Site icon Vistara News

Assembly Elections 2023 : ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್‌ ಗ್ಯಾರಂಟಿ

PM Narendra Modi Modi ki guarantee

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮೂರೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ (BJP wins three states) ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈ ಪೈಕಿ ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ಬಿಜೆಪಿ ಕಾಂಗ್ರೆಸ್‌ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಮಾಡಿದ್ದ ಗ್ಯಾರಂಟಿ ಪ್ರಯೋಗವನ್ನು ಈ ರಾಜ್ಯಗಳಲ್ಲಿ ನಡೆಸುವ ಮೂಲಕ ದೊಡ್ಡ ಸದ್ದು ಮಾಡಿತ್ತು. ಆದರೆ, ಈ ಎಲ್ಲ ಗ್ಯಾರಂಟಿಗಳ ಆಮಿಷಗಳನ್ನು ಮೀರಿ ಹಿಂದಿ ಪ್ರಾಬಲ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿನ ನಾಯಕರು ನೀಡುವುದು ಒಂದೇ ಉತ್ತರ: ಮೋದಿ ಕಿ ಗ್ಯಾರಂಟಿ (Modi ki guarantee). ಅಂದರೆ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳನ್ನು ಮೀರಿದ್ದು ನರೇಂದ್ರ ಮೋದಿ (PM Narendra Modi) ಎಂಬ ಗ್ಯಾರಂಟಿ ಎನ್ನುವುದು ಅವರ ನಿಲುವು.

ಚುನಾವಣೆಯ ಫಲಿತಾಂಶಗಳನ್ನು ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಜನರು ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬಲಿಲ್ಲ. ಬದಲಾಗಿ ನರೇಂದ್ರ ಮೋದಿ ಅವರನ್ನೇ ಗ್ಯಾರಂಟಿಯಾಗಿ ಸ್ವೀಕರಿಸಿದರು. ಮೋದಿ ಗ್ಯಾರಂಟಿಯ ಅಂತರ್ಮುಖಿ ಪ್ರವಾಹ ಈ ಮಟ್ಟದಲ್ಲಿ ಇರುತ್ತದೆ ಎಂದು ನಾವು ಕಲ್ಪಿಸಿಕೊಂಡಿರಲೇ ಇಲ್ಲʼʼ ಎಂದು ಛತ್ತೀಸ್‌ ಗಢದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಹೇಳಿದ್ದಾರೆ.

ಛತ್ತೀಸ್‌ ಗಢದ ಜನರು ಮುಖ್ಯಮಂತ್ರಿಭೂಪೇಶ್‌ ಬಘೇಲ್‌ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅವರ ಭ್ರಷ್ಟಾಚಾರ, ಲಿಕ್ಕರ್‌ ಹಗರಣ, ಮಹದೇವ್‌ ಆಪ್‌ ಹಗರಣಗಳು ಕೂಡಾ ಈ ಫಲಿತಾಂಶದಲ್ಲಿ ತಮ್ಮ ಪಾತ್ರವನ್ನು ವಹಿಸಿದೆ ಎಂದು ರಮಣ್‌ ಸಿಂಗ್‌ ಹೇಳಿದರು.

