Site icon Vistara News

Assembly Elections 2023: ಛತ್ತೀಸ್‌ಗಢ, ಮಿಜೋರಾಂಗಳಲ್ಲಿ ವಿಧಾನಸಭೆಗೆ ಮತದಾನ ಆರಂಭ

assembly election 2023

ಹೊಸದಿಲ್ಲಿ: ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳು ಒಂದು ತಿಂಗಳ ಅವಧಿಯ ವಿಧಾನಸಭೆ ಚುನಾವಣಾ (Assembly elections 2023) ಸಮರ ಅಂತಿಮ ಘಟ್ಟಕ್ಕೆ ಇಂದು ಕಾಲಿಟ್ಟಿವೆ. 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಯಲ್ಲಿ (Chhattisgarh Assembly) 20 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯಲಿದ್ದು, 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ (Mizoram Assembly) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಛತ್ತೀಸ್‌ಗಢದಲ್ಲಿ, ಮುಖ್ಯವಾಗಿ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಹೋರಾಟವಿದೆ. ಆದರೆ ಮಿಜೋರಾಂನಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ಹಿಡಿತವಿಲ್ಲ. ಈ ಈಶಾನ್ಯ ರಾಜ್ಯದ ರಾಜಕೀಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) ಮತ್ತು ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪ್ರಬಲ ಹಿಡಿತವನ್ನು ಹೊಂದಿವೆ.

ಮಿಜೋರಾಂನಲ್ಲಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದು, ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ 223 ಅಭ್ಯರ್ಥಿಗಳು ಮೊದಲ ಹಂತದಲ್ಲಿ ಸ್ಪರ್ಧಿಸಲಿದ್ದಾರೆ. ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಮತದಾನ ಹಾಗೂ ಮಧ್ಯಪ್ರದೇಶದಲ್ಲಿ ಒಂದೇ ಹಂತದ ಮತದಾನ ನವೆಂಬರ್ 17ರಂದು ನಡೆಯಲಿದೆ. ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ನವೆಂಬರ್ 23 ಮತ್ತು 30ರಂದು ಒಂದೇ ಹಂತದ ಮತದಾನ ನಡೆಯಲಿದೆ. ಎಲ್ಲಾ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.

ಛತ್ತೀಸ್‌ಗಢದ ಚುನಾವಣೆ ಮತದಾನಕ್ಕೆ ಇನ್ನೇನು ಕೆಲವೇ ದಿನಗಳಿದೆ ಎಂದಾಗ ಮಹದೇವ್‌ ಬೆಟ್ಟಿಂಗ್‌ ಆಪ್‌ ಹಗರಣ ಸ್ಫೋಟಗೊಂಡಿದ್ದಲ್ಲದೆ, ಅಲ್ಲಿನ ಮುಖ್ಯಮಂತ್ರಿ ಭೂಪೇಶ್‌ ಬಘೇಲಾ ಅವರ ಹೆಸರನ್ನೂ ಕೆಡಿಸಿದೆ. 580 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿದೆ. 1ನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದ್ದವು. ‘ಭ್ರಷ್ಟಾಚಾರ’ ಮತ್ತು ಹೆಚ್ಚುತ್ತಿರುವ ಭತ್ತದ ಬೆಲೆಗೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್ ಅನ್ನು ಗುರಿಯಾಗಿಸಿತ್ತು. ಕಾಂಗ್ರೆಸ್ ಚುನಾವಣಾ ಭರವಸೆಗಳಾದ ಜಾತಿ ಗಣತಿ, ಸಾಲ ಮನ್ನಾ, ಗ್ಯಾಸ್ ಸಿಲಿಂಡರ್ ಸಬ್ಸಿಡಿ, ನಿರುದ್ಯೋಗ ನಿವಾರಣೆ, ಉದ್ಯೋಗ ಹೆಚ್ಚಳ ಮತ್ತು ಬಡವರಿಗೆ ವಸತಿ ಮುಂತಾದ ಭರವಸೆಗಳನ್ನು ನೀಡಿದೆ.

ಮಿಜೋರಾಂನ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಪ್ರಚಾರದ ಸಮಯದಲ್ಲಿ ಜನರ ʼಗುರುತಿನ’ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಮೂಲಸೌಕರ್ಯಗಳ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಮುಖಾಮುಖಿಯಾಗಿವೆ. ರಾಜ್ಯದಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್), ಕಾಂಗ್ರೆಸ್ ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ ನಡುವೆ ಪ್ರಮುಖ ಕದನ ನಡೆಯುತ್ತಿದ್ದು, ಬಿಜೆಪಿ ʼಕಿಂಗ್ ಮೇಕರ್’ ಆಗಿ ಹೊರಹೊಮ್ಮಲು ಉತ್ಸುಕವಾಗಿದೆ.

ಮಿಜೋರಾಂನಾದ್ಯಂತ ಒಟ್ಟು 1,276 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 149 ಗುಡ್ಡಗಾಡು ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. 30 ಮತಗಟ್ಟೆಗಳನ್ನು ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ನಿರ್ಣಾಯಕ ಮತ್ತು ದುರ್ಬಲ ಎಂದು ಘೋಷಿಸಲಾಗಿದೆ. ವಿಧಾನಸಭಾ ಕ್ಷೇತ್ರಗಳ ಮತದಾನಕ್ಕೂ ಮುನ್ನ ಮ್ಯಾನ್ಮಾರ್‌ನೊಂದಿಗಿನ 510 ಕಿಮೀ ಉದ್ದದ ಅಂತಾರಾಷ್ಟ್ರೀಯ ಗಡಿ ಮತ್ತು ಬಾಂಗ್ಲಾದೇಶದೊಂದಿಗಿನ 318 ಕಿಮೀ ಗಡಿಯನ್ನು ಮುಚ್ಚಲಾಗಿದೆ.

ಇದನ್ನೂ ಓದಿ: Assembly Elections 2023 | ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದ ರಾಜಕೀಯ ಸ್ಥಿತಿ ಹೇಗಿದೆ? ಯಾವ ಪಕ್ಷದ ಬಲ ಹೆಚ್ಚಿದೆ?

Exit mobile version