Site icon Vistara News

Operation TRS MLAs | ತೆಲಂಗಾಣದಲ್ಲಿ ಟಿಆರ್‌ಎಸ್‌ನ 4 ಶಾಸಕರ ಖರೀದಿಗೆ 150 ಕೋಟಿ ರೂ. ಆಫರ್‌, ಯಾವ ಪಕ್ಷ ಸಾರಥಿ?

KCR

ಹೈದರಾಬಾದ್:‌ ತೆಲಂಗಾಣದಲ್ಲಿ ಬಿಜೆಪಿಯು 2019ರಿಂದಲೂ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (TRS)ಯ ಶಾಸಕರನ್ನು ಖರೀದಿಸಲು “ಆಪರೇಷನ್‌ ಕಮಲ”ಕ್ಕೆ ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಟಿಆರ್‌ಎಸ್‌ನ ನಾಲ್ವರು ಶಾಸಕರ ಖರೀದಿಗೆ (Operation TRS MLAs) 100-150 ಕೋಟಿ ರೂ. ಆಫರ್‌ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಭೇದಿಸಲಾಗಿದ್ದು, ಫಾರ್ಮ್‌ಹೌಸ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಶಾಸಕರ ಖರೀದಿಗಾಗಿ 100-150 ಕೋಟಿ ರೂ. ಆಫರ್‌ ನೀಡಲು ಮುಂದಾಗಿದ್ದರು. ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ” ಎಂದು ಹೈದರಾಬಾದ್‌ ಪೊಲೀಸ್‌ ಆಯುಕ್ತ ಸ್ಟೀಫನ್‌ ರವೀಂದ್ರ ಮಾಹಿತಿ ನೀಡಿದರು.

ಆಫರ್‌ ಪಡೆದ ಶಾಸಕರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಪೊಲೀಸರು ಅಜೀಜ್‌ ನಗರದ ಫಾರ್ಮ್ಸ್‌ಹೌಸ್‌ ಮೇಲೆ ದಾಳಿ ನಡೆಸಿದ್ದಾರೆ. ಬಂಧಿತರನ್ನು ಹರಿಯಾಣದ ಅರ್ಚಕ ಸತೀಶ್‌ ಶರ್ಮಾ, ತಿರುಪತಿ ಅರ್ಚಕ ಡಿ.ಸಿಂಹಯಾಜಿ ಹಾಗೂ ಸಿಂಹಯಾಜಿ ಶಿಷ್ಯ ರೋಹಿತ್‌ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ನಕಲಿ ಗುರುತಿನ ಚೀಟಿಗಳನ್ನು ಇಟ್ಟುಕೊಂಡು ನಗರದಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇವರು ಯಾವ ಪಕ್ಷದ ಪರವಾಗಿ ಶಾಸರಕನ್ನು ಖರೀದಿಸಲು ಮುಂದಾಗಿದ್ದರು ಎಂಬುದು ತಿಳಿದುಬಂದಿಲ್ಲ. ತೆಲಂಗಾಣದಲ್ಲಿ ಮುಂದಿನ ವರ್ಷ (2023, ಡಿಸೆಂಬರ್)‌ ವಿಧಾನಸಭೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ | ಜಾರ್ಖಂಡ್‌ ಶಾಸಕರು ಗಿಫ್ಟ್‌ ತಗೊಳ್ಳಿಕ್ಕೆ ಹೋಗ್ತಿದ್ರಂತೆ! ಅರೆಸ್ಟ್‌ ಆದ ಮೂವರೂ ಕಾಂಗ್ರೆಸ್‌ನಿಂದ ಸಸ್ಪೆಂಡ್!

Exit mobile version