PM Narendra Modi Modi ki guarantee

ಮಧ್ಯಪ್ರದೇಶದಲ್ಲಿ ಬಿಜೆಪಿ ವಿಜಯದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿರುವ ಮತ್ತು ನಾಲ್ಕನೇ ಬಾರಿಗೆ ಸಿಎಂ ಆಗಲಿದ್ದಾರೆ ಎಂಬ ನಿರೀಕ್ಷೆ ಹೊಂದಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕೂಡಾ ಗೆಲುವಿನ ಕ್ರೆಡಿಟನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರ ರ‍್ಯಾಲಿಗಳು ಜನರ ಹೃದಯವನ್ನು ತಟ್ಟಿದವು ಎಂದಿದ್ದಾರೆ. ಪ್ರಧಾನ ಮಂತ್ರಿಗಳ ಸಾರ್ವಜನಿಕ ರ‍್ಯಾಲಿಗಳು, ಜನರಿಗೆ ಅವರು ಮಾಡಿರುವ ಮನವಿಗಳು, ಎಲ್ಲ ಹೃದಯ ಗೆದ್ದಿವೆ. ಇದು ಫಲಿತಾಂಶದಲ್ಲಿ ಪ್ರತಿಫಲನಗೊಂಡಿವೆ ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಮಧ್ಯ ಪ್ರದೇಶದ ಡಬಲ್‌ ಎಂಜಿನ್‌ ಸರ್ಕಾರವು ಕೇಂದ್ರ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ಅದರ ಜತೆಗೆ ಮಧ್ಯ ಪ್ರದೇಶ ರಾಜ್ಯ ಸರ್ಕಾರದ ಯೋಜನೆಗಳು ಕೂಡಾ ಜನರ ಮನಸು ಗೆದ್ದಿವೆ. ಇದರ ಫಲವಾಗಿ ಮಧ್ಯ ಪ್ರದೇಶ ಒಂದು ಕುಟುಂಬದಂತೆ ವರ್ತನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಹೇಳಿದ್ದಾರೆ ಶಿವರಾಜ್‌ ಸಿಂಗ್‌ ಚೌಹಾಣ್‌.

ಇತ್ತ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಅಶ್ವಿನಿ ವೈಷ್ಣವ್‌ ಅವರು, ಭಾರತ ದೇಶಕ್ಕೆ ಮೋದಿ ಅವರ ಗ್ಯಾರಂಟಿಗಳ ಮೇಲೆ ನಂಬಿಕೆ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

PM Narendra Modi Modi ki guarantee

ಮೋದಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ಅದೇನೆಂದರೆ, 2024ರ ಚುನಾವಣೆಯಲ್ಲಿ ಸ್ಪರ್ಧೆ ನಡೆಯುವುದು ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ನೀಡಿರುವ ಗ್ಯಾರಂಟಿಗಳ ನಡುವೆ ಎಂದು ಹೇಳಿದ್ದರು ಮೋದಿ.

ಇದನ್ನೂ ಓದಿ: Rajasthan Election Result: ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಇಲ್ಲಿವೆ ಪ್ರಮುಖ ಕಾರಣಗಳು

ಮೋದಿ ಗ್ಯಾರಂಟಿಯ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೊಟ್ಟಿರುವ ವಿವರಣೆ ಹೀಗಿದೆ: ಜಹಾಂ ಪರ್‌ ದೂಸ್ರೋಂಕಿ ಉಮ್ಮೀದ್‌ ಕಮ್‌ ಹೋ ಜಾತೀ ಹೈ, ವಹೀ ಸೇ ಮೋದಿ ಕಿ ಗ್ಯಾರಂಟಿ ಶುರು ಹೋ ಜಾತೀ ಹೈ, ಔರ್‌ ಇಸ್‌ ಲಿಯೇ ಮೋದಿ ಕಿ ಗ್ಯಾರಂಟಿ ವಾಲಿ ಗಾಡಿ ಕಿ ಧಮ್‌ ಮಚೀ ಹುಯೀ ಹೈ (ಯಾವಾಗ ಉಳಿದವರ ತಾಕತ್ತು ಕಡಿಮೆ ಆಗುತ್ತದೆಯೋ ಆಗ ಮೋದಿಯವರ ಗ್ಯಾರಂಟಿ ಶುರುವಾಗುತ್ತದೆ. ಹೀಗಾಗಿ ಮೋದಿಯ ಗ್ಯಾರಂಟಿಯ ಗಾಡಿ ಇನ್ನಷ್ಟು ಶಕ್ತಿಶಾಲಿಯಾಗಿ ಚಲಿಸುತ್ತಲೇ ಇರುತ್ತದೆ.)

ಈ ನಡುವೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಕೂಡಾ ಮೋದಿಯವರೇ ಗ್ಯಾರಂಟಿಯೇ ಗೆಲುವಿನ ಮೂಲ ಎಂದಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Exit mobile version