ಸಿಡ್ನಿ, ಆಸ್ಟ್ರೇಲಿಯಾ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ (Consulate General In Bengaluru) ಕಚೇರಿ ಆರಂಭಿಸುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರು ಹೇಳಿದ್ದಾರೆ. ಇದರಿಂದ ದೇಶದ ವ್ಯವಹಾರಗಳನ್ನು ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಮತ್ತು ನಾವೀನ್ಯತೆಯ ವ್ಯವಸ್ಥೆಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಬೆಂಗಳೂರಲ್ಲಿ ಆಸ್ಟ್ರೇಲಿಯಾ ಹೊಸ ಕಾನ್ಸುಲೇಟ್ ಜನರಲ್ ತೆರೆಯಲು ಮುಂದಾಗಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ. ಉಭಯ ದೇಶಗಳ ನಡುವೆ ಸಂಪರ್ಕಕ್ಕೆ, ವ್ಯವಹಾರಕ್ಕೆ ಈ ಕಚೇರಿಯಿಂದ ನೆರವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು ಕಾನ್ಸುಲೇಟ್ ಕಚೇರಿಯು ಸ್ಥಾಪನೆಯು ಆಸ್ಟ್ರೇಲಿಯಾದಿಂದ ಭಾರತದಲ್ಲಿ ಇರುವ ಐದನೇ ರಾಜತಾಂತ್ರಿಕ ಕಚೇರಿಯಾಗಿರಲಿದೆ. ಇಲ್ಲಿಗೆ ಭೇಟಿ ನೀಡಿ ಇಂತಹ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬರಲು ನಾನು ಎದುರು ನೋಡುತ್ತಿದ್ದೇನೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಹೇಳಿದರು.
ಸಂಪರ್ಕ, ವಲಸೆ ಮತ್ತು ಹಸಿರು ಹೈಡ್ರೋಜನ್ ಕಾರ್ಯಪಡೆಯ ಕುರಿತು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡ ನಂತರ, ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬ್ರಿಸ್ಬೇನ್‌ನಲ್ಲಿ ಶೀಘ್ರವೇ ಕಾನ್ಸುಲೇಟ್ ಸ್ಥಾಪನೆ ಘೋಷಣೆ ಮಾಡಿದ ಮೋದಿ
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಮೋಡಿ ಮಾಡಿದ್ದಾರೆ. ಸಿಡ್ನಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಮಾತನಾಡಿದರು. ಅಲ್ಲದೆ, ಇದೇ ವೇಳೆ ಮೋದಿ ಅವರು ಬ್ರಿಸ್ಬೇನ್‌ನಲ್ಲಿ ಭಾರತದ ಕಾನ್ಸುಲೇಟ್ ಕಚೇರಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್ ಜನಪ್ರಿಯತೆಗೆ ಹೋಲಿಕೆ
“ಸುಮಾರು 20 ಸಾವಿರ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, “ಬ್ರಿಸ್ಬೇನ್‌ನಲ್ಲಿರುವ ಸಾವಿರಾರು ಭಾರತೀಯರ ಕನಸು ನನಸಾಗುವ ಸಮಯ ಬಂದಿದೆ. ಇಷ್ಟು ದಿನಗಳ ನಿಮ್ಮ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗಿದೆ. ನಾನು ಇಲ್ಲಿಗೆ ಸುಮ್ಮನೆ ಬಂದಿಲ್ಲ. ನಿಮಗಾಗಿ ಒಂದು ಘೋಷಣೆಯೊಂದನ್ನು ಹೊತ್ತು ತಂದಿದ್ದೇನೆ. ಶೀಘ್ರದಲ್ಲಿಯೇ ಬ್ರಿಸ್ಬೇನ್‌ನಲ್ಲಿ ಕಾನ್ಸುಲೇಟ್ ಕಚೇರಿಯನ್ನು ನಿರ್ಮಿಸಲಾಗುವುದು” ಎಂದು ಘೋಷಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.