವು ಬಿಜೆಪಿಯಲ್ಲಿ ಮತ್ತೊಬ್ಬ ʼಯೋಗಿ’ಯ ಉದಯಕ್ಕೆ ಕಾರಣವಾಗಲಿದೆ. ʼರಾಜಸ್ಥಾನದ ಯೋಗಿʼ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಧಾರ್ಮಿಕ ನಾಯಕ, ಅಲ್ವಾರ್ ಸಂಸದ ಬಾಬಾ ಬಾಲಕನಾಥ್ (Baba Balakanath) ಅವರು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಒಬ್ಬ ಸ್ಪರ್ಧಿಯಾಗಿದ್ದಾರೆ. ಬಾಲಕನಾಥ್, ತಿಜಾರಾ ಕ್ಷೇತ್ರದಿಂದ ಕಾಂಗ್ರೆಸ್‌ನ ಇಮ್ರಾನ್ ಖಾನ್ ವಿರುದ್ಧ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

“ನಮ್ಮ ಪ್ರಧಾನಿ ಬಿಜೆಪಿಯ ಮುಖ. ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆಯೂ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ. ಸಂಸದನಾಗಿ ನಾನು ಸಂತೋಷವಾಗಿದ್ದೇನೆ. ಸಮಾಜ ಸೇವೆ ಮಾಡಲು ಬಯಸುತ್ತೇನೆ. ಇದರಿಂದ ನನಗೆ ತೃಪ್ತಿ ಇದೆ” ಎಂದು ರಾಜಸ್ಥಾನದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರ ಕಳೆದುಕೊಂಡಿದ್ದು, ರಾಜ್ಯಕ್ಕೆ ಬಿಜೆಪಿ ಇನ್ನೂ ಮುಖ್ಯಮಂತ್ರಿ ಮುಖವನ್ನು ಬಿಂಬಿಸಿಲ್ಲ. ಬಾಲಕನಾಥ್ ಮುಖ್ಯಮಂತ್ರಿಯಾದರೆ, ಯೋಗಿ ಆದಿತ್ಯನಾಥ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸುವ ಮತ್ತೊಬ್ಬ ʼಯೋಗಿ’ ಆಗಲಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜಸ್ಥಾನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಾಲಕನಾಥ್ ಪರ ಪ್ರಚಾರ ಮಾಡಿದ್ದರು. ಬಾಬಾ ಬಾಲಕನಾಥ್ ಅವರ “ತಿಜಾರʼವನ್ನು ʼಸಿತಾರಾ” ಮಾಡುವ ಮತ್ತು ಅದರ ಭವಿಷ್ಯವನ್ನು ಉಜ್ವಲಗೊಳಿಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಯೋಗಿ ಆದಿತ್ಯನಾಥ್ ಅವರಂತೆ ನಾಥ ಪಂಥದವರಾಗಿರುವ ಬಾಲಕನಾಥ್‌, 40 ವರ್ಷ ವಯಸ್ಸಿನವರು. ಮತ ಎಣಿಕೆ ಪ್ರಾರಂಭವಾಗುವ ಮೊದಲು ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇದಕ್ಕೂ ಮೊದಲು, ಬಾಬಾ ಬಾಲಕನಾಥ್ ಅವರು ಇಮ್ರಾನ್ ಖಾನ್ ವಿರುದ್ಧದ ಸ್ಪರ್ಧೆಯನ್ನು “ಭಾರತ-ಪಾಕಿಸ್ತಾನ” ಪಂದ್ಯಕ್ಕೆ ಹೋಲಿಸಿದ್ದರು. “ಇದು ಈ ಬಾರಿಯ ಭಾರತ-ಪಾಕಿಸ್ತಾನ ಪಂದ್ಯದಂತಿದೆ. ಇದು ಕೇವಲ ಗೆಲುವಿಗಾಗಿನ ಹೋರಾಟವಲ್ಲ, ಇದು ಶೇಕಡಾವಾರು ಮತದಾನದ ಹೋರಾಟವಾಗಿದೆ” ಎಂದು ಹೇಳಿದ್ದು ವೈರಲ್ ಆಗಿದೆ.

ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನ ಗಡಿಯನ್ನು ದಾಟಿದೆ. ಅದರ ಅಭ್ಯರ್ಥಿಗಳು 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ 72ರಲ್ಲಿ ಮುಂದಿದೆ.

Exit mobile version