ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂನಲ್ಲಿ ಚುನಾವಣೆ ಮುಗಿದಿದೆ. ಗುರುವಾರ ತೆಲಂಗಾಣದಲ್ಲೂ ಚುನಾವಣೆ ಮುಗಿಯಲಿದೆ. ಹಾಗಾಗಿ, ಎಲ್ಲರ ದೃಷ್ಟಿ ಈಗ ಚುನಾವಣೋತ್ತರ ಸಮೀಕ್ಷಾ (Exit Poll) ವರದಿ ಮೇಲಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ತಿಳಿಯಲು ಜನ ಕಾತುರರಾಗಿದ್ದಾರೆ.
ಎಷ್ಟು ಗಂಟೆಗೆ ಎಕ್ಸಿಟ್ ಪೋಲ್?
ಗುರುವಾರ ಸಂಜೆ 6 ಗಂಟೆಗೆ ತೆಲಂಗಾಣ ವಿಧಾನಸಭೆ ಚುನಾವಣೆ ಮುಕ್ತಾಯವಾಗಲಿದ್ದು, ಸಂಜೆ 6.30ರಿಂದ ಚುನಾವಣೋತ್ತರ ಮತಗಟ್ಟೆ ಸಮೀಕ್ಷಾ ವರದಿಯ ಮಾಹಿತಿ ದೊರೆಯಲಿದೆ. ಒಂದೊಂದೇ ರಾಜ್ಯಗಳ ಮಾಹಿತಿ ಲಭ್ಯವಾದಂತೆ ಚುನಾವಣೆ ಫಲಿತಾಂಶದ ಅಂದಾಜು ಚಿತ್ರಣ ದೊರೆಯಲಿದೆ.
ವಿಸ್ತಾರ ನ್ಯೂಸ್‌ನಲ್ಲಿ ಲೈವ್ ಮಾಹಿತಿ
ಪಂಚ ರಾಜ್ಯಗಳ ಮತಗಟ್ಟೆ ಸಮೀಕ್ಷೆಯ ಪಿನ್ ಟು ಪಿನ್ ಮಾಹಿತಿಯನ್ನು ವಿಸ್ತಾರ ನ್ಯೂಸ್ ಲೈವ್ ಆಗಿ ನೀಡುತ್ತದೆ. ಮತಗಟ್ಟೆ ಸಮೀಕ್ಷೆಯ ಮಾಹಿತಿಯನ್ನು ವಿಸ್ತಾರ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. ಹಾಗೆಯೇ, ವೆಬ್‌ಸೈಟ್‌ನಲ್ಲಿ ಪ್ರತಿಕ್ಷಣದ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಧ್ಯಪ್ರದೇಶದಲ್ಲಿ ಯಾರಿಗೆ ಜಯ?
ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ.
ಒಟ್ಟು ಸ್ಥಾನ 230
ಮ್ಯಾಜಿಕ್ ನಂಬರ್ 116
ರಾಜಸ್ಥಾನದ ರಾಜ ಯಾರು?
ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ.
ಒಟ್ಟು ಕ್ಷೇತ್ರ: 200
ಮ್ಯಾಜಿಕ್ ನಂಬರ್: 101
ಛತ್ತೀಸ್‌ಗಢದಲ್ಲಿ ಬಿಗ್ ಫೈಟ್
ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ.
ಒಟ್ಟು ಕ್ಷೇತ್ರ: 90
ಮ್ಯಾಜಿಕ್ ನಂಬರ್: 46
ತೆಲಂಗಾಣ, ಮಿಜೋರಾಂನಲ್ಲೂ ಕದನ ಕುತೂಹಲ
ತೆಲಂಗಾಣ ಹಾಗೂ ಮಿಜೋರಾಂನಲ್ಲೂ ಸರ್ಕಾರ ರಚನೆಗೆ ಹಲವು ಕಸರತ್ತು ನಡೆಸಲಾಗಿದ್ದು, ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ತೆಲಂಗಾಣದಲ್ಲಿ ಬಿಆರ್‌ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಫೈಟ್ ಇದೆ. ಅತ್ತ, ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಹ್ಯಾಟ್ರಿಕ್ ಕನಸು ಚಿಗುರೊಡೆದಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರ ಸಾಧನೆಯ ಜಾಹೀರಾತಿಗೆ ಚುನಾವಣಾ ಆಯೋಗ ಬ್ರೇಕ್!
ಮುಖ್ಯಮಂತ್ರಿ ಜೊರಾಮ್‌ಥಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವು ಮಿಜೋರಾಂನಲ್ಲಿ ಬಲಿಷ್ಠವಾಗಿದೆ. ಕೇಂದ್ರದಲ್ಲಿ ಮಿಜೋ ನ್ಯಾಷನಲ್ ಫ್ರಂಟ್, ಎನ್‌ಡಿಎ ಜತೆ ಕೈಜೋಡಿಸಿದರೂ ಇಲ್ಲಿ ಬಿಜೆಪಿಯ ಒಬ್ಬರೇ ಶಾಸಕರಿದ್ದಾರೆ. ಕಾಂಗ್ರೆಸ್ ಕೂಡ ಮೂರನೇ ಸ್ಥಾನದಲ್ಲಿದೆ. ಹಾಗಾಗಿ, ಈ ಬಾರಿ ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಇದೆ.
ತೆಲಂಗಾಣ
ಒಟ್ಟು ಕ್ಷೇತ್ರ 119
ಮ್ಯಾಜಿಕ್ ನಂಬರ್ 60
ಮಿಜೋರಾಂ
ಒಟ್ಟು ಕ್ಷೇತ್ರ: 40
ಮ್ಯಾಜಿಕ್ ನಂಬರ್: 21
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